ಸದ್ಯಕ್ಕೆ ನಿರಾಳ

7

ಸದ್ಯಕ್ಕೆ ನಿರಾಳ

Published:
Updated:

ಪಳನಿಯಪ್ಪ ಚಿದಂಬರಂ ಅವರನ್ನು 2ಜಿ ಹಗರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಲು ಆಧಾರಗಳಿಲ್ಲ ಎಂದು ಸಿಬಿಐ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪು, ಈಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ನಿಂದ ಟೀಕೆಗೆ ಗುರಿಯಾಗಿದ್ದ ಕೇಂದ್ರದ ಯುಪಿಎ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.



ಈ ಹಗರಣ ಬಯಲಿಗೆ ಬಂದ ದಿನದಿಂದಲೂ ಚಿದಂಬರಂ ಬೆಂಬಲಕ್ಕೆ ನಿಂತಿದ್ದ ಕಾಂಗ್ರೆಸ್ ಪಕ್ಷಕ್ಕೆ, ಈಗ ನಡೆದಿರುವ ಚುನಾವಣಾ ಪ್ರಚಾರದಲ್ಲಿ ಹೆಚ್ಚಿನ ಸ್ಥೈರ್ಯದಿಂದ ಮತದಾರರನ್ನು ಎದುರಿಸುವ ನೈತಿಕ ಬಲ ಬರುವಂತಾಗಿದೆ.



`ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಎರಡು ತೀರ್ಮಾನಗಳಲ್ಲಿ ಚಿದಂಬರಂ ಭಾಗಿಯಾಗಿದ್ದಾರೆ. ಆದರೆ, ತೀರ್ಮಾನ ಕೈಗೊಂಡ ಸಭೆಯಲ್ಲಿ ಭಾಗಿಯಾಗಿರುವುದು ಕ್ರಿಮಿನಲ್ ಅಪರಾಧವಲ್ಲ~ ಎಂದು ಸಿಬಿಐ ವಿಚಾರಣಾ ನ್ಯಾಯಾಲಯದ ನ್ಯಾ. ಒ.ಪಿ. ಸೈನಿ ಅಭಿಪ್ರಾಯಪಟ್ಟು, `ಚಿದಂಬರಂ ವೈಯಕ್ತಿಕವಾಗಿ ಯಾವುದೇ ಲಾಭ ಪಡೆಯದೆ ಇರುವುದರಿಂದ ಕ್ರಿಮಿನಲ್ ಪಿತೂರಿಯಲ್ಲಿ ಸೇರಿಲ್ಲ~ ಎಂದು ಹೇಳಿರುವುದು ಯುಪಿಎಗೆ ಸಿಕ್ಕಿದ ತಾಂತ್ರಿಕ ಗೆಲುವು.

 

ಆದರೆ, ಸಮ್ಮಿಶ್ರ ಸರ್ಕಾರದ ಮೈತ್ರಿ ಧರ್ಮದ ನೆಪದಲ್ಲಿ ಡಿಎಂಕೆ ಪ್ರತಿನಿಧಿಯಾದ ಸಚಿವ ಎ.ರಾಜಾ ಸ್ವೇಚ್ಛೆಯಿಂದ ನಿರಂಕುಶ ತೀರ್ಮಾನ ಕೈಗೊಂಡು ಕೋಟ್ಯಂತರ ರೂಪಾಯಿ ಲೂಟಿ ಮಾಡಲು ಅವಕಾಶ ನೀಡಿದ ನೈತಿಕ ಹೊಣೆಗಾರಿಕೆಯಿಂದ ಚಿದಂಬರಂ ಅವರಷ್ಟೇ ಅಲ್ಲ, ಪ್ರಧಾನಿ ಮನಮೋಹನ್‌ಸಿಂಗ್ ಅವರೂ ಸಚಿವ ಸಂಪುಟದ ಸಾಮೂಹಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ.



ಅಪರಾಧ ದಂಡ ಸಂಹಿತೆಯನ್ನು ವಿಚಾರಣಾ ನ್ಯಾಯಾಲಯ ವ್ಯಾಖ್ಯಾನಿಸಿ ಅನ್ವಯಿಸಿದಾಗ ವ್ಯಕ್ತವಾದ ಫಲಿತಾಂಶ, ಹೈಕೋರ್ಟ್ ಇಲ್ಲವೇ ಸುಪ್ರೀಂ ಕೋರ್ಟ್‌ನಲ್ಲಿ ಮರುಕಳಿಸುವುದೆಂದು ಹೇಳಲಾಗದು. ಆದರೆ, ಈ ತೀರ್ಪಿನಿಂದ ಸದ್ಯಕ್ಕೆ ಕೇಂದ್ರ ಗೃಹಸಚಿವ ಚಿದಂಬರಂ ಅವರಂತೆಯೇ ಕೇಂದ್ರದ ಯುಪಿಎ ಸರ್ಕಾರಕ್ಕೂ ನಿರಾಳವಾಗಿದೆ.





ಯುಪಿಎ ಸರ್ಕಾರ 2008ರಲ್ಲಿ ಮಾಡಿದ 2ಜಿ ತರಂಗಾಂತರ ಹಂಚಿಕೆ `ಅಕ್ರಮ, ಸಂವಿಧಾನಬಾಹಿರ~ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಈಗಾಗಲೇ ತೀರ್ಪು ನೀಡಿ ಹಂಚಿಕೆಯನ್ನು ರದ್ದುಪಡಿಸಿದೆ. ಅಂದರೆ, ಪ್ರಕರಣ ಗಂಭೀರವಾಗಿರುವುದು ಸ್ಪಷ್ಟವಾಗಿದೆ. ಇಡೀ ಹಗರಣವನ್ನು ನ್ಯಾಯಾಲಯಕ್ಕೆ ತಂದಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ, ಚಿದಂಬರಂ ಅವರನ್ನು ಆರೋಪಿಯನ್ನಾಗಿ ಪರಿಗಣಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ.

 

ಸಿಬಿಐ ವಿಚಾರಣಾ ನ್ಯಾಯಾಲಯದಲ್ಲಿ ಹಗರಣದ ವಿಚಾರಣೆಯೂ ಮುಂದುವರಿಯಲಿದೆ. ಇದುವರೆಗೆ ಚಿದಂಬರಂ ಬೆಂಬಲಕ್ಕೆ ನಿಂತಿದ್ದ ಸರ್ಕಾರ ಈ ಪ್ರಕರಣದಲ್ಲಿ ಇನ್ನು ಮುಂದೆ ಸಿಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಕ್ಕೆ ಬಿಡಬೇಕು. ಏಕೆಂದರೆ, ಹಗರಣದ ಪ್ರಾರಂಭದ ಹಂತದಿಂದಲೇ ಚಿದಂಬರಂ ಪಾತ್ರದ ಬಗ್ಗೆ ತನಿಖೆ ನಡೆಸುವುದಕ್ಕೆ ಸಿಬಿಐ ನಿರಾಕರಿಸಿತ್ತು.



ಸಿಬಿಐ ರಾಜಕೀಯ ಒತ್ತಡದಿಂದ ಮುಕ್ತವಾಗದೆ, ಯಾವುದೇ ಭ್ರಷ್ಟಾಚಾರ ಹಗರಣದಲ್ಲಿ ಸತ್ಯಾಂಶ ಹೊರಬರುವುದಿಲ್ಲ ಎಂಬುದು ಇದುವರೆಗಿನ ಅನುಭವ. ಈ ಪ್ರಕರಣವೂ ಅದೇ ಹಾದಿ ಹಿಡಿಯಬಾರದು.



ಪಿತೂರಿ, ವಂಚನೆ, ಸಾರ್ವಜನಿಕ ಹಣದ ಲೂಟಿಗೆ ಮೇಲುನೋಟಕ್ಕೆ ಸಾಕ್ಷ್ಯಾಧಾರಗಳು ಸಿಕ್ಕಿರುವ ಈ ಹಗರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ರಾಜಕೀಯ ಅಧಿಕಾರ ಸಾರ್ವಜನಿಕ ಸಂಪತ್ತನ್ನು ದೋಚುವ ಪರವಾನಗಿಯಲ್ಲ ಎಂಬುದು ರಾಜಕಾರಣಿಗಳಿಗೆ ಅರಿವಾಗಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry