ಸನಮ್ ಸಿಂಗ್ ಮಡಿಲಿಗೆ ಪ್ರಶಸ್ತಿ

7

ಸನಮ್ ಸಿಂಗ್ ಮಡಿಲಿಗೆ ಪ್ರಶಸ್ತಿ

Published:
Updated:
ಸನಮ್ ಸಿಂಗ್ ಮಡಿಲಿಗೆ ಪ್ರಶಸ್ತಿ

ದಾವಣಗೆರೆ: ಡೇವಿಸ್ ಕಪ್‌ನಲ್ಲಿ ಆಡಿದ ಅನುಭವ ಹೊಂದಿರುವ ಚಂಡಿಗಡದ ಸನಮ್ ಸಿಂಗ್ ಐಟಿಎಫ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್ ಫೈನಲ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ಸ್ಥಳೀಯ ಅಭಿಮಾನಿಗಳ ಮನ ಗೆಲ್ಲುವಲ್ಲಿಯೂ ಯಶಸ್ವಿಯಾದರು.ನಗರದ ಹೈಸ್ಕೂಲ್ ಮೈದಾನದ ಸಮೀಪದ ಟೆನಿಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಸನಮ್ 6-2, 7-6 ರಲ್ಲಿ ಶ್ರೀರಾಮ ಬಾಲಾಜಿ ಅವರನ್ನು ಮಣಿಸಿ ಗೆಲುವಿನ ನಗೆ ಬೀರಿದರು. ಇದರಿಂದ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್, ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ, ಜಿಲ್ಲಾ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಒಂದು ವಾರ ನಡೆದ ಐಟಿಎಫ್ ಟೆನಿಸ್‌ಗೆ ತೆರೆ ಬಿತ್ತು.10 ವರ್ಷಗಳ ನಂತರ ದಾವಣಗೆರೆಯಲ್ಲಿ ಈ ಟೂರ್ನಿ ನಡೆದ ಕಾರಣ ಇಲ್ಲಿನ ಟೆನಿಸ್ ಕ್ರೀಡಾಪ್ರೇಮಿಗಳ ಸಂಭ್ರಮವನ್ನು ಹೆಚ್ಚಿಸಿತ್ತು. ಏರಿಳಿತದ ಹಾದಿಯಂತೆ ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಪಡೆದ 24 ವರ್ಷದ ಸನಮ್ ಎರಡನೇ ಸೆಟ್‌ನ ಒಂದು ಹಂತದಲ್ಲಿ ಇಬ್ಬರೂ ಆಟಗಾರರು 3-3ರಲ್ಲಿ ಸಮಬಲ ಸಾಧಿಸಿದ್ದರು. ನಂತರ ಸನಮ್ ಚಿತ್ತಾಕರ್ಷಕ ಆಟ ಪ್ರದರ್ಶಿಸಿ ಬಾಲಾಜಿ ಅವರನ್ನು ಸೋಲಿಸಿದರು.ಚಾಂಪಿಯನ್ ಆದ ಸನಮ್ ಪ್ರಶಸ್ತಿ ಫಲಕ ಹಾಗೂ ರೂ. 70,200 ನಗದು ಬಹುಮಾನ, ರನ್ನರ್ ಪ್ರಶಸ್ತಿ ಪಡೆದ ಶ್ರೀರಾಮ್ ಬಾಲಾಜಿಗೆ ಪ್ರಶಸ್ತಿ ಹಾಗೂ ರೂ 48,600 ನಗದು ಬಹುಮಾನ ನೀಡಲಾಯಿತು.ಫೈನಲ್ ಹಣಾಹಣಿಯಲ್ಲಿ  ಇಬ್ಬರೂ ಭಾರತೀಯ ಆಟಗಾರರೇ ಕಣದಲ್ಲಿದ್ದ ಕಾರಣ ಅಭಿಮಾನಿಗಳು ಸನಮ್ ಹಾಗೂ ಬಾಲಾಜಿ ಇಬ್ಬರಿಗೂ ಸಮವಾಗಿ ಬೆಂಬಲ ನೀಡಿದರು.`ಪಂದ್ಯದ ವೇಳೆ ಗೆಲುವಿನ ವಿಶ್ವಾಸದಿಂದಲೇ ಆಡಿದೆ. ಟೂರ್ನಿ ಆಯೋಜನೆ ಮಾಡಿದ್ದ ರೀತಿ ಖುಷಿ ನೀಡಿದೆ. ಪಂದ್ಯದ ಆರಂಭದಿಂದಲೂ ಅಂಕ ಗಳಿಸುವತ್ತ ಗಮನ ಹರಿಸಿದ ಕಾರಣ ಗೆಲುವು ಸಾಧ್ಯವಾಯಿತು' ಎಂದು ಸನಮ್ ಸಂತಸ ವ್ಯಕ್ತಪಡಿಸಿದರು.`ಸನಮ್ ಉತ್ತಮವಾಗಿ ಆಡಿದರು. ಕೆಲ ಸಂದರ್ಭಗಳಲ್ಲಿ ನನ್ನ ಆಟ ಅಷ್ಟೊಂದು ಚೆನ್ನಾಗಿರಲಿಲ್ಲ. ಎರಡನೇ ಸೆಟ್‌ನಲ್ಲಿ ಕೆಲ ಸರ್ವ್‌ಗಳೂ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಆದ್ದರಿಂದ ಪಂದ್ಯ ಕೈಚೆಲ್ಲಿ ಹೋಯಿತು' ಎಂದು ಶ್ರೀರಾಮ್ ಬಾಲಾಜಿ ಹೇಳಿದರು.ದಶಕದ ಬಳಿಕ ನಗರದಲ್ಲಿ ಐಟಿಎಫ್ ಟೆನಿಸ್ ಟೂರ್ನಿ ಆಯೋಜನೆಯಾಗಿದ್ದ ಕಾರಣ ಇಲ್ಲಿನ ವ್ಯವಸ್ಥೆಯ ಬಗ್ಗೆ ಕ್ರೀಡಾಪಟುಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಐಟಿಎಫ್ ಟೂರ್ನಿ ನಡೆಯಲಿರುವ ಧಾರವಾಡದತ್ತ ಕ್ರೀಡಾಪಟುಗಳು ಅದೃಷ್ಟ ಪರೀಕ್ಷೆಗೆ ಹೊರಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry