ಸನಮ್ ಸಿಂಗ್ ಮುಡಿಗೆ ಪ್ರಶಸ್ತಿ

7
ಐಟಿಎಫ್: ರಾಮ್‌ಕುಮಾರ್‌ಗೆ ಚೊಚ್ಚಲ ಟ್ರೋಫಿಯ ಕನಸು ಭಗ್ನ

ಸನಮ್ ಸಿಂಗ್ ಮುಡಿಗೆ ಪ್ರಶಸ್ತಿ

Published:
Updated:

ಧಾರವಾಡ: ನಿರ್ಣಾಯಕ ಟೈಬ್ರೇಕ್‌ನಲ್ಲಿ ಎದುರಾಳಿಯನ್ನು ಬಗ್ಗುಬಡಿದ ಹರಿಯಾಣದ ಸನಮ್ ಸಿಂಗ್ ಇಲ್ಲಿನ ರಾಜಾಧ್ಯಕ್ಷ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ಧಾರವಾಡ ಓಪನ್ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ತಮ್ಮ ವೃತ್ತಿಜೀವನ ಐದನೇ ಪ್ರಶಸ್ತಿಯೊಂದಿಗೆ 71,500 ರೂಪಾಯಿಗಳನ್ನು ತಮ್ಮದಾಗಿಸಿಕೊಂಡರು.102 ನಿಮಿಷಗಳ ಕಾಲ ನಡೆದ ಫೈನಲ್ ಕದನದಲ್ಲಿ ಡೆವಿಸ್ ಕಪ್ ಆಟಗಾರ ಸನಮ್ 6-2, 7-5(4)ರಲ್ಲಿ ಗೆಲುವು ಸಾಧಿಸುವುದರೊಂದಿಗೆ ಚೊಚ್ಚಲ ಪ್ರಶಸ್ತಿಯ ಸನಿಹಕ್ಕೆ ಬಂದಿದ್ದ ತಮಿಳುನಾಡಿನ ರಾಮ್‌ಕುಮಾರ್ ರಾಮನಾಥನ್ ಅವರ ಕನಸನ್ನು ಮುರಿದರು. ಇದರೊಟ್ಟಿಗೆ ಸತತ ಎರಡನೇ ಪ್ರಶಸ್ತಿ ಜೊತೆಗೆ 18 ಅಂಕಗಳನ್ನೂ ಪಡೆದರು. ದಾವಣಗೆರೆ ಓಪನ್‌ನಲ್ಲೂ ಸನಮ್ ಚಾಂಪಿಯನ್ ಆಗಿದ್ದರು. 17ರ ಹರೆಯದ ರಾಮ್ 900 ಅಮೆರಿಕನ್ ಡಾಲರ್ ಹಾಗೂ 12 ಅಂಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.ಪಂದ್ಯದ ಮೊದಲ ಸೆಟ್‌ದ ಮೊದಲ ಗೇಮ್‌ನಲ್ಲೇ ರಾಮ್‌ರ ಸರ್ವ್ ಮುರಿದ ಸನಮ್ ಅಲ್ಲಿಂದ ಮುನ್ನಡೆ ಕಾಪಾಡಿಕೊಳ್ಳುತ್ತಲೇ ಬಂದರು.  ಕೇವಲ 30 ನಿಮಿಷಗಳಲ್ಲೇ ಅನಾಯಾಸವಾಗಿ ಸೆಟ್ ತಮ್ಮದಾಗಿಸಿಕೊಂಡರು.  ಆದರೆ ಮುಂದಿನ ಸೆಟ್‌ನಲ್ಲಿ ಸನಮ್ ತಕ್ಕ ಪ್ರತಿರೋಧ ಎದುರಿಸಬೇಕಾಯಿತು.

ತಮ್ಮ ವೇಗ ಹಾಗೂ ಸರ್ವ್‌ನಲ್ಲಿ ಲಯ ಕಂಡುಕೊಂಡ ರಾಮ್ ಏಳನೇ ಗೇಮ್‌ನಲ್ಲಿ ತಿರುಗಿಬಿದ್ದರಾದರೂ 3 ಡ್ಯೂಸ್, ಗೇಮ್ ಪಾಯಿಂಟ್‌ಗಳ ಬಳಿಕವೂ ಯಶಸ್ಸು ಕಾಣದಾದರು. 9ನೇ ಗೇಮ್ ಕಳೆದುಕೊಂಡಾಗಲಂತೂ ರಾಮ್ ಹತಾಶರಾಗಿ ರಾಕೆಟ್ ಅನ್ನು ನೆಲಕ್ಕೆ ಕುಕ್ಕಿ ಅಂಪೈರ್‌ರಿಂದ ಎಚ್ಚರಿಕೆಯನ್ನೂ ಪಡೆದರು. ಆದರೆ 10ನೇ ಗೇಮ್‌ನಲ್ಲಿ ಯಶ ಕಾಣುವುದರೊಂದಿಗೆ ಪಂದ್ಯವನ್ನು ಟೈಬ್ರೇಕ್‌ಗೆ ಕೊಂಡೊಯ್ದರು.ಇಲ್ಲಿಯೂ ರಾಮ್‌ಕುಮಾರ್ ಮೊದಲ ನಾಲ್ಕು ಪಾಯಿಂಟ್ ಮುನ್ನಡೆಯೊಂದಿಗೆ ಸೆಟ್ ಸಮನಾಗಿಸಿಕೊಳ್ಳುವ ಯತ್ನ ನಡೆಸಿದರು. ಆದರೆ ಮುಂದೆ ಸನಮ್ ಎದುರಾಳಿಗೆ ಒಂದು ಗೆಲುವಿನ ಅವಕಾಶವನ್ನೂ ನೀಡದೇ ಸೆಟ್ ಹಾಗೂ ಪಂದ್ಯ ತಮ್ಮದಾಗಿಸಿಕೊಂಡರು.

`ಆತ್ಮವಿಶ್ವಾಸ ಹೆಚ್ಚಿಸಿದೆ': ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸನಮ್ `ಸತತ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ' ಎಂದರು. ಸ್ಪರ್ಧೆ ಉತ್ತಮವಾಗಿತ್ತು. ಎರಡನೇ ಸೆಟ್‌ನಲ್ಲಂತೂ ರಾಮ್ ತಿರುಗಿಬಿದ್ದಿದ್ದರು. ಆದರೂ ವಿಶ್ವಾಸದಿಂದ ಮುನ್ನಡೆದೆ. ಆತನಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶವೂ ಇದೆ ಎಂದು ಎದುರಾಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಸತತ ಮೂರನೇ ಪ್ರಶಸ್ತಿ ಗೆಲ್ಲುವತ್ತ ಗಮನ ಕೇಂದ್ರೀಕರಿಸುವುದಾಗಿ ಹೇಳಿದರು.`ಇದೊಂದು ಉತ್ತಮ ಅನುಭವ. ಪ್ರಶಸ್ತಿ ಕೈತಪ್ಪಿದೆಯಾದರೂ ಕಳೆದುಕೊಂಡಿದ್ದು ಏನಿಲ್ಲ. ನನ್ನ ಪ್ರದರ್ಶನವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುತ್ತೇನೆ' ಎಂದು ರಾಮ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.ಡಬಲ್ಸ್ ವಿಭಾಗದ ಪ್ರಶಸ್ತಿ ವಿಜೇತರಾದ ಅಮೆರಿಕಾ ನಿವಾಸಿ, ಮೂಲತಃ ಬೆಂಗಳೂರಿನವರಾದ ಅಮೃತ್ ನರಸಿಂಹನ್ ಹಾಗೂ ಅವರ ಜೊತೆಗಾರ ಮೈಕಲ್ ಶಬಾಜ್ 34,650 ರೂಪಾಯಿ ಮೊತ್ತದ ಬಹುಮಾನ ಹಾಗೂ ರನ್ನರ್ ಅಪ್ ಜೋಡಿಯಾದ ಅಶ್ವಿನ್ ವಿಜಯರಾಘವನ್ ಹಾಗೂ ಅಜಯ್ ಸೆಲ್ವರಾಜ್ 18,150 ರೂಪಾಯಿ ಬಹುಮಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry