ಗುರುವಾರ , ಫೆಬ್ರವರಿ 25, 2021
24 °C
ರಾಜ್ಯ ಕಾರಾಗೃಹಗಳ ಮಹಾ ನಿರೀಕ್ಷಕ ಎಚ್‌.ಎನ್‌.ಸತ್ಯನಾರಾಯಣ ರಾವ್‌ ಹೇಳಿಕೆ

ಸನ್ನಡತೆ ಕೈದಿಗಳ ಬಿಡುಗಡೆ ಪ್ರಕ್ರಿಯೆ ಸರಳೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸನ್ನಡತೆ ಕೈದಿಗಳ ಬಿಡುಗಡೆ ಪ್ರಕ್ರಿಯೆ ಸರಳೀಕರಣ

ದಾವಣಗೆರೆ: ಹರಿಹರ ತಾಲ್ಲೂಕಿನ ಕೊಂಡಜ್ಜಿಯಲ್ಲಿ ಶೀಘ್ರವೇ ಸುಸಜ್ಜಿತ ಕೇಂದ್ರ ಕಾರಾಗೃಹ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಕಾರಾಗೃಹಗಳ ಮಹಾ ನಿರೀಕ್ಷಕ ಎಚ್‌.ಎನ್‌.ಸತ್ಯ ನಾರಾಯಣ ರಾವ್ ತಿಳಿಸಿದರು.ನಗರದ ಉಪ ಕಾರಾಗೃಹಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕೊಂಡಜ್ಜಿಯಲ್ಲಿ 10 ಎಕರೆ ಜಮೀನು ಗುರುತಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. 5 ವರ್ಷಗಳಲ್ಲಿ ಕಾರಾಗೃಹ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದರು.ನಗರದ ಮಧ್ಯೆ ಇರುವ ದಾವಣಗೆರೆ ಕಾರವಾರ, ಮಂಗಳೂರು ಹಾಗೂ ಶಿವಮೊಗ್ಗ ಜೈಲುಗಳನ್ನು ಶೀಘ್ರವೇ ಹೊರವಲಯಗಳಿಗೆ ಸ್ಥಳಾಂತರಿಸುವ ಕಾರ್ಯ ಆರಂಭವಾಗಲಿದೆ. ಜೈಲು ಸುಧಾರಣೆಗೆ ಇಲಾಖೆ ಹೆಚ್ಚಿನ ಆದ್ಯತೆ ನೀಡಿದ್ದು, ಕಾನೂನು ಬಾಹಿರ ಚಟುವಟಿಕೆಗಳ ತಡೆಗೆ ಕಠಿಣ ಕ್ರಮ, ಕೈದಿಗಳಿಗೆ ನೈತಿಕ ಶಿಕ್ಷಣ ನೀಡುವ ಸಂಬಂಧ ಪೂರಕ ಪುಸ್ತಕಗಳನ್ನು ಸರಬರಾಜು ಮಾಡಲಾಗುವುದು ಎಂದರು.ನೇರ ಭೇಟಿಗೆ ಅವಕಾಶ: ಮಹಿಳಾ ಕೈದಿಗಳನ್ನು ಭೇಟಿಯಾಗಲು ಜೈಲಿಗೆ ಮಕ್ಕಳು ಬಂದಾಗ ಜಾಲರಿ (ಮೆಷ್‌) ಅಡ್ಡಲಾಗಿ ಮಾತುಕತೆ ನಡೆಸಬೇಕಿತ್ತು. ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಕ್ಕಳ ಜತೆ ಮುಕ್ತವಾಗಿ ಮಾತನಾಡಲು ನೇರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.ಕೈದಿಗಳ ಬಿಡುಗಡೆ ಪ್ರಕ್ರಿಯೆ ಸರಳೀಕರಣ: ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆ ಪ್ರಕ್ರಿಯೆಯನ್ನು ಸರ್ಕಾರ ಸರಳೀಕರಣಗೊಳಿಸಿದೆ. 10 ವರ್ಷ ಶಿಕ್ಷೆ ಅನುಭವಿಸಿರುವ ಮಹಿಳೆಯರು ಜೈಲಿನಲ್ಲಿ ಸನ್ನಡತೆ ತೋರಿದ್ದರೆ ಅಂಥವರನ್ನು ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗುವುದು. ಶೀಘ್ರವೇ ಪುರುಷರಿಗೂ ಈ ನಿಯಮಗಳು ಅನ್ವಯವಾಗಲಿವೆ ಎಂದರು.ರಾಜ್ಯದ ಎಲ್ಲಾ ಕೇಂದ್ರ ಕಾರಾಗೃಹಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯಲ್ಲಿ ಕುಳಿತು ಸಿಸಿಟಿವಿ ಕ್ಯಾಮೆರಾ ಮೂಲಕ ವೀಕ್ಷಣೆ ಮಾಡಲಾಗುವ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದಾಗಿ ಜೈಲಿನಲ್ಲಿ ಶಿಸ್ತು ಕಾಪಾಡುವುದರ ಜತೆಗೆ ಅಹಿತಕರ ಘಟನೆಗಳು ನಡೆಯದಂತೆ ತಡೆಯಬಹುದು ಎಂದು ಸತ್ಯನಾರಾಯಣ ರಾವ್ ಸ್ಪಷ್ಟಪಡಿಸಿದರು.ರಾಜ್ಯದಲ್ಲಿ ಕೆಲವು ಬಂಧೀಖಾನೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಕೈದಿಗಳಿದ್ದು, ಹೆಚ್ಚುವರಿ ಕಾರಾಗೃಹಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಿಪಟೂರು, ಆಳಂದ ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿ ಶೀಘ್ರವೇ ಉಪ ಕಾರಾಗೃಹ ನಿರ್ಮಾಣ ಮಾಡಲಾಗುವುದು. ಜೈಲಿನಲ್ಲಿ ರೌಡಿ ಚಟುವಟಿಕೆ, ಮಾದಕ ವಸ್ತು ಬಳಕೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪೂರ್ವವಲಯ ಐಜಿಪಿ ಎಂ.ನಂಜುಡಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ್‌, ಜಿಲ್ಲಾ ಕಾರಾಗೃಹ ಅಧೀಕ್ಷಕ ಮಲ್ಲಿಕಾರ್ಜುನಪ್ಪ ಮಾಳಿ ಇದ್ದರು.

** ಕೇಂದ್ರ ಕಾರಾಗೃಹಗಳ ಕ್ಯಾಂಟಿನ್‌ಗಳಲ್ಲಿ ಕೈದಿಗಳಿಗೆ ಅಗತ್ಯವಸ್ತುಗಳ ಜತೆಗೆ ಬೀಡಿ, ಸಿಗರೇಟುಗಳನ್ನು ಸಹ ಮಾರಲಾಗುತ್ತಿತ್ತು. ಹಂತಹಂತವಾಗಿ ತಂಬಾಕು ಉತ್ಪನ್ನಗಳ ಮಾರಾಟ ಕಡಿತಗೊಳಿಸಿ ನವೆಂಬರ್‌ನೊಳಗೆ ಸಂಪೂರ್ಣ ನಿಷೇಧ ಮಾಡಲಾಗುವುದು ಎಂದು ರಾಜ್ಯ ಕಾರಾಗೃಹಗಳ ಮಹಾ ನಿರೀಕ್ಷಕ ಎಚ್‌.ಎನ್‌.ಸತ್ಯ ನಾರಾಯಣ ರಾವ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.