ಬುಧವಾರ, ನವೆಂಬರ್ 13, 2019
23 °C

ಸನ್ನಿಸೈಡ್ ಕಟ್ಟಡ ತೆರವು ಯಾವಾಗ?

Published:
Updated:

ಮಡಿಕೇರಿ: ವೀರಸೇನಾನಿ ಜನರಲ್ ತಿಮ್ಮಯ್ಯ ಅವರು ಹುಟ್ಟಿ, ಬೆಳೆದ ಮಡಿಕೇರಿಯ ಸನ್ನಿಸೈಡ್ ಕಟ್ಟಡವನ್ನು ಸ್ಮಾರಕವಾಗಿಸಬೇಕೆನ್ನುವ ಹಲವು ವರ್ಷಗಳ ಬೇಡಿಕೆಯು ಬೇಡಿಕೆಯಾಗಿಯೇ ಉಳಿದಿದೆ.ಸನ್ನಿಸೈಡ್ ಕಟ್ಟಡದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಆರ್‌ಟಿಒ ಕಚೇರಿಯನ್ನು ತಿಮ್ಮಯ್ಯ ಅವರ 107ನೇ ಜನ್ಮದಿನೋತ್ಸವ ಆಚರಣೆ ವೇಳೆಗಾದರೂ ಸ್ಥಳಾಂತರಿಸಬಹುದು ಎನ್ನುವ ಕೊಡಗಿನ ಜನತೆಯ ಬಯಕೆ ಬಯಕೆಯಾಗಿಯೇ ಉಳಿಯಿತು.ಅಬ್ಬಿಫಾಲ್ಸ್ ರಸ್ತೆಯಲ್ಲಿ ಸುಮಾರು 4-5 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಆರ್‌ಟಿಒ ಕಚೇರಿಯನ್ನು ನಿರ್ಮಿಸಲಾಗಿದ್ದು, ಕೊನೆಯ ಹಂತದ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಸ್ಥಳಾಂತರ ವಿಳಂಬವಾಗಿದೆ ಎನ್ನುವುದು ಅಧಿಕಾರಿಗಳ ವಿವರಣೆ.ತಿಮ್ಮಯ್ಯ ಅವರ ಜನ್ಮಸ್ಥಳ

ತಿಮ್ಮಯ್ಯ ಅವರು ಸೇನೆ ಸೇರುವ ಮುನ್ನ ವಾಸವಿದ್ದ ಈ ಕಟ್ಟಡವನ್ನು ಆರ್‌ಟಿಒ ಇಲಾಖೆಯು 50 ವರ್ಷಗಳ ಹಿಂದೆ ಖರೀದಿಸಿತ್ತು. ನಂತರ ಈ ಕಟ್ಟಡದಲ್ಲಿ ತಮ್ಮ ಕಾರ್ಯ ಚಟುವಟಿಕೆ ಆರಂಭಿಸಿತ್ತು.2006ರಲ್ಲಿ ಅಂದಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಮಡಿಕೇರಿಗೆ ಬಂದಾಗ, ಈ ಕಟ್ಟಡವನ್ನು ಸ್ಮಾರಕವನ್ನಾಗಿಸುವ ಭರವಸೆ ನೀಡಿದರು. ಅದಕ್ಕಾಗಿ ರೂ. 1 ಕೋಟಿ ಅನುದಾನ ಒದಗಿಸುವುದಾಗಿ ನುಡಿದರು.ಇದರ ನಿಮಿತ್ತ 2007ರಲ್ಲಿ ನಗರದಲ್ಲಿ ಎಲ್ಲಿಯೂ ಜಾಗ ಸಿಗದ ಹಿನ್ನೆಲೆಯಲ್ಲಿ ಅಬ್ಬಿಫಾಲ್ಸ್ ರಸ್ತೆಯಲ್ಲಿ ಆರ್‌ಟಿಒ ಕಚೇರಿ ನಿರ್ಮಿಸಲು ಆರಂಭಿಸಲಾಯಿತು. ಈಗ ಬಹುತೇಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕೆಲವು ಸಣ್ಣಪುಟ್ಟ ಕಾರ್ಯಗಳು ಮಾತ್ರ ಬಾಕಿ ಉಳಿದಿವೆ.ಯೋಜನೆ: ಮೇಜರ್ ನಂದಾ ತಿಮ್ಮಯ್ಯ ಭವನ ನಿರ್ಮಾಣಕ್ಕೆ ರೂ. 1.51 ಕೋಟಿ ವೆಚ್ಚದ ವಿವಿಧ ಯೋಜನೆ ರೂಪಿಸಿದ್ದಾರೆ. ತಿಮ್ಮಯ್ಯ ಅವರು ವಾಸವಿದ್ದಾಗ ಇದ್ದ ರೀತಿಯಲ್ಲಿಯೇ ಮನೆಯನ್ನು ಪುನರ್ ನವೀಕರಣಗೊಳಿಸಲು ರೂ 8 ಲಕ್ಷ ಮೀಸಲಿಡಲಾಗಿದೆ.ಕಟ್ಟಡದ ಸುತ್ತ ಇರುವ 2.25 ಎಕರೆ ಜಾಗದಲ್ಲಿ ಸಂಕೋಲೆ ಬೇಲಿ ನಿರ್ಮಾಣಕ್ಕೆ ರೂ. 8 ಲಕ್ಷ, ಮಳೆ ನೀರು ಸಂಗ್ರಹಿಸಲು ಕೊಳ ನಿರ್ಮಾಣಕ್ಕೆ ರೂ. 19 ಲಕ್ಷ, ಮನೆಯ ಒಳಾಂಗಣವನ್ನು ಪುರಾತನ ಕಾಲದಂತೆ ಮಾಡಲು ರೂ. 10 ಲಕ್ಷ, ತಿಮ್ಮಯ್ಯ ಮತ್ತು ಅವರ ನಿಕಟವರ್ತಿಗಳ ಚಿತ್ರ ನಿರ್ಮಾಣಕ್ಕೆ ರೂ. 10 ಲಕ್ಷ, ಸನ್ನಿಸೈಡ್‌ನಲ್ಲಿ ವಸ್ತುಸಂಗ್ರಹಾಲಯ ರೂಪಿಸಲು ರೂ. 20 ಲಕ್ಷ, ಭಾರತೀಯ ಸೇನಾ ಪಡೆಯೊಂದಿಗೆ ವ್ಯವಹರಿಸಿ ಹಳೆ ಬ್ಯಾರಲ್ ಟ್ಯಾಂಕ್‌ಗಳನ್ನು ತೋಪುಗಳನ್ನು, ಹಳೆ ಸಮರ ವಿಮಾನಗಳನ್ನು ಸ್ಮಾರಕ ಭವನ ವ್ಯಾಪ್ತಿಯಲ್ಲಿ ತಂದಿರಿಸುವ ಯೋಜನೆಗೆ ರೂ. 9 ಲಕ್ಷ ಹೀಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ.ಈ ಎಲ್ಲ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಕೈಜೋಡಿಸಬೇಕು ಹಾಗೂ ಆದಷ್ಟು ಶೀಘ್ರ ಸನ್ನಿಸೈಡ್ ಕಟ್ಟಡದಿಂದ ಆರ್‌ಟಿಒ ಕಚೇರಿಯನ್ನು ಸ್ಥಳಾಂತರಿಸಬೇಕು ಎಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ಸದಸ್ಯರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)