ಸನ್ಮಾರ್ಗದ ಸಂಪಾದನೆಯಿಂದ ಮಾತ್ರ ಖುಷಿ- ಹೆಗ್ಡೆ

7

ಸನ್ಮಾರ್ಗದ ಸಂಪಾದನೆಯಿಂದ ಮಾತ್ರ ಖುಷಿ- ಹೆಗ್ಡೆ

Published:
Updated:
ಸನ್ಮಾರ್ಗದ ಸಂಪಾದನೆಯಿಂದ ಮಾತ್ರ ಖುಷಿ- ಹೆಗ್ಡೆ

ಬೆಂಗಳೂರು: `ಉತ್ತಮ ಮಾರ್ಗದಿಂದ ಸಂಪಾದಿಸಿದ ಹಣ ಮಾತ್ರ ತೃಪ್ತಿ ನೀಡಬಲ್ಲದು. ಭ್ರಷ್ಟಾಚಾರ ಹಾಗೂ ಇನ್ನಿತರ ವಾಮಮಾರ್ಗಗಳಿಂದ ಹಣ ಸಂಪಾದಿಸಿದವರು ಜೈಲು ಪಾಲಾಗಿದ್ದಾರೆ. ಯುವಜನತೆ ಹಾಗೂ ವಿದ್ಯಾರ್ಥಿಗಳ ಒಕ್ಕೊರಲ ಧ್ವನಿಯಿಂದ ಮಾತ್ರ ಭ್ರಷ್ಟಾಚಾರವನ್ನು ಹೋಗಲಾಡಿಸಲು ಸಾಧ್ಯ~ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಪ್ರತಿಪಾದಿಸಿದರು.ನಗರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ಸಿಬಿಎಸ್‌ಇ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ಜ್ಯೋತಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳನ್ನು ಗೌರವಿಸಿ ಅವರು ಮಾತನಾಡಿ, `ಭ್ರಷ್ಟಾಚಾರ ಹೋಗಲಾಡಿಸುವ ಕಾರ್ಯದಲ್ಲಿ ಯುವಜನತೆ ಸಫಲರಾಗುತ್ತಾರೆ ಎಂಬ ವಿಶ್ವಾಸ ಇದೆ~ ಎಂದರು.

`ಕಾನೂನುಬಾಹಿರವಾಗಿ ಗಳಿಸಿದ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ. ಆ ಹಣದಿಂದ ಯಾವುದೇ ರೀತಿಯ ತೃಪ್ತಿ ಸಿಗುವುದಿಲ್ಲ. ಕೆಟ್ಟ ಮಾರ್ಗಗಳಿಂದ ಹಣ ಸಂಪಾದಿಸಲು ಆರಂಭಿಸಿದರೆ ಆಸೆಯ ಪ್ರಮಾಣ ಹೆಚ್ಚಾಗುತ್ತದೆ. ಸ್ವಂತ ಶ್ರಮ ಹಾಗೂ ಕಾನೂನಿನ ಅಡಿಯಲ್ಲಿ ಸಂಪತ್ತನ್ನು ಗಳಿಸುವುದರ ಬಗ್ಗೆ ಗಮನ ಹರಿಸಬೇಕು~ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎನ್.ವಿ ಸುಬ್ರಹ್ಮಣ್ಯ ಮಾತನಾಡಿ, `ವಿದ್ಯಾರ್ಥಿಗಳ ಸಾಧನೆ ಪ್ರತಿವರ್ಷ ಹೆಚ್ಚಾಗುತ್ತಲೇ ಬಂದಿದೆ. ಈ ಬಾರಿ ಹೆಚ್ಚಿನ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗಿದೆ~ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ 120 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry