ಸನ್‌ರೈಸರ್ಸ್‌ಗೆ ಮೂಡಿ ತರಬೇತುದಾರ

7

ಸನ್‌ರೈಸರ್ಸ್‌ಗೆ ಮೂಡಿ ತರಬೇತುದಾರ

Published:
Updated:

 


ಹೈದರಾಬಾದ್ (ಪಿಟಿಐ/ಐಎಎನ್‌ಎಸ್): ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ನೂತನ ಫ್ರಾಂಚೈಸ್ ತಂಡವಾದ ಸನ್‌ರೈಸರ್ಸ್‌ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ನೂತನ ತರಬೇತುದಾರರಾಗಿ ನೇಮಕಗೊಂಡಿದ್ದಾರೆ. ಮಾಜಿ ಕ್ರಿಕೆಟಿಗರಾದ ವಿ.ವಿ.ಎಸ್. ಲಕ್ಷ್ಮಣ್ ಹಾಗೂ ಕೆ. ಶ್ರೀಕಾಂತ್ ಅವರನ್ನು ಸಲಹೆಗಾರರನ್ನಾಗಿ ಮತ್ತು ರಾಯಭಾರಿಗಳನ್ನಾಗಿ ನೇಮಕ ಮಾಡಲಾಗಿದೆ.

 

ಡೆಕ್ಕನ್ ಜಾರ್ಜರ್ಸ್ ಎಂದಿದ್ದ ಈ ತಂಡವನ್ನು ಸನ್‌ಟಿವಿ ನೆಟ್‌ವರ್ಕ್ ಖರೀದಿ ಮಾಡಿ ಸನ್‌ರೈಸರ್ಸ್ ಎಂದು ಮರುನಾಮಕರಣ ಮಾಡಿದೆ. ಹೆಸರಿನಲ್ಲಿ ಬದಲಾವಣೆ ಮಾಡುವುದರ ಜೊತೆಗೆ ಗುರುವಾರ ಹೊಸ ಲಾಂಛನವನ್ನೂ ಅನಾವರಣಗೊಳಿಸಿತು. ಆದರೆ, ವೈಯಕ್ತಿಕ ಕಾರಣದಿಂದ ಈ ಕಾರ್ಯಕ್ರಮಕ್ಕೆ ಲಕ್ಷ್ಮಣ್ ಗೈರು ಹಾಜರಾಗಿದ್ದರು. ಈ ಹೊಸ ಫ್ರಾಂಚೈಸ್ ತಂಡಕ್ಕೂ ಶ್ರೀಲಂಕಾದ ಕುಮಾರ ಸಂಗಕ್ಕಾರ ನಾಯಕರಾಗಿ ಮುಂದುವರಿಯಲಿದ್ದಾರೆ. 

 

`ಈ ತಂಡಕ್ಕೆ ಸಲಹೆಗಾರರಾಗಿ ನೇಮಕ ಮಾಡಿದ್ದಕ್ಕೆ ಖುಷಿಯಾಗಿದೆ. ಲಕ್ಷ್ಮಣ್, ಡೇಲ್ ಸ್ಟೈನ್, ಸಂಗಕ್ಕಾರ ಸೇರಿ ಈ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಲಿದ್ದಾರೆ. ಮುಂದಿನ ಋತುವಿಗೆ ಕೆಲ ಪಾಕಿಸ್ತಾನದ ಆಟಗಾರರನ್ನೂ ಸೇರಿಸಿಕೊಳ್ಳುವುದು ಅಗತ್ಯವಿದೆ. ಅದರ ಜೊತೆಗೆ ಆಲ್‌ರೌಂಡರ್‌ಗಳು ಸಹ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸನ್‌ರೈಸರ್ಸ್ ಉತ್ತಮ ಪ್ರದರ್ಶನ ನೀಡಲಿದೆ' ಎಂದು ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಶ್ರೀಕಾಂತ್ ಹೇಳಿದ್ದಾರೆ.

 

`ನಮಗೆ ಖಂಡಿತವಾಗಿಯೂ ವಿಶ್ವಾಸವಿದೆ. 2013ರ ಆವೃತ್ತಿಯಲ್ಲಿ ತಂಡ ಯಶಸ್ಸು ಕಾಣಲಿದೆ. ಬೇರೆ ತಂಡಗಳಿಗೆ ಪ್ರಬಲ ಸವಾಲು ಒಡ್ಡುವ ಸಾಮರ್ಥ್ಯ `ಸನ್‌ರೈಸರ್ಸ್'ಗೆ ಇದೆ' ಎಂದು ಅವರು ನುಡಿದರು.

 

`ಸನ್‌ಗ್ರೂಪ್‌ನ ಪ್ರಧಾನ ಕಛೇರಿ ಇರುವ ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಈ ತಂಡದ ಕಾರ್ಯಚಟುವಟಿಕೆಗಳು ನಡೆಯಲಿವೆ' ಎಂದು ಫ್ರಾಂಚೈಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಷಣ್ಮುಗಂ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry