ಸಪ್ತಪದಿ ತುಳಿದ ಅಂಗವಿಕಲ ಜೋಡಿ

7

ಸಪ್ತಪದಿ ತುಳಿದ ಅಂಗವಿಕಲ ಜೋಡಿ

Published:
Updated:
ಸಪ್ತಪದಿ ತುಳಿದ ಅಂಗವಿಕಲ ಜೋಡಿ

ಹರಪನಹಳ್ಳಿ (ದಾವಣಗೆರೆ ಜಿಲ್ಲೆ):ಅಲ್ಲಿ ಅಡಂಬರ ಇರಲಿಲ್ಲ. ಓಲಗದ ಸ್ದ್ದದೂ ಇರಲಿಲ್ಲ. ಬದುಕಿನ ಭರವಸೆಯನ್ನೇ ಕಳೆದುಕೊಂಡು, ಪ್ರಾಪಂಚಿಕ ಜೀವನದಲ್ಲಿ ತಾತ್ಸಾರಕ್ಕೆ ಒಳಗಾದ ಅಂಗವಿಕಲ ಯುವ ಜೋಡಿ ದಾಂಪತ್ಯದ ಜೀವನಕ್ಕೆ ಕಾಲಿರಿಸಿದ ಅಪರೂಪದ ಕ್ಷಣ ಅದಾಗಿತ್ತು.ತಾಲ್ಲೂಕಿನ ತೌಡೂರು ಗ್ರಾಮದ ಮಾಳ್ಗಿ ಮೈಲಪ್ಪ- ರತ್ನಮ್ಮ ದಂಪತಿ ಹಿರಿಯ ಪುತ್ರ ಶಿವಕುಮಾರ್ ಅವರ ಎರಡೂ ಕಾಲುಗಳ ಶಕ್ತಿ ಕಮರಿದೆ. ಒಂದೇ ಒಂದು ಹೆಜ್ಜೆ ಮುಂದೇ ಹೋಗಬೇಕೆಂದರೂ, ಕೈಗಳೇ ಅವರಿಗೆ  ಊರುಗೋಲು!. ಇತ್ತ ಜಗಳೂರು ತಾಲ್ಲೂಕು ರಾಜನಹಟ್ಟಿ ಗ್ರಾಮದ ಯಲ್ಲಣ್ಣರ ಕರಿಯಮ್ಮ- ದಿ. ತಿಪ್ಪೇಸ್ವಾಮಿ ದಂಪತಿಯ ಜ್ಯೇಷ್ಠಪುತ್ರಿ ಭಾಗ್ಯಮ್ಮ ಹುಟ್ಟಿದ ನಾಲ್ಕಾರು ತಿಂಗಳಲ್ಲಿಯೇ ಒಂದು ಕಾಲು ಕಳೆದುಕೊಂಡ ನತದೃಷ್ಟೆ!.ಶಿವಕುಮಾರ ಬದುಕಿಗೆ ಭಾಗ್ಯಮ್ಮ `ಭಾಗ್ಯದ ಬಾಗಿಲು~  ತೆರೆಯುವ ಮೂಲಕ ಗುರುವಾರ ಕ್ಯಾರಕಟ್ಟೆ-ಕಂಚಿಕೆರೆ ಗ್ರಾಮದ ಮಧ್ಯದ ಬಿದ್ದಹನುಮಪ್ಪ ದೇವಸ್ಥಾನದಲ್ಲಿ ದಾಂಪತ್ಯದ ಜೀವನಕ್ಕೆ ಕಾಲಿರಿಸಿದರು.ಶಿವಕುಮಾರ್ ಹುಟ್ಟಾ ಅಂಗವಿಕಲರಲ್ಲ. ಜನಿಸಿದ 9 ತಿಂಗಳಲ್ಲಿ ಕಾಣಿಸಿಕೊಂಡ ಪೋಲಿಯೊ ಇವರ ಎರಡೂ ಕಾಲುಗಳನ್ನು ಊನಗೊಳಿಸಿದೆ.ಆದರೂ, ಭವಿಷ್ಯದ ಭರವಸೆ ಕಳೆದುಕೊಳ್ಳದ ಇವರು ಸದ್ಯಕ್ಕೆ ಬಿ.ಎ. ಪದವಿ ತರಗತಿಯ ಅಂತಿಮ ವರ್ಷದ ಪರೀಕ್ಷೆ ಬರೆದಿದ್ದಾರೆ. `ಬದುಕಿಗೆ ಆಸರೆಯಾಗಿ ಕಾಲಿಲ್ಲ ನಿಜ. ಆದರೆ, ಬದುಕಿಗೆ ಪ್ರೇರಣೆ ನೀಡಬಲ್ಲ ಕ್ರಿಯಾಶೀಲತೆ ನನ್ನಲ್ಲಿ ಇದೆ. ಹೀಗಾಗಿ, ಭಾಗ್ಯಮ್ಮನನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದ್ದೇನೆ. ಕೈಗಳ ಸಹಾಯದಿಂದಲೇ ನಾನು ನಡೆಯುತ್ತೇನೆ ಎಂದು ಗೊತ್ತಿದ್ದರೂ, ನನ್ನ ಬದುಕಿನ ತಿರುವಿಗೆ ಸ್ಫೂರ್ತಿಯಾದ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಉಪಜೀವನಕ್ಕೆ ಡಬ್ಬಾ ಅಂಗಡಿ ಆರಂಭಿಸಿ ಸಂಸಾರದ ರಥದ ಸಾರಥ್ಯ ವಹಿಸುತ್ತೇನೆ~  ಎನ್ನುತ್ತಾರೆ ಶಿವಕುಮಾರ್.`ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಅನ್ಯೋನ್ಯವಾಗಿ ಜೀವಿಸುತ್ತೇವೆ. ಮತ್ತೊಬ್ಬರ ಅವಲಂಬನೆಯ ಬದುಕಿಗಿಂತ ಸ್ವಾವಲಂಬನೆಯ ಬದುಕು ಮುಖ್ಯ~ ಎನ್ನುತ್ತಾಳೆ ಭಾಗ್ಯಮ್ಮ.ವಧು-ವರನ ಪೋಷಕರು, ಶಿವಶರಣ ಮಾದಾರ ಚನ್ನಯ್ಯ ಯುವಕ ಸಂಘದ ಅಧ್ಯಕ್ಷ ಪುಣಭಗಟ್ಟೆ ನಿಂಗಪ್ಪ, ದಲಿತ ಸಂಘರ್ಷ ಸಮಿತಿ ಸಂಚಾಲಕ ಕಬ್ಬಳ್ಳಿ ಮೈಲಪ್ಪ, ಸಿಐಟಿಯು ಸಂಘಟನೆಯ ಬಿ. ಅಂಜಿನಪ್ಪ, ವಕೀಲ ಸಿ. ರಾಜಪ್ಪ, ಮಡಿವಾಳ ಸಂಘದ ಕಾರ್ಯದರ್ಶಿ ಎಂ. ಭರಮಪ್ಪ, ರೈತ ಸಂಘದ ಕಾಳಪ್ಪ, ಶಿಕ್ಷಕ ಎ.ಕೆ. ಅಂಜಿನಪ್ಪ, ಹಿರೇಮೇಗಳಗೇರಿ ಶಾಸಪ್ಪ, ಆರ್.ಕೆ. ಮಂಜುನಾಥ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ವಧು-ವರರಿಗೆ ಶುಭ ಹಾರೈಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry