ಸಪ್ತ ಪ್ರತಿಭೆಗಳ ವೈಷ್ಣವಿ ಬಳ್ಳಾಲ್

7

ಸಪ್ತ ಪ್ರತಿಭೆಗಳ ವೈಷ್ಣವಿ ಬಳ್ಳಾಲ್

Published:
Updated:

ಆಯತಾಕಾರದ ಪುಟ್ಟ ಮರದಪಟ್ಟಿಯ ಚೌಕಟ್ಟಿಗೆ ತೆಳುವಾದ ಲೋಹದ ತಂತಿಯಲ್ಲಿ ಬಂಧಿತವಾಗಿರುವ ನೂರಾರು ಮಣಿಗಳು. ಮೇಲಿನ 3 ಮಣಿಗಳ ಸಾಲನ್ನು ಕೆಳಗಿನ ಆರು ಮಣಿಗಳ ಗುಂಪಿನಿಂದ ಪ್ರತ್ಯೇಕಿಸುವ ಪುಟ್ಟ ಅಡ್ಡ ಪಟ್ಟಿ. ಅಂಕಿಗಳನ್ನು ಮುಂದಿಡುತ್ತಲೇ... ನುಣುಪಾದ ಮಣಿಗಳನ್ನು ಮೇಲೆ-ಕೆಳಗೆ ಮಾಡುತ್ತಲೇ ಗುಣಾಕಾರ-ಭಾಗಾಕಾರ-ಸಂಕಲನ ಮಾಡಲಾರಂಭಿಸಿದ ಪುಟ್ಟದಾದ, ಅಷ್ಟೇ ಸುಂದರವಾದ ಬಿಳುಪು ಕೈಬೆರಳುಗಳು... ಸರಸರನೆ ಮಣಿಗಳೊಡನೆ ಆಟವಾಡುತ್ತಲೇ ಹತ್ತಾರು ಅಂಕಿಗಳ ದೊಡ್ಡ ಲೆಕ್ಕಾಚಾರವನ್ನೂ ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಪರಿಹರಿಸಿ ಉತ್ತರ ಮುಂದಿಡುವ ಆ ಪುಟ್ಟ ಕೈಬೆರಳುಗಳ ಒಡತಿ ವೈಷ್ಣವಿ ಬಳ್ಳಾಲ್.ಕೋಟಿ ಕೋಟಿ ಲೆಕ್ಕದ ಅಂಕಿಗಳ ಗಣಿತ ಸಮಸ್ಯೆಗಳನ್ನೂ ಗಣಕಯಂತ್ರದಷ್ಟೇ ವೇಗದಲ್ಲಿ ಪರಿಹರಿಸಲು ಆಕೆಗೆ ನೆರವಾಗಿದ್ದು... ಅದುವೇ ಅಬಾಕಸ್.ನೆರೆಯ ರಾಷ್ಟ್ರ ಚೀನಾ ಮೂಲದ ಗಣಿತ ಸೂತ್ರ ಅಬಾಕಸ್‌ನಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ 7ನೇ ವಿದ್ಯಾರ್ಥಿನಿ ವೈಷ್ಣವಿಯದ್ದು ಅಪರಿಮಿತ ಪ್ರಾವೀಣ್ಯ. ಹಾಗಾಗಿಯೇ ಆಕೆ 2010ರ ನವೆಂಬರ್ 28ರಂದು ಕ್ವಾಲಾಲಂಪುರದಲ್ಲಿ ನಡೆದ ಅಂತರರಾಷ್ಟ್ರೀಯ ಅಬಾಕಸ್ (ಗ್ರಾಂಡ್ ಲೆವೆಲ್ 2) ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್. (ಚೀನಾದ ಬಾಲಕಿ ವಿಜೇತೆ).

ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ ದಕ್ಷಿಣ ಭಾರತದ ಮೊಟ್ಟಮೊದಲ ಬಾಲಕಿ ವೈಷ್ಣವಿ ಎಂಬುದು ಆಕೆಯ ಅಜ್ಜ ಡಾ. ಸಿ.ಆರ್.ಬಳ್ಳಾಲ್ ಪ್ರತಿಪಾದನೆ.ಅಷ್ಟೇ ಅಲ್ಲದೆ, ವೈಷ್ಣವಿ ಬಳ್ಳಾಲ್ 2010ರಲ್ಲಿ ರಾಷ್ಟ್ರೀಯ ಚಾಂಪಿಯನ್ (ಗ್ರಾಂಡ್ ಲೆವೆಲ್ 1) ಗೆದ್ದಿದ್ದು ನಗದು ಬಹುಮಾನವೂ ಬಂದಿದೆ, 2008ರಲ್ಲಿ ರಾಜ್ಯ ಚಾಂಪಿಯನ್. 2009ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ರನ್ನರ್ ಅಪ್.ಮಂಗಳೂರಿನ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಪ್ರೊ. ಡಾ. ರಾಜೇಶ್ ಬಳ್ಳಾಲ್ ಮತ್ತು ಸೆರಾಮಿಕ್ ಚಿತ್ರಕಲೆಯಲ್ಲಿ ಪ್ರಾವೀಣ್ಯ ಸಾಧಿಸಿರುವ ವಸುಂದರಾ ಬಳ್ಳಾಲ್ ದಂಪತಿಯ ಏಕಮಾತ್ರ ಪುತ್ರಿ ವೈಷ್ಣವಿ ಬಳ್ಳಾಲ್. ಈಕೆ 3ನೇ ತರಗತಿಯಲ್ಲಿದ್ದಾಗಲೇ ಅಬಾಕಸ್‌ನತ್ತ ಆಕರ್ಷಿತಳಾಗಿದ್ದು ಒಂದು ಆಕಸ್ಮಿಕ. ತಂದೆ ರೋಟೇರಿಯನ್ ಆಗಿದ್ದರಿಂದ ರೋಟರಿ ಸಮಾರಂಭಕ್ಕೆ ಮಗಳನ್ನೂ ಕರೆದೊಯ್ದಿದ್ದರು. ಅಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ನೂರಾರು ಮಣಿಗಳ ಚೌಕಟ್ಟಿನ ನೆರವಿನಿಂದ ಗಣಿತ ಸಮಸ್ಯೆಗಳಿಗೆ ಕ್ಷಣಮಾತ್ರದಲ್ಲಿ ಉತ್ತರಿಸುತ್ತಿದ್ದುದನ್ನು ಕಂಡ ವೈಷ್ಣವಿ, ಅಬಾಕಸ್‌ನತ್ತ ಆಗಲೇ ಆಕರ್ಷಿತಳಾದಳು. ನಂತರದ್ದೆಲ್ಲ ವ್ಯವಸ್ಥಿತ, ಶ್ರದ್ಧಾಪೂರ್ವಕ ಕಲಿಕೆ, ಸ್ಪರ್ಧೆ, ಬಹುಮಾನ, ಪ್ರಶಂಸೆಗಳ ಮಳೆ.‘ಆರಂಭದಲ್ಲಿ ಅಬಾಕಸ್ ಕಲಿಯುವುದು ಸ್ವಲ್ಪ ಕಷ್ಟವೇ ಆಯಿತು. 34 ಬಗೆಯ ಫಾರ್ಮುಲಾಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದ್ದಿತು. 5 ಅಂಕಿಗಳ ‘ಸ್ಮಾಲ್‌ಫ್ರೆಂಡ್’ 10 ಅಂಕಿಗಳ ‘ಬಿಗ್‌ಫ್ರೆಡ್’ ಕಾಂಬಿನೇಷನ್ ಸೂತ್ರವೂ ಮೊದಲಿಗೆ ಕ್ಲಿಷ್ಟ ಎನಿಸಿತ್ತು. ಆಸಕ್ತಿಯಿಂದ ತೊಡಗಿಸಿಕೊಂಡಂತೆಲ್ಲಾ ಗಣಿತದ ಎಲ್ಲ ಲೆಕ್ಕಾಚಾರ, ಸೂತ್ರಗಳೆಲ್ಲವೂ ಬಹಳ ಸಲೀಸು ಎನಿಸಿದವು. ಮೊದಲು 10 ಟರ್ಮ್ ಇದ್ದಿತು. ಎಲ್ಲವನ್ನೂ ಸಂಪೂರ್ಣ ಕಲಿಯುವುದಕ್ಕೆ ಕನಿಷ್ಠ 2 ವರ್ಷವಾದರೂ ಬೇಕಾಗುತ್ತದೆ’ ಎನ್ನುವ ವೈಷ್ಣವಿ, ಇನ್ನೂ ಐದು ಬಗೆಯ ಕಲಾ ಪ್ರಕಾರಗಳಲ್ಲಿಯೂ ಪರಿಣತಿ ಪಡೆದಿದ್ದಾಳೆ.ಭರತನಾಟ್ಯ ಜ್ಯೂನಿಯರ್‌ನಲ್ಲಿ 2010ರಲ್ಲಿ ಶೇ 89 ಅಂಕ ಗಳಿಸಿರುವ ಈಕೆಯ ಗುರು ಮಂಗಳೂರಿನ ಕೆ.ಉಮಾ ಅವರನ್ನು ಭರತ ನಾಟ್ಯ ಅಭ್ಯಾಸ ಮಾಡುತ್ತಲೇ ರಂಗಪ್ರವೇಶವನ್ನೂ ಮಾಡಿದ್ದಾಳೆ. 3ನೇ ತರಗತಿಯಲ್ಲಿ ಪಾಶ್ಚಿಮಾತ್ಯ ಡ್ರಮ್ ಬಾರಿಸುವುದನ್ನೂ ಕಲಿಯಲಾರಂಭಿಸಿ 2010ರ ಅಕ್ಟೋಬರ್‌ನಲ್ಲಿ ಉಡುಪಿ ಮಠದ ರಾಜಾಂಗಣದಲ್ಲಿ 1 ಗಂಟೆ ಭರತನಾಟ್ಯ, ಅರ್ಧ ತಾಸು ಡ್ರಮ್ ಭಾರಿಸಿ ಅಪಾರ ಜನಮೆಚ್ಚುಗೆ ಗಳಿಸಿದ್ದಾಳೆ.ಅಲ್ಲದೆ ಈಕೆಗೆ, ಕರ್ಣಾಟಿಕ್ ಸಂಗೀತ, ಸ್ಕೇಟಿಂಗ್ (ಸ್ಥಳೀಯ ಮಟ್ಟದಲ್ಲಿ 10 ಬಹುಮಾನ), ಪೆನ್ಸಿಲ್ ಸ್ಕೆಚ್, ಚಾರ್ಕೋಲ್ ಪೇಂಟಿಂಗ್ ಕರತಲಾಮಲಕ.ಇಷ್ಟೆಲ್ಲ ಕಲಿಯುವುದಕ್ಕೆ ಸಮಯ ಸಾಲುತ್ತದೆಯೇ? ಎಂಬ ಪ್ರಶ್ನೆಗೆ ‘ಓ.. ಸಾಲದೇ ಏನು. ಸರಿಯಾಗಿ ಪ್ಲಾನ್ ಮಾಡಿಕೊಂಡರಾಯಿತು ಅಷ್ಟೆ’ ಎನ್ನುತ್ತಾ ಬಟ್ಟಳುಗಣ್ಣು ಅರಳಿಸುತ್ತಾಳೆ  ವೈಷ್ಣವಿ.ಒಬ್ಬಳೇ ಮಗಳಾದ್ದರಿಂದ ಅಮ್ಮನ ಎಲ್ಲ ಸಮಯವೂ ಈಕೆಗೇ ಮೀಸಲಾಗಿರುವುದೂ ವೈಷ್ಣವಿ ಸಾಧನೆಗೆ ದೊಡ್ಡ ಪ್ರೇರಕ ಶಕ್ತಿಯಾಗಿದೆ.‘ನನಗೆ ರೋಲ್ ಮಾಡೆಲ್ ನನ್ನ ಅಪ್ಪ-ಅಮ್ಮನೇ’ ಎನ್ನುವ ವೈಷ್ಣವಿಗೆ ಮುಂದೆ ನ್ಯೂರೋ ಸರ್ಜನ್ ಆಗಬೇಕು ಎಂಬ ಕನಸಿದೆ. ಸದ್ಯಕ್ಕೆ ವ್ಯಾಸಂಗದ ಜತೆಗೇ 6-7 ಪುಟ್ಟ ವಿದ್ಯಾರ್ಥಿಗಳಿಗೆ ಅಬಾಕಸ್ ಉಚಿತ ಪಾಠ ಹೇಳಿಕೊಡುವ ಪುಟ್ಟ ಶಿಕ್ಷಕಿಯೂ ಆಗಿದ್ದಾಳೆ. ಆದರೆ ತಾನು ಅಬಾಕಸ್ ಕಲಿಯಲು 15-16 ಸೂತ್ರಗಳ ಒಂದು ಟರ್ಮ್‌ಗೆ  2000 ರೂಪಾಯಿ ಶುಲ್ಕ ಪಾವತಿಸಿದ್ದಾಳೆ.ಅಬಾಕಸ್ ಕಲಿತಿದ್ದರಿಂದ ಗಣಿತ ಸಮಸ್ಯೆ ಬಿಡಿಸುವುದು ಬಹಳ ಸಲೀಸಾಗಿದೆ. ಜತೆಗೆ ಏಕಾಗ್ರತೆ, ಗ್ರಹಣ ಶಕ್ತಿ, ನೆನಪು ಸಾಮರ್ಥ್ಯ ಹೆಚ್ಚುತ್ತದೆ. ಪರೀಕ್ಷೆಯಲ್ಲಿಯೂ ಗಣಿತ ಪತ್ರಿಕೆ ಬೇಗನೇ ಮುಗಿಸಿ ಕ್ರಾಸ್ ಚೆಕ್ ಮಾಡಲೂ ಹೆಚ್ಚು ಸಮಯ ಸಿಗುತ್ತದೆ. ಮೆಚ್ಚಿನ ಓದಿಗೆ ಹ್ಯಾರಿಪಾಟರ್, ಅಗಾಥಾ ಕ್ರಿಸ್ತಿ ಕೃತಿಗಳು. ಹೊರಾಂಗಣ ಕ್ರೀಡೆಯಲ್ಲಿ ಸ್ಕೇಟಿಂಗ್ ಇಷ್ಟ ಎನ್ನುತ್ತಾಳೆ ವೈಷ್ಣವಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry