ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ದಿನಗೂಲಿ ನಿಗದಿ

7

ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ದಿನಗೂಲಿ ನಿಗದಿ

Published:
Updated:

ರಾಮನಗರ: ನಗರದ 15 ವಾರ್ಡ್‌ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ನಿಯಮದ ಪ್ರಕಾರ ದಿನಕ್ಕೆ ಕನಿಷ್ಠ 134 ರೂ ದಿನಗೂಲಿ ನೀಡುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಬಿ.ಕೃಷ್ಣಮೂರ್ತಿ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ ಎಂದು ನಗರಸಭೆಯ ಸದಸ್ಯ ಶಿವಕುಮಾರಸ್ವಾಮಿ ತಿಳಿಸಿದರು.ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳ ಜತೆ ಮಿನಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದರು ಎಂದು ಶಿವಕುಮಾರ ಸ್ವಾಮಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು. ಪ್ರಸ್ತುತ ನಗರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 40 ಸಫಾಯಿ ಕರ್ಮಚಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ದಿನಕ್ಕೆ 100 ರೂಪಾಯಿ ನೀಡಲಾಗುತ್ತಿದೆ. ಅವರಲ್ಲದೆ ನಗರಸಭೆಯಲ್ಲಿ ಸುಮಾರು 55 ಜನ ಕಾಯಂ ಕರ್ಮಚಾರಿಗಳು ಇದ್ದು ಅವರಿಗೆ 134 ರೂಪಾಯಿ ದಿನಗೂಲಿ ನೀಡಲಾಗುತ್ತಿದೆ ಎಂಬುದನ್ನು ಆಯೋಗದ ಸದಸ್ಯರ ಗಮನಕ್ಕೆ ತರಲಾಯಿತು. ಆಗ ಎಲ್ಲರಿಗೂ ಕನಿಷ್ಠ ವೇತನವಾದ 134 ರೂಪಾಯಿ ಒದಗಿಬೇಕು. ಜತೆಗೆ ಎಲ್ಲರಿಗೂ ಪಿ.ಎಫ್ ಹಾಗೂ ಇಎಸ್‌ಐ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು ಎಂದರು.ನಗರ ಅಥವಾ ಜಿಲ್ಲಾ ವ್ಯಾಪ್ತಿಯಲ್ಲಿ ಮಲ ಹೊರುವ ಪದ್ಧತಿ ಇದ್ದರೆ ಕೂಡಲೇ ಅದರ ನಿರ್ಮೂಲನೆಗೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ಅವರ ಪುನರ್ವಸತಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶಿಸಿದರು ಎಂದು ಅವರು ತಿಳಿಸಿದರು. ಪ್ರತಿ ತಿಂಗಳು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಸಫಾಯಿ ಕರ್ಮಚಾರಿಗಳ ಸ್ಥಿತಿಗತಿ ಹಾಗೂ ಅವರ ಕುಂದು ಕೊರತೆಗಳನ್ನು ಆಲಿಸಬೇಕು ಎಂದು ತಿಳಿಸಿದ್ದಾಗಿ ಅವರು ಹೇಳಿದರು.ಅಲ್ಲದೆ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ಧಿಗೆ ನಗರಸಭೆ ಹಾಗೂ ಇತರ ಸ್ಥಳೀಯ ಸಂಸ್ಥೆಗಳು ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಲ್.ಚಂದ್ರಶೇಖರಯ್ಯ, ಜಿ.ಪಂ ಸಿಇಒ ಬೆಟ್ಟಸ್ವಾಮಿ, ದಲಿತ ಮುಖಂಡರಾದ ರಾ.ಸಿ.ದೇವರಾಜು, ಮೋಹನ್ ಕುಮಾರ್, ನಗರಸಭೆ ಸದಸ್ಯರು, ಅಧಿಕಾರಿಗಳೂ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry