ಸಫಾಯಿ ಕರ್ಮಚಾರಿಗಳಿಗೆ ಮೂಲಸೌಕರ್ಯ ನೀಡಿ

7

ಸಫಾಯಿ ಕರ್ಮಚಾರಿಗಳಿಗೆ ಮೂಲಸೌಕರ್ಯ ನೀಡಿ

Published:
Updated:

ಚಿತ್ರದುರ್ಗ: ಸಫಾಯಿ ಕರ್ಮಚಾರಿಗಳ ಪುನರ್ವಸತಿ, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಕೆ.ಬಿ.ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸಲಹೆ ನೀಡಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾನವ ಚಾಲಿತ ಮಲ ವಿಲೇವಾರಿ (ಮ್ಯಾನುಯಲ್ ಸ್ಕ್ಯಾವೆಂಜಿಂಗ್) ನಿಷೇಧ ಕ್ರಮಗಳು ಹಾಗೂ ಸಫಾಯಿ ಕರ್ಮಚಾರಿಗಳ ಏಳಿಗೆಗಾಗಿ ಜಿಲ್ಲೆಯಲ್ಲಿ ಜಾರಿಗೆ ತಂದಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.ಮಾನವ ಚಾಲಿತ ಮಲ ವಿಲೇವಾರಿ ಕರ್ಮಚಾರಿ ಪದ್ಧತಿಯನ್ನು ತೊಲಗಿಸಬೇಕು. ಈ ನಿಟ್ಟಿನಲ್ಲಿ ಆಯೋಗ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇತ್ತೀಚೆಗೆ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ (ಯುಜಿಡಿ) ಅನುಷ್ಠಾನಗೊಂಡಿದೆ. ಈ ಕಾರ್ಯದ ವಿಲೇವಾರಿಗೆ ಆಧುನಿಕ ಸಕ್ಕಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ಈಗ ಮಾನವಚಾಲಿತ ಮಲವಿಲೇವಾರಿ ಪದ್ದತಿ ಕಡಿಮೆಯಾಗಿದ್ದರೂ ಅಲ್ಲಲ್ಲಿ ಕಂಡು ಬರುತ್ತಿದೆ. ಅದನ್ನು ಸಂಪೂರ್ಣವಾಗಿ ಹೋಗಲಾಡಿಸ ಬೇಕಾಗಿದೆ. ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಲು ಅನುಕೂಲವಾಗಲು ಗಣತಿ ಕಾರ್ಯವನ್ನು ನಡೆಸಬೇಕಾಗಿದೆ. ನಗರ, ಪಟ್ಟಣ ಪ್ರದೇಶದಲ್ಲಿ ಗಣತಿದಾರರು ಮನೆಗಳಿಗೆ ಭೇಟಿನೀಡಿ ವಿವರವಾದ ಮಾಹಿತಿಯನ್ನು ಪಡೆದು ಸಫಾಯಿ ಕರ್ಮಚಾರಿಗಳ ಮರಸಮೀಕ್ಷೆ ನಡೆಸುವ ಬಗ್ಗೆ ಅಭಿಪ್ರಾಯಪಟ್ಟರು.ಪೌರಕಾರ್ಮಿಕರಿಗೆ ಸಕಾಲಕ್ಕೆ ಸರಿಯಾಗಿ ವೇತನ ನೀಡುವುದು, ವೈದ್ಯಕೀಯ ಸೌಲಭ್ಯ ಹಾಗೂ ಭವಿಷ್ಯನಿಧಿ ಇತ್ಯಾದಿ ಸರಿಯಾಗಿ ಪಾವತಿಯಾಗುತ್ತಿದೆಯೇ ಎಂಬುದರ ಬಗ್ಗೆ ಗಮನಿಸುವಂತೆ ನಗರಸಭೆ ಆಯುಕ್ತರಿಗೆ  ಕೃಷ್ಣಮೂರ್ತಿ ಸೂಚಿಸಿದರು.ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಮಾತನಾಡಿ, ಸಫಾಯಿ ಕರ್ಮಚಾರಿಗಳ ಆರ್ಥಿಕ ಜೀವನಮಟ್ಟ ಸುಧಾರಣೆಗಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ೧೯೯೩ರಿಂದ ೨೦೦೮ರವರೆಗೆ ವಿವಿಧ ಕಾರ್ಯಕ್ರಮಗಳಡಿ ಬ್ಯಾಂಕ್ ಮುಖಾಂತರ ಒಟ್ಟು ` ೭೮.೨೧ ಲಕ್ಷ ಆರ್ಥಿಕ ನೆರವನ್ನು ೪೯೯ ಸಫಾಯಿ ಕರ್ಮಚಾರಿಗಳ ಕುಟುಂಬಕ್ಕೆ ಒದಗಿಸಲಾಗಿದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿನ ತಾಲ್ಲೂಕು ಪಂಚಾಯ್ತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬಿಆರ್‌ಜಿಎಫ್ ಯೋಜನೆಯಡಿ ಒಂದೊಂದು ‘ಸಕ್ಕಿಂಗ್ ಮಿಷನ್’ ತೆಗೆದುಕೊಡುವಂತೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.‘ಜಿಲ್ಲೆಯ ೬ ಪಟ್ಟಣ ಹಾಗೂ ನಗರ ಪ್ರದೇಶದ ವ್ಯಾಪ್ತಿಯ ಪೌರಕಾರ್ಮಿಕರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು, ಮನೆಗಳ ದುರಸ್ತಿಗೆ, ಶಿಕ್ಷಣ, ಆರೋಗ್ಯ ಮತ್ತು ಕೌಶಲ ತರಬೇತಿ ಕಾರ್ಯಕ್ರಮ ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಕಳೆದ ಎರಡು ವರ್ಷದಲ್ಲಿ ` ೨೨.೭೫ ಲಕ್ಷ ರೂ. ವೆಚ್ದ ಮಾಡಲಾಗಿದೆ’ ಎಂದು ತಿಳಿಸಿದರು.ಪ್ರತಿ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರಿಗಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಆರು ಪಟ್ಟಣ ಹಾಗೂ ನಗರ ವ್ಯಾಪ್ತಿಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರುಗಳ ಗಣತಿಗಾಗಿ ಪುನರ್ ಸಮೀಕ್ಷೆ ಕೈಗೊಂಡು ಸಮೀಕ್ಷೆ ಪೂರ್ಣಗೊಳಿಸಲಾಗಿದ್ದು, ಅಂತಿಮ ಸಮೀಕ್ಷಾ ವರದಿಯನ್ನು ಪೌರಾಡಳಿತ ಇಲಾಖೆ ನಿರ್ದೇಶಕರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸಿಇಓ ಕೆ.ಎಂ.ನಾರಾಯಣಸ್ವಾಮಿ, ಎಸ್‌ಪಿ ಡಾ.ರವಿಕುಮಾರ್, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ರುದ್ರಪ್ಪ, ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ನಗರಸಭೆ ಆಯುಕ್ತರಾದ ಮಲ್ಲಾಪುರ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry