`ಸಫಾಯಿ ಕರ್ಮಚಾರಿಗಳ ಮನಸ್ಥಿತಿ ಬದಲಾಗಬೇಕು'

7

`ಸಫಾಯಿ ಕರ್ಮಚಾರಿಗಳ ಮನಸ್ಥಿತಿ ಬದಲಾಗಬೇಕು'

Published:
Updated:

ಕೆಜಿಎಫ್: ಸಫಾಯಿ ಕರ್ಮಚಾರಿಗಳು ಸ್ವಯಂ ಉದ್ಯೋಗ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲಿ ಎಂದು ಸರ್ಕಾರ ಯೋಜಿಸಿದೆ. ಆದರೆ ಬಹುತೇಕರು ನಮಗೆ ಅದೇ ಕೆಲಸ ಕೊಡಿ ಎಂದು ದುಂಬಾಲು ಬೀಳುತ್ತಿರುವುದು ವಿಪರ್ಯಾಸ ಎಂದು ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆ ರಾಜ್ಯ ಮಟ್ಟದ ಅನುಷ್ಠಾನ ಸಮಿತಿ ಸದಸ್ಯ ಜಗದೀಶ್ ಹಿರೇಮನಿ ವಿಷಾದ ವ್ಯಕ್ತಪಡಿಸಿದರು.



ರಾಬರ್ಟ್‌ಸನ್‌ಪೇಟೆ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಮಾತನಾಡಿ ನಿಮ್ಮ ಮುಂದಿನ ಪೀಳಿಗೆಯ ಬದುಕು ಬೇರೆ ರೀತಿಯಲ್ಲಿ ರೂಪಿಸಿಕೊಳ್ಳಲು ನೆರವಾಗುವ ಯೋಜನೆ ಬಿಟ್ಟು, ನಾವು ಸ್ವಯಂ ಉದ್ಯೋಗ ಮಾಡಲ್ಲ. ನಮಗೆ ಸಫಾಯಿ ಕರ್ಮಚಾರಿ ಕೆಲಸವನ್ನೇ ಕೊಡಿ ಎಂದು ದುಂಬಾಲು ಬೀಳುವ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದರು.



ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಸಫಾಯಿ ಕರ್ಮಚಾರಿಗಳು ಇರುವುದು ಕೆಜಿಎಫ್‌ನಲ್ಲಿ ಎಂದು ಅಂಕಿ ಅಂಶಗಳು ಹೇಳುತ್ತವೆ. ಸಫಾಯಿ ಕರ್ಮಚಾರಿಗಳೆಂದು ಹೇಳಿ 8000 ಮಂದಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಒಂದು ನಗರಸಭೆ ವ್ಯಾಪ್ತಿಯಲ್ಲಿ ನೂರರಿಂದ ನೂರೈವತ್ತು ಸಫಾಯಿ ಕರ್ಮಚಾರಿಗಳು ಮಾತ್ರ ಇರಲು ಸಾಧ್ಯ.



ಆದರೆ ಇಷ್ಟೊಂದು ಸಂಖ್ಯೆ ಹೇಗೆ ಬಂತು ಎಂಬುದನ್ನು ಪರಿಶೀಲಿಸಬೇಕು. ಸಫಾಯಿ ಕರ್ಮಚಾರಿಗಳಿಗೆಂದು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ನೀಡಿದ ಸಾಲದ ಹಣದಲ್ಲಿ ಶೇ.40 ರಷ್ಟು ಭಾಗ ಮಾತ್ರ ಫಲಾನುಭವಿಗಳ ಕೈಗೆ ಸಿಗುತ್ತದೆ. ಮುಂದಿನ ದಿನಗಳಲ್ಲಿ ಸಾಲಮನ್ನಾ ಆಗುತ್ತದೆ ಎಂಬ ಕಾರಣಕ್ಕೆ ಸಾಲ  ಪಡೆಯುವ ಮನೋಭಾವ ಬಹುತೇಕ ಸಫಾಯಿ ಕರ್ಮಚಾರಿಗಳಲ್ಲಿ ಇದೆ ಎಂದರು.



ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಗುರುಮೂರ್ತಿ ಮಾತನಾಡಿ, ಸಫಾಯಿ ಕರ್ಮಚಾರಿಗಳ ಸಂಘಟನೆಗಳು ಲೆಟರ್‌ಹೆಡ್‌ನಲ್ಲಿ ಫಲಾನುಭವಿಗಳ ಹೆಸರನ್ನು ನೀಡಿ, ಅವರಿಗೆ ಸಾಲ ಕೊಡಿ ಎಂದು ಒತ್ತಾಯ ಮಾಡುತ್ತವೆ. ಒಮ್ಮೆ ಸಾಲ ಪಡೆದವರು ಮತ್ತೊಮ್ಮೆ ಇನ್ನೊಂದು ಹೆಸರಿನಲ್ಲಿ ಸಾಲ ಪಡೆಯುವ ಕಾರ್ಯವೂ ನಡೆಯುತ್ತಿದೆ. ವಾರ್ಡ್ ಸಭೆಗಳನ್ನು ನಡೆಸಿ ಅಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.



ಮುಖಂಡರಾದ ಅನ್ಬಳಗನ್, ಮುತ್ತುಕುಮಾರ್‌ನಾಗರಾಜ್ ಮತ್ತಿತರು ಮಾತನಾಡಿದರು. ನಗರಸಭೆ ಆಯುಕ್ತ ಬಾಲಚಂದ್ರ ಮಾಹಿತಿ ನೀಡಿದರು. ನಗರಸಭೆ ಸದಸ್ಯ ಸುರೇಶ್, ನಗರಸಭೆ ವ್ಯವಸ್ಥಾಪಕ ನಂಜುಂಡಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry