ಮಂಗಳವಾರ, ನವೆಂಬರ್ 19, 2019
28 °C
`ಪ್ರಜಾವಾಣಿ' ಟೆಸ್ಟ್ ಡ್ರೈವ್

ಸಫಾರಿಯ ಹೊಸ ಅವತಾರ

Published:
Updated:

ಭಾರತದಲ್ಲಿ ಸ್ಟೋರ್ಟ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಕ್ಷೇತ್ರದಲ್ಲಿ ಮುಂಚಿನಿಂದಲೂ ಟಾಟಾ ಸಂಸ್ಥೆಯದ್ದೇ ಮೇಲುಗೈ. 1997ರಲ್ಲಿ ಮಾರುಕಟ್ಟೆಗೆ ಬಂದ ಸಫಾರಿ ಈಗಲೂ ಜನಪ್ರಿಯವೇ. ಈಗಲೂ ಸಫಾರಿಯನ್ನೇ ಕೊಳ್ಳುವ ಗ್ರಾಹಕರ ವರ್ಗವೊಂದಿದೆ. ಈಗ ಇದೇ ವಾಹನವನ್ನು ಮೇಲ್ದರ್ಜೆಗೇರಿಸಿ ಸ್ಟಾರ್ಮ್ ಎಂದು ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಇದನ್ನು ಟಾಟಾ ಸಂಸ್ಥೆ ರಿಯಲ್ ಎಸ್‌ಯುವಿ ಎಂದು ಕರೆಯುತ್ತಿದೆ.ಹಲವು ಕಂಪೆನಿಗಳು ಈಗ ಹೊಸ ಹೊಸ ಮಾದರಿಯ ಕಾರುಗಳು ಮತ್ತು ಎಸ್‌ಯುವಿಗಳನ್ನು ಮಾರುಕಟ್ಟೆಗೆ ತರುತ್ತಿರುವ ಈ ಹೊತ್ತಿನಲ್ಲಿ ಸಫಾರಿಯನ್ನು ಮೇಲ್ದರ್ಜೆಗೇರಿಸುವುದು ಟಾಟಾಗೆ ಅನಿವಾರ್ಯವೂ ಆಗಿತ್ತು.ಸಫಾರಿ ಸ್ಟಾರ್ಮ್‌ನಲ್ಲಾಗಿರುವ ಅತಿ ಮುಖ್ಯ ಬದಲಾವಣೆ ಎಂದರೆ ಅದರ ಹೊಸ ಬಾನೆಟ್. 2.2 ಲೀಟರ್‌ನ ವೇರಿಕಾರ್ ಡೀಸೆಲ್ ಎಂಜಿನ್ ಬಾನೆಟ್‌ನ ಒಳಗಿದೆ. ಟರ್ಬೊ ಚಾರ್ಜರ್ ಇದ್ದು ವೇರಿಯಬಲ್ ಟರ್ಬೈನ್ ಟೆಕ್ನಾಲಜಿ ಅಳವಡಿಸಲಾಗಿದ್ದು (ವಿಟಿಟಿ), 140 ಪಿಎಸ್ ಶಕ್ತಿ ಹಾಗೂ 320 ಎನ್‌ಎಂ ಟಾರ್ಕ್ ಒಳಗೊಂಡಿದೆ. ಈ ಹೊಸ ಎಂಜಿನ್‌ನಿಂದಾಗಿ ಕಾರ್‌ಗೆ ಅತಿ ವೇಗದ, ಚುರುಕಿನ ಚಾಲನೆ ಸಿಕ್ಕಿದೆ. ಅತಿ ಕಡಿಮೆ ಶಬ್ದ, ಕಂಪನ ಹಾಗೂ ಗಡಸುತನ ಇರುವುದು ಈ ಕಾರ್‌ಗೆ ಅಲ್ಟ್ರಾ ಮಾಡರ್ನ್ ಫೀಲ್ ಕೊಡುತ್ತದೆ.ಜತೆಗೆ ಸ್ಟಾರ್ಮ್‌ನಲ್ಲಿ 4 ವ್ಹೀಲ್ ಡ್ರೈವ್ ಹಾಗೂ 2 ವ್ಹೀಲ್ ಡ್ರೈವ್‌ಗೆ ಬದಲಾಯಿಸಲು ಎಲೆಕ್ಟ್ರಾನಿಕ್ ಶಿಫ್ಟ್ ಆನ್ ಫ್ಯೈ (ಇಎಸ್‌ಒಎಫ್) ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಅಂದರೆ ಕೇವಲ ಒಂದು ಬಟನ್ ಒತ್ತಿ ಡ್ರೈವ್ ಬದಲಿಸಿಕೊಳ್ಳುವ ಅವಕಾಶ. ಅಲ್ಲದೇ ಸ್ಟಾರ್ಮ್ 2 ವ್ಹೀಲ್ ಡ್ರೈವ್‌ನಲ್ಲಿ 14 ಕಿಲೋಮೀಟರ್ ಹಾಗೂ 4 ವ್ಹೀಲ್ ಡ್ರೈವ್‌ನಲ್ಲಿ 13.2 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಕೇವಲ 15 ಸೆಕೆಂಡ್‌ಗಳಲ್ಲಿ 100 ಕಿಲೋಮೀಟರ್ ವೇಗವನ್ನು ತಲುಪುತ್ತದೆ.

ಶಕ್ತಿಶಾಲಿ ವಾಹನ

ಆಫ್‌ರೋಡ್ ಶಕ್ತಿಸಾಮರ್ಥ್ಯಗಳ ಜೊತೆಗೆ ಇನ್ನೂ ಹೆಚ್ಚಿನ ಶಕ್ತಿ ಹಾಗೂ ಟಾರ್ಕ್ ಸ್ಟಾರ್ಮ್‌ಗೆ ಸಿಕ್ಕಿದೆ. ಮಹಿಂದ್ರಾ ಸ್ಕಾರ್ಪಿಯೊಗೆ 120 ಬಿಎಚ್‌ಪಿ (4000 ಆರ್‌ಪಿಎಂ) ಶಕ್ತಿಯಿದ್ದು, ಗರಿಷ್ಠ 290 ಎನ್‌ಎಂ ಟಾರ್ಕ್ (1800 ರಿಂದ 2800 ಆರ್‌ಪಿಎಂ) ಅನ್ನು ಮುಟ್ಟುತ್ತದೆ. ಹೊಸ ರೆನೊ ಡಸ್ಟರ್ 110 ಪಿಎಸ್ ಶಕ್ತಿ (3900 ಆರ್‌ಪಿಎಂ) ಹಾಗೂ 248 ಪಿಎಸ್ ಟಾರ್ಕ್ (3900 ಎನ್‌ಎಂ) ಹೊಂದಿದೆ. ಮಹಿಂದ್ರಾ ಎಕ್ಸ್‌ಯುವಿ 500 ಸಹ ಸ್ಟಾರ್ಮ್‌ನಷ್ಟೇ, ಅಂದರೆ 140 ಬಿಎಚ್‌ಪಿ ಹೊಂದಿದ್ದು, ಉತ್ತಮ ಶಕ್ತಿಯನ್ನು ಉತ್ಪಾದಿಸುತ್ತದೆ.ಸ್ಟಾರ್ಮ್ ಲ್ಯಾಡರ್ ಚ್ಯಾಸಿಸ್ ಹೊಂದಿದ್ದು ಅತಿ ಹೆಚ್ಚಿನ ತೂಕ ಹಾಗೂ ಒತ್ತಡವನ್ನು ತಡೆಯುವ ಶಕ್ತಿಯನ್ನು ಪಡೆದಿದೆ. ಎರಡು ಸ್ವತಂತ್ರ ಸಸ್ಪೆನ್ಷನ್ ಸಿಸ್ಟಂ ಇದ್ದು, ಅತ್ಯುತ್ತಮ ಸವಾರಿ ಅನುಭವ ನೀಡುತ್ತದೆ. ಈ ದೃಷ್ಟಿಯಲ್ಲಿ ಇದೊಂದು ಉತ್ತಮ ಐಷಾರಾಮಿ ವಾಹನವೇ ಸರಿ. ಆಫ್ ರೋಡ್‌ಗಂತೂ ಈ ವ್ಯವಸ್ಥೆಗಳೆಲ್ಲಾ ಇರಲೇಬೇಕು. ಇಲ್ಲವಾದಲ್ಲಿ ಪ್ರಯಾಣ ದುಸ್ತರವಾಗಿ ಬಿಡುತ್ತದೆ.

ಬದಲಾದ ನೋಟ

ನೋಟ ಬದಲಾಗಿರುವುದೇನೋ ನಿಜ. ಆದರೆ ಇವು ಗಮನಾರ್ಹ ಬದಲಾವಣೆಗಳೇನೂ ಅಲ್ಲ. ಇದು ಸಫಾರಿಯ ಹಳೆಯ ಅವತರಣಿಕೆಯನ್ನೇ ಬಹುವಾಗಿ ಹೋಲುತ್ತದೆ. ವಿನ್ಯಾಸಕಾರರು ಹೊಸ ವಾಹನವೊಂದನ್ನು ನೀಡುವ ಬದಲಿಗೆ ಸಫಾರಿಗೆ ಆಧುನಿಕ ಸ್ಪರ್ಶ ನೀಡಲು ಪ್ರಯತ್ನಿಸಿದ್ದಾರೆ. ಇದು ಸಹಜ.ಏಕೆಂದರೆ ಸಫಾರಿ ಇನ್ನೂ ಜನಪ್ರಿಯ ಮಾದರಿ. ಸ್ಟಾರ್ಮ್‌ನ ಎಂಜಿನ್ ಗ್ರಿಲ್ ಹೊಸದಾಗಿದೆ. ಮುಂಭಾಗದ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ವಾಹನಕ್ಕೆ ಹೊಸ ನೋಟ ಒದಗಿಸುತ್ತಿದೆ. ಬಾನೆಟ್‌ನ ಮೇಲೆ ಪವರ್ ಬಲ್ಜ್ ವಿನ್ಯಾಸವಿದೆ. ಇದು ವಾಹನಕ್ಕೆ ಬಲಿಷ್ಠ ನೋಟವನ್ನು ನೀಡುತ್ತದೆ. ಏರೋಡೈನಾಮಿಕ್ ಆಗಿ ವಿನ್ಯಾಸಗೊಳಿಸಲಾಗಿರುವ ಫೇರಿಂಗ್‌ಗಳು ಗಮನ ಸೆಳೆಯುತ್ತವೆ. ಎಳೆಯುವ ಮಾದರಿಯ ಡೋರ್ ಹ್ಯಾಂಡಲ್‌ಗಳು ಉತ್ತಮವಾಗಿ ಕೆಲಸ ಮಾಡುತ್ತವೆ. ತೆಳುವಾದ ವಿನ್ಯಾಸ ಇರುವ ಫುಟ್‌ಬೋರ್ಡ್ ಸ್ಪೋರ್ಟಿ ಲುಕ್ ನೀಡಿದೆ. ಸ್ಪೇರ್ ವ್ಹೀಲ್ ಹಿಂಭಾಗದ ಬದಲು ಈಗ ವಾಹನದ ತಳಭಾಗ ಸೇರಿರುವುದು ಒಂದು ಉತ್ತಮ ಬದಲಾವಣೆ.ಎಲ್ಲಕ್ಕಿಂತ ಮುಖ್ಯವಾಗಿ ಕಾರ್‌ಗೆ ಈಗ ವಿಶಾಲ ಎನ್ನಬಹುದಾದ ದೇಹವಿದೆ. ಕೆಟ್ಟ ರಸ್ತೆಗಳಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಓಡಿಸಲು ಇದು ಸಹಕಾರಿ. ಅತ್ಯುತ್ತಮ 2650 ಎಂಎಂ ವ್ಹೀಲ್‌ಬೇಸ್ ಹೊಂದಿದ್ದು, 4655 ಎಂಎಂ ಉದ್ದ, 1965 ಎಂಎಂ ಅಗಲ ಹಾಗೂ 1922 ಎಂಎಂ ಎತ್ತರವನ್ನು ಹೊಂದಿದೆ. ಅಗಲವಾದ ಟಯರ್‌ಗಳನ್ನು ನೀಡಿರುವ ಕಾರಣ, ಕಾರ್‌ಗೆ ಉತ್ತಮ ರಸ್ತೆ ಹಿಡಿತ ದಕ್ಕಿದೆ.ಅದೂ ಅಲ್ಲದೇ ಸಫಾರಿ ವಿಶೇಷವಾದ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಸಿಕ್ಕಿರುವುದು ಆಫ್‌ರೋಡ್‌ನ ಪ್ರಯಾಣಕ್ಕೆ ತನ್ನ ಹಳೆಯ ಭರವಸೆಯನ್ನು ಮುಂದುವರೆಸಿದಂತೆ ಆಗಿದೆ. ಹೊಂಡಗಳಿಂದ ತುಂಬಿದ ರಸ್ತೆಯಲ್ಲೂ ಅಡೆತಡೆಗಳಿಲ್ಲದೇ ಆರಾಮವಾಗಿ ಇದರಿಂದ ಸಾಗಬಹುದು. ಬೆಸ್ಟ್ ಇನ್ ಕ್ಲಾಸ್ 5.4 ಮೀಟರ್ ತಿರುಗಿಸುವ ವ್ಯಾಸವನ್ನು ಸ್ಟಾರ್ಮ್ ಹೊಂದಿದ್ದು, ಸುಲಭ ಚಾಲನೆ ಸಾಧ್ಯವಾಗಿದೆ. ಬೇರಾವುದೇ ಸಮಕಾಲೀನ ವಾಹನಗಳಲ್ಲಿ ಈ ಸೌಲಭ್ಯ ಇಲ್ಲದೇ ಇರುವುದು ವಿಶೇಷ.ಹೊಸ ರ‍್ಯಾಕ್ ಮತ್ತು ಪಿನಿಯನ್ ಸ್ಟೀರಿಂಗ್ ವ್ಯವಸ್ಥೆ ಇದ್ದು, ಅತ್ಯುತ್ತಮ ಸವಾರಿ ಭರವಸೆ ನೀಡುತ್ತದೆ. ಅದರಲ್ಲೂ ಹೆಚ್ಚಿನ ವೇಗದ ಚಾಲನೆಯಲ್ಲಿ ಇದು ಅತ್ಯುತ್ತಮ ವಾಹನ ಎನಿಸಿಕೊಳ್ಳುತ್ತದೆ. ಪಾರ್ಕ್ ಮಾಡಲು ಸಹಕರಿಸುವ ಸೆನ್ಸರ್ ಇದೆ. ಆಂಟಿ ಗ್ಲೇರ್ ಹಿಂಬದಿ ಕನ್ನಡಿ ಇದ್ದು, ಹೊರಭಾಗದ ಕನ್ನಡಿಗಳು ಸಹ, ಆಂಟಿ ಫಾಗ್ ಮಾದರಿಯ ಅತ್ಯುತ್ತಮ ತಂತ್ರಜ್ಞಾನವನ್ನು ಒಳಗೊಂಡಿವೆ.

ಸುಂದರ ಒಳಾಂಗಣ

ಸ್ಟಾರ್ಮ್ ಸುಂದರ ಹಾಗೂ ಶ್ರೀಮಂತ ಒಳಾಂಗಣ ವಿನ್ಯಾಸವನ್ನು ಒಳಗೊಂಡಿದೆ. ಅತ್ಯುತ್ತಮ ಹೆಡ್‌ಸ್ಪೇಸ್ ಹಾಗೂ ಲೆಗ್‌ರೂಂ ಅನ್ನು ಇದು ಒಳಗೊಂಡಿದ್ದು, ಅತ್ಯುತ್ತಮ ಲಗ್ಗೇಜ್ ಜಾಗವನ್ನೂ ಒಳಗೊಂಡಿದೆ. ಹಾಗಾಗಿ ಕುಟುಂಬ ಸಮೇತ ಪ್ರವಾಸ ಕೈಗೊಳ್ಳುವವರಿಗೆ ಸ್ಟಾರ್ಮ್ ಅತ್ಯುತ್ತಮ ಸಂಗಾತಿ ಆಗುತ್ತದೆ. ಎದುರಿನ ಎರಡೂ ಬಕೆಟ್ ಸೀಟ್‌ಗಳು ಆರಾಮಕ್ಕೆ ಹೇಳಿ ಮಾಡಿಸಿದಂತಿವೆ. ಹಿಂದೆ ಒರಗಿಸಿಕೊಳ್ಳುವ, ಎತ್ತರವನ್ನು ಹೊಂದಿಸುವ ಸೌಲಭ್ಯ ಈ ಸೀಟ್‌ಗಳಲ್ಲಿ ಇವೆ. ಉತ್ತಮ ಹವಾನಿಯಂತ್ರಣ ವುವಸ್ಥೆ ಇದ್ದು, ಹಿಂಭಾಗದ ಪ್ರಯಾಣಿಕರಿಗೆ ತಂಗಾಳಿ ತಲುಪುವಂತೆ ಏರ್ ಬ್ಲೋವರ್ ಸಹ ಅಳವಡಿತಗೊಂಡಿದೆ.ಕೈಯಲ್ಲಿ ಹೊಲೆದಿರುವ ಚರ್ಮದ ಸ್ಟೀರಿಂಗ್ ಹೊದಿಕೆ ಲಕ್ಷುರಿ ಲುಕ್ ಅನ್ನು ಸ್ಟಾರ್ಮ್‌ಗೆ ನೀಡುತ್ತದೆ. ಒಳಾಂಗಣದಲ್ಲಿ ಡ್ಯಾಷ್‌ಬೋರ್ಡ್‌ನಲ್ಲಿ ಕ್ರೋಮ್ ಹಾಗೂ ಮರದ ಫಿನಿಷಿಂಗ್ ಇರುವ ವಿನ್ಯಾಸಗಳಿದ್ದು, ಅದ್ದೂರಿ ಲುಕ್ ಅನ್ನು ನೀಡುತ್ತದೆ. ಬೆನ್ಸ್, ಬಿಎಂಡಬ್ಲೂ ಕಾರ್‌ಗಳಿಗೆ ಸರಿಸಮನಾಗಿ ಕಡಿಮೆ ಬೆಲೆಗೆ ಕಾರ್ ಅನ್ನು ಟಾಟಾ ನೀಡಿರುವುದು ಮೆಚ್ಚಬೇಕಾದ ಸಂಗತಿಯೇ.

ಸುರಕ್ಷೆಗೆ ಆದ್ಯತೆ

ಸ್ಟಾರ್ಮ್ ಸುರಕ್ಷೆಯಲ್ಲೂ ಅತ್ಯುತ್ತಮ ಅನಿಸಿಕೊಳ್ಳುತ್ತದೆ. ಇದರ ಚಾಸಿಸ್ (ಅಡಿಗಟ್ಟು) ಸುರಕ್ಷೆಗೆ ಹೇಳಿ ಮಾಡಿಸಿದಂತಿದೆ. ಎಂತಹ ಕೆಟ್ಟ ರಸ್ತೆಗಳಲ್ಲೂ ಉತ್ತಮ ರಸ್ತೆ ಸಮತೋಲನ ಕಾಪಾಡಿಕೊಳ್ಳಲು ಸಹಾಯಕಾರಿ ಆಗಿದೆ. ಕಾರ್‌ನ ಸುತ್ತಲೂ ಅಪಘಾತ ತಡೆಯುವ, ಒತ್ತಡದ ಬೀಮ್‌ಗಳಿದ್ದು, ಒಳಗೆ ಕುಳಿತವರಿಗೆ ಘಾಸಿ ಆಗದಂತೆ ನೋಡಿಕೊಳ್ಳುತ್ತದೆ. ಮುಂಭಾಗದಲ್ಲಿ ಎರಡು ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳಿದ್ದು ವಿಸ್ತರಿತ ಸುರಕ್ಷೆಯನ್ನು ನೀಡುತ್ತದೆ.ಸ್ಟಾರ್ಮ್‌ನಲ್ಲಿ ನಿರ್ವಾತ ಸ್ವತಂತ್ರ ಹೈಡ್ರಾಲಿಕ್ ಡಿಸ್ಕ್ ಬ್ರೇಕ್‌ಗಳಿದ್ದು, ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ವ್ಯವಸ್ಥೆ ಇರುವ ಕಾರಣ, ಅತ್ಯುತ್ತಮ ಬ್ರೇಕಿಂಗ್ ನೀಡುತ್ತದೆ. ಜತೆಗೆ ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಹೊಂದಿದ್ದು, ತ್ರಾಸವಿಲ್ಲದ ಬ್ರೇಕ್ ಬಳಕೆ ಸಾಧ್ಯವಾಗುತ್ತದೆ. ಜತೆಗೆ ಎಂಜಿನ್ ಇಮ್ಮಬಿಲೈಜರ್ ಇದ್ದು, ವಾಹನದ ಎಂಜಿನ್ ಅತಿಯಾಗಿ ಒತ್ತಡಕ್ಕೆ ಒಳಗಾದರೆ ತಂತಾನೆ ಆಫ್ ಆಗುತ್ತದೆ. ಅಪಘಾತ ಸಂದರ್ಭದಲ್ಲಿ ಡೋರ್‌ಗಳು ಜಾಮ್ ಆಗದಂತೆ ತಂತಾನೇ ತೆರೆದುಕೊಳ್ಳುವ ಉತ್ತಮ ಸೌಲಭ್ಯ ಇರುವುದು ಅಚ್ಚರಿ ಮೂಡಿಸುತ್ತದೆ.ಸ್ಟಾರ್ಮ್‌ನ ಬೆಲೆಯೂ ತೀರಾ ಹೆಚ್ಚೇನಲ್ಲ. ಬೆಂಗಳೂರಿನಲ್ಲಿ ಎಕ್ಸ್ ಶೋರೂಂ ಬೆಲೆ 9.95 ಲಕ್ಷ ರೂಪಾಯಿಗಳು. ಸ್ಟಾರ್ಮ್ ಎಲ್‌ಎಕ್ಸ್, ಇಎಕ್ಸ್, ವಿಎಕ್ಸ್ ಅವತರಣಿಕೆಗಳಲ್ಲಿ ಸಿಗುತ್ತದೆ. 7 ಬಣ್ಣಗಳ ಆಯ್ಕೆ ಇರುವುದು ಉತ್ತಮ ಸಂಗತಿ.

(ಲೇಖಕರು ವಾಣಿಜ್ಯ ಪತ್ರಕರ್ತರು. ಕಳೆದ 10 ವರ್ಷಗಳಿಂದ ವಾಹನಗಳ ಕುರಿತು ಬರೆಯುತ್ತಿದ್ದಾರೆ)

 

 

ಪ್ರತಿಕ್ರಿಯಿಸಿ (+)