ಗುರುವಾರ , ಆಗಸ್ಟ್ 22, 2019
27 °C

ಸಬಲೆ

Published:
Updated:

ರಾಧಾಮಣಿ, ಮೈಸೂರು

ನಮ್ಮ ತಂದೆ, ತಾಯಿಗೆ ಎಂಟು ಜನ ಮಕ್ಕಳು. ನಾಲ್ವರು ಗಂಡು, ನಾಲ್ವರು ಹೆಣ್ಣು. ಎಲ್ಲರಿಗೂ ಮದುವೆಯಾಗಿದೆ. ತಂದೆ 11 ವರ್ಷದ ಹಿಂದೆ ಮತ್ತು ತಾಯಿ 7 ವರ್ಷದ ಹಿಂದೆ ಕಾಲವಾಗಿದ್ದಾರೆ.


ತಂದೆಯ ಸ್ವಯಾರ್ಜಿತವಾದ 50 ಎಕರೆ ಜಮೀನಿದೆ. ಈಗ ಗಂಡು ಮಕ್ಕಳೆಲ್ಲರೂ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡು ಜಮೀನುಗಳನ್ನು ಮಾರುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಪಾಲಿಲ್ಲ ಎನ್ನುತ್ತಿದ್ದಾರೆ. ಇದು ಸರಿಯೇ? ಇಲ್ಲ ಎಂದಾದರೆ ಯಾವ ಕಾಯ್ದೆ ಮತ್ತು ಸೆಕ್ಷನ್ ಪ್ರಕಾರ ನಾವು ಹೆಣ್ಣು ಮಕ್ಕಳು ಪಾಲು ಕೇಳಬಹುದು? ಜಮೀನು ಮಾರುವಾಗ ಬಾಂಡ್ ಪೇಪರ್‌ಗೆ ಹೆಣ್ಣು ಮಕ್ಕಳ ರುಜು ಬೇಡ ಎನ್ನುತ್ತಿದ್ದಾರೆ. ಅದು ನಿಜವೇ?-ಹಿಂದೂ ವಾರಸಾ ಕಾಯಿದೆಯ ಎಂಟನೇ ಕಲಮಿನ ಪ್ರಕಾರ, ತನ್ನ ಆಸ್ತಿಯನ್ನು ವಿತರಣೆ ಮಾಡದೇ ತೀರಿಕೊಳ್ಳುವ ಹಿಂದೂ ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ, ಆತನ ಒಂದನೇ ದರ್ಜೆಯ ವಾರಸುದಾರರಿಗೆಲ್ಲ ಸಮನಾದ ಹಕ್ಕು ಇರುತ್ತದೆ. ಅದರಂತೆ, ನಿಮ್ಮ ತಂದೆಯ ಎಂಟು ಮಕ್ಕಳಿಗೂ ಭಾಗ ಬರಬೇಕಾದದ್ದು ನ್ಯಾಯ.ಹೆಣ್ಣು ಮಕ್ಕಳಿಗೆ ಭಾಗವಿಲ್ಲ ಎನ್ನುವುದು ಸರಿಯಲ್ಲ. ನಿಮ್ಮ ಭಾಗ ಕೇಳಿ ನೀವು ದಾವೆ ಹೂಡಬಹುದು ಹಾಗೂ ದಾವೆ ತೀರ್ಮಾನ ಆಗುವವರೆಗೆ ಜಮೀನು ಮಾರಾಟ ಮಾಡದಂತೆ ಗಂಡು ಮಕ್ಕಳ ವಿರುದ್ಧ ಮಧ್ಯಂತರ ನಿಷೇಧಾಜ್ಞೆಯನ್ನು ಕೋರಬಹುದು. ಆಸ್ತಿಯನ್ನು ಮಾರಲು ನಿಮ್ಮ ಒಪ್ಪಿಗೆಯ ಸಹಿ ಬೇಕು. ಆಗ ಮಾತ್ರ ಸಂಪೂರ್ಣ ಆಸ್ತಿಯಲ್ಲಿ, ಅಂದರೆ ಹೆಣ್ಣು ಮಕ್ಕಳ ಹಕ್ಕಿನ ಭಾಗವೂ ಸೇರಿದಂತೆ ಖರೀದಿಸಿದವರಿಗೆ ಆಸ್ತಿಯ ಪೂರ್ಣ ಮಾಲೀಕತ್ವ ಸ್ಪಷ್ಟವಾಗಿ ವರ್ಗಾವಣೆ ಆಗುತ್ತದೆ.ಬಿ.ಕೆ.ಭಾನುಮತಿ, ಬೆಂಗಳೂರು

50 ವರ್ಷದ ನಾನು, ಪತಿ ಹಾಗೂ ಒಬ್ಬ ಹೆಣ್ಣು ಮಗಳ ಸಂಸಾರ ನಮ್ಮದು. ಪತಿ 2004ರಲ್ಲಿ ಚನ್ನಪಟ್ಟಣದ ಹೊಸ ಬಡಾವಣೆಯಲ್ಲಿ 30x40 ನಿವೇಶನ ಖರೀದಿಸಿ, ಅದನ್ನು ನನ್ನ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ನಮಗೆ ಅದರ ಹೊರತು ಇನ್ಯಾವುದೇ ಆಸ್ತಿಪಾಸ್ತಿಯಾಗಲೀ, ಹಣಕಾಸಿನ ಅನುಕೂಲವಾಗಲೀ ಇಲ್ಲ. ಸದ್ಯಕ್ಕೆ ಆ ನಿವೇಶನದಲ್ಲಿ ಮನೆ ಕಟ್ಟುವ ಅಥವಾ ಮಾರಾಟ ಮಾಡುವ ಉದ್ದೇಶ ಇಲ್ಲ. ಮಗಳ ಭವಿಷ್ಯಕ್ಕಾಗಿ ಅದನ್ನು ಹಾಗೇ ಬಿಟ್ಟುಕೊಂಡಿದ್ದೇವೆ.

ಈಗ ನನ್ನ ಸಮಸ್ಯೆ ಏನೆಂದರೆ, ನಾವು ನಿವೇಶನ ಕೊಂಡಾಗಿನಿಂದ ಒಂದು ಸಲವೂ ಕಂದಾಯ ಕಟ್ಟಿಲ್ಲ. ಹಾಗಾಗಿ1. ನಾವು ಕಂದಾಯ ಕಟ್ಟದೇ ಎಷ್ಟು ವರ್ಷ ನಿವೇಶನವನ್ನು ಹಾಗೇ ಬಿಟ್ಟುಕೊಂಡಿರಬಹುದು?

2. ಆಯಾ ವರ್ಷವೇ ಕಟ್ಟಬೇಕೇ? ಹಾಗೆ ಕಟ್ಟದಿದ್ದರೆ ದಂಡ ವಿಧಿಸುವರೇ?

3. ಹತ್ತು ವರ್ಷಕ್ಕೂ ಹೆಚ್ಚು ಕಾಲ ಕಂದಾಯ ಕಟ್ಟದಿದ್ದರೆ (ಮಗಳ ವಿದ್ಯಾಭ್ಯಾಸ ಮುಗಿಯುವವರೆಗೆ ಕಂದಾಯ ಕಟ್ಟಲಾಗದು) ತೊಂದರೆ ಆಗುವುದೇ?
- ಸರ್ಕಾರ ವಿಧಿಸುವ ಯಾವುದೇ ತೆರಿಗೆ, ಶುಲ್ಕಗಳನ್ನು ನಿಗದಿತ ಸಮಯಕ್ಕೆ ಪಾವತಿಸುವುದು ನಾಗರಿಕರ ಕಾನೂನುಬದ್ಧ ಕರ್ತವ್ಯ. ಆಸ್ತಿ ತೆರಿಗೆಯನ್ನು ಪಾವತಿಸುವುದೂ ಸಹ. ತೆರಿಗೆ ಪಾವತಿಸದಿದ್ದರೆ ಅದರ ವಸೂಲಿಗೆ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ತೆರಿಗೆ ಪಾವತಿಸಲು ವಿಳಂಬ ಆಗಿದ್ದಲ್ಲಿ ಕರ್ನಾಟಕ ಮುನಿಸಿಪಾಲಿಟಿಗಳ ಕಾಯ್ದೆ, ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ನುಗಳ ಕಾಯ್ದೆಯಡಿ ದಂಡ ವಿಧಿಸಲೂ ಅಧಿಕಾರವಿದೆ. ಆದ್ದರಿಂದ ನೀವು ನಿಮ್ಮ ನಿವೇಶನಕ್ಕೆ ಪಾವತಿಸಬೇಕಾದ ಬಾಕಿ ಕಂದಾಯವನ್ನು ಪಾವತಿಸುವುದು ಸೂಕ್ತ. ತಿಳಿದೂ ತಿಳಿದೂ ಕಾನೂನು ಪಾಲಿಸದೆ ವೃಥಾ ದಂಡ ತೆರುವುದು ಏತಕ್ಕೆ?ವಿಳಾಸ: ಸಂಪಾದಕರು, `ಸಬಲೆ', ಭೂಮಿಕಾ ವಿಭಾಗ, ಪ್ರಜಾವಾಣಿ, ನಂ. 75, ಎಂ.ಜಿ. ರಸ್ತೆ, ಬೆಂಗಳೂರು- 560 001 ಇ-ಮೇಲ್: bhoomika@prajavani.co.in

Post Comments (+)