ಸಬಲೆ

7

ಸಬಲೆ

Published:
Updated:
ಸಬಲೆ

ಹೆಸರು, ಊರು ಬೇಡ

ಮೇಡಂ, 34 ವರ್ಷದ ಗೃಹಿಣಿಯಾದ ನನಗೆ ಇಬ್ಬರು ಮಕ್ಕಳಿದ್ದಾರೆ. ಈ ಮೊದಲು 8 ವರ್ಷ ನಾನು ಪ್ರತಿಷ್ಠಿತ ಐ.ಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ತಿಂಗಳಿಗೆ 40 ಸಾವಿರ ರೂಪಾಯಿಗೂ ಹೆಚ್ಚು ಸಂಬಳ ಪಡೆಯುತ್ತಿದ್ದೆ. ಆದರೆ ಹೀಗೆ ಬಂದ ಎಲ್ಲ ಹಣವನ್ನೂ ನಾನು ನನ್ನ ಗಂಡನಿಗೆ ಕೊಡಬೇಕಾಗಿತ್ತು.

ಹೀಗಾಗಿ, ದುಡಿಯುವುದರಿಂದ ಯಾವ ಪ್ರಯೋಜನವೂ ಇಲ್ಲ ಎನಿಸಿ ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟೆ. ಸಣ್ಣ ಸಣ್ಣ ವಿಚಾರಗಳಿಗೂ ಸ್ವಂತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನನಗಿಲ್ಲ. ಮಕ್ಕಳೊಂದಿಗೆ ಒಂಟಿಯಾಗಿ ಬದುಕುವ ಧೈರ್ಯ ಸಹ ಇಲ್ಲ.

ಇದನ್ನು ಅರಿತಿರುವ ನನ್ನ ಪತಿ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈಗ ನನ್ನ ಎಲ್ಲ ಖರ್ಚುವೆಚ್ಚಕ್ಕೂ ನಾನು ಅವರನ್ನೇ ಅವಲಂಬಿಸಬೇಕಾಗಿದೆ. ನನ್ನ ಬಗ್ಗೆಯಾಗಲೀ ಮಕ್ಕಳ ಬಗ್ಗೆಯಾಗಲೀ ಅವರಿಗೆ ಯಾವುದೇ ಕಾಳಜಿ ಇಲ್ಲ. ಕೇವಲ 10 ರೂಪಾಯಿಗೂ ಅವರನ್ನು ಬೇಡುವಂತಹ ಸ್ಥಿತಿ ನನಗೆ ಬಂದಿದೆ. ಇದರಿಂದೆಲ್ಲ ತೀವ್ರ ಹತಾಶಳಾಗಿರುವ ನಾನು, ನಿಮ್ಮಿಂದ ಕಾನೂನು ಸಲಹೆಯನ್ನು ಎದುರು ನೋಡುತ್ತಿದ್ದೇನೆ.

ಉತ್ತರ: ಐ.ಟಿ ಕ್ಷೇತ್ರದಲ್ಲಿ ತಿಂಗಳಿಗೆ 40 ಸಾವಿರ ರೂಪಾಯಿ ಸಂಪಾದಿಸುವಷ್ಟು ಶಕ್ತಿ ಇರುವ ನೀವು ಖಂಡಿತಾ ನಿಮ್ಮ ಪತಿಯ ದಬ್ಬಾಳಿಕೆಯನ್ನು ಎದುರಿಸಿ, ಅವರಿಗೆ ನಿಮ್ಮ ಬಗ್ಗೆ ಗೌರವ ಭಾವನೆ ಹುಟ್ಟುವಂತೆ ಮಾಡುವ ಶಕ್ತಿ ಹೊಂದಿರುತ್ತೀರಿ ಎಂಬ ವಿಶ್ವಾಸ ನನಗಿದೆ. ಒಂಟಿ ಹೆಣ್ಣು ಸಮಾಜದಲ್ಲಿ ಬಾಳಲು ಕಷ್ಟ ಎಂದು ನಿಮ್ಮ ಅನಿಸಿಕೆಯಾದರೆ, ಅಂತಹವರಿಗೆ ಆಶ್ರಯ ನೀಡುವ ಅಭಯಾಶ್ರಮಗಳು ಇವೆ.

ಆದರೆ ನಾನು ನಿಮಗೆ ವೈವಾಹಿಕ ಜೀವನದಿಂದ ಹೊರಬರಲು ಹೀಗೆ ಹೇಳುತ್ತಿಲ್ಲ. ಮೊದಲು ಯಾವುದಾದರೂ ಆಪ್ತ ಸಲಹಾ ಕೇಂದ್ರವನ್ನು ಸಂಪರ್ಕಿಸಿ ನಿಮ್ಮ ತೊಂದರೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ.

ಹಾಗಾಗದಿದ್ದರೆ, ಕಾನೂನಿನಡಿ ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ಜೀವನಾಂಶಕ್ಕೆ ಅಥವಾ ಇನ್ಯಾವುದೇ ಪರಿಹಾರಕ್ಕೆ ಕೌಟುಂಬಿಕ ನ್ಯಾಯಾಲಯದಲ್ಲಿ ಹಕ್ಕೊತ್ತಾಯ ಮಾಡಬಹುದು. ಮಹಿಳೆಯರಿಗೆ ಉಚಿತ ಕಾನೂನು ಸೇವೆ ಹಾಗೂ ಸಲಹೆ ನೀಡಲು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಇದೆ. ಅದು ಕಾನೂನು ಪ್ರಕ್ರಿಯೆಗೆ ತಗಲುವ ಶುಲ್ಕ, ಕಾನೂನು ಸೇವೆಯನ್ನೂ ಮಹಿಳೆಯರಿಗೆ ಒದಗಿಸುತ್ತದೆ.ನಿಮಗಿನ್ನೂ ಚಿಕ್ಕ ವಯಸ್ಸು. ಈಗಲೂ ಮತ್ತೆ ನೌಕರಿ ಸೇರಬಹುದು. ಆತ್ಮವಿಶ್ವಾಸದಿಂದ ಕೂಡಿದ ಹೊಸ ಜೀವನ ಪ್ರಾರಂಭಿಸಿ. ಜೀವನದಲ್ಲಿ ಅಧೈರ್ಯ ಹೊಂದದೆ, ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಾಳಲು ಪ್ರಯತ್ನಿಸಿ. ನಿಮ್ಮ ಬಗ್ಗೆ ನಿಮಗೆ ನಂಬಿಕೆ, ಸ್ವಾಭಿಮಾನ ಇರಲಿ. ಆಗ ಮಾತ್ರ ನೀವು ನಿಮ್ಮ ಮಕ್ಕಳನ್ನು ಒಳ್ಳೆಯ ಪ್ರಜೆಗಳಾಗುವಂತೆ ಸೂಕ್ತವಾಗಿ ರೂಪಿಸಬಲ್ಲಿರಿ. ಒಬ್ಬ ಮಡದಿಯಾಗಿ ನಿಮ್ಮ ಸ್ಥಾನವನ್ನೂ, ನಿಮ್ಮ ಅಸ್ತಿತ್ವವನ್ನೂ ಸ್ಥಾಪಿಸಲು ಪ್ರಯತ್ನ ಪ್ರಾರಂಭಿಸಿ. ನಿಮಗೆ ಶುಭವಾಗಲಿ.

ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ವಿಳಾಸ: ಪ್ರಜಾವಾಣಿ, ಭೂಮಿಕಾ ವಿಭಾಗ, ನಂ. 75, ಎಂ.ಜಿ ರಸ್ತೆ, ಬೆಂಗಳೂರು- 560 001. ಇ ಮೇಲ್- bhoomika@prajavani.co.in

bhoomikapv@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry