ಬುಧವಾರ, ಜೂನ್ 23, 2021
24 °C

ಸಬಲೆ

ಪ್ರಭಾ ಮೂರ್ತಿ Updated:

ಅಕ್ಷರ ಗಾತ್ರ : | |

ಶ್ರೀಜಯ, ಊರು ಬೇಡ

* ಮದುವೆಯಾಗಿ ಮೂರು ವರ್ಷ ಕಳೆದಲ್ಲಿ ಗಂಡನ ಆಸ್ತಿಯಲ್ಲಿ ಹೆಂಡತಿಗೂ ಹಕ್ಕಿದೆಯಂತೆ ನಿಜವೇ? ಮೂರು ವರ್ಷದ ನಂತರ ವಿಚ್ಛೇದನ ಪಡೆದರೆ ಹೆಂಡತಿ ಆಸ್ತಿಯಲ್ಲಿ ಹಕ್ಕು ಕೇಳಬಹುದೇ? ಜೀವನಾಂಶ ಕೇಳಬಹುದೇ? ಅಥವಾ ಮೂರು ವರ್ಷದ ಒಳಗೂ ಆಸ್ತಿಯಲ್ಲಿ ಪಾಲು ಹಾಗೂ ಜೀವನಾಂಶ ಸಿಗುತ್ತದೆಯೇ?


- ನೀವು ಅಂದುಕೊಂಡಿರುವ ಪತ್ನಿಯ ಆಸ್ತಿ ಹಕ್ಕುಗಳು ಇನ್ನೂ ಕಾಯಿದೆಯಾಗಿ ಜಾರಿಗೆ ಬಂದಿಲ್ಲ. ಈಗ ಜಾರಿಯಲ್ಲಿರುವ ಕಾಯಿದೆಯ ಪ್ರಕಾರ ಪತ್ನಿಗೆ ಪತಿಯ ಆಸ್ತಿಯಲ್ಲಿ ಆತನ ಜೀವಿತಾವಧಿಯಲ್ಲಿ ಹಕ್ಕು ಇಲ್ಲ. ಜೀವನಾಂಶದ ಹಕ್ಕು ಪತ್ನಿಯರಿಗೆ ಮದುವೆಯಾದಂದಿನಿಂದಲೂ ಇರುತ್ತದೆ. ಅದಕ್ಕಾಗಿ ಮೂರು ವರ್ಷ ಅಥವ ಇಂತಿಷ್ಟು ಕಾಲವಾಗಬೇಕೆಂಬ ನಿಯಮವಿಲ್ಲ. ಪತಿ–ಪತ್ನಿ ಸಂಬಂಧ ಪ್ರಾರಂಭವಾದ ಕ್ಷಣದಿಂದ ಪತ್ನಿಯ ಜೀವನ ನಿರ್ವಹಣೆಯ ಜವಾಬ್ದಾರಿಯು ಪತಿಯ ಮೇಲೆ ಬರುತ್ತದೆ, ಆಕೆಗೆ ತನ್ನದೇ ಆದ ಸಂಪಾದನೆ ಇಲ್ಲದಿದ್ದಲ್ಲಿ. ಆದರೆ ಒಂದು ಸಂಸಾರ ಸುಗಮವಾಗಿ ಸಾಗಬೇಕಾದರೆ ಹಕ್ಕುಗಳಿಗಿಂತ ಪರಸ್ಪರ ನಂಬಿಕೆ, ಪ್ರೀತಿ, ಗೌರವ, ವಿಶ್ವಾಸಗಳು ಮುಖ್ಯವಾಗುತ್ತವೆ. ಇವುಗಳಿದ್ದರೆ ಪರಸ್ಪರರ ಜವಾಬ್ದಾರಿಗಳನ್ನು ಯಾರೂ ತಿಳಿ ಹೇಳಬೇಕಾಗದು, ಅದಕ್ಕಾಗಿ ಒತ್ತಾಯಿಸುವ ಪ್ರಮೇಯವೂ ಬಾರದು.

ಎಸ್. ಭ್ರಮರಾಂಬ, ಊರು ಬೇಡ

* ನಾನು 54 ವರ್ಷದ ವಿವಾಹಿತೆ. ನನ್ನ ತಂದೆ ತಮ್ಮ ಸ್ವಯಾರ್ಜಿತ ಆಸ್ತಿಯಲ್ಲಿ ಒಂದು ಅಂಗಡಿಯನ್ನು ನನ್ನ ಹೆಸರಿಗೆ ದಾನಪತ್ರ ಬರೆದು, ಸುಮಾರು 4 ತಿಂಗಳ ಹಿಂದೆ ರಿಜಿಸ್ಟರ್‌ ಮಾಡಿಕೊಟ್ಟಿದ್ದಾರೆ. ದಾನಪತ್ರದ ಕೊನೆಯಲ್ಲಿ ‘In full and final settlement’ ಎಂದು ಬರೆದಿದೆ. ಆದರೆ ದಾನಪತ್ರದಲ್ಲಿ ಹೀಗೆ ಬರೆದಿದ್ದರೆ ಈ ಪತ್ರ ಕಾನೂನು ಪ್ರಕಾರ ಊರ್ಜಿತವಾಗುವುದಿಲ್ಲ ಎಂದು ಕೇಳಿದ್ದೇನೆ. ಇದು ನಿಜವೇ? ನನ್ನ ಸಂದೇಹವನ್ನು ಪರಿಹರಿಸಿ.


‌– ನೀವು ಹೇಳಿರುವ ಒಕ್ಕಣೆಯು ಈ ಆಸ್ತಿ ವರ್ಗಾವಣೆಯು ನಿಮಗೆ ನಿಮ್ಮ ತಂದೆ ಅವರಿಂದ ಬರಬೇಕಾಗಿದ್ದ ಯಾವುದೋ ಬಾಕಿ ತೀರಿಸಲು ಮಾಡಿರಬಹುದೆಂದು ಅರ್ಥ ಕಲ್ಪಿಸುತ್ತದೆ. ಆದರೆ ಯೋಚಿಸಬೇಡಿ.  ದಾನಿ ಆದವರೇ ಪತ್ರ ಬರೆದು ಅದನ್ನು ಕಾರ್ಯಗತ ಮಾಡಿದ್ದಾರೆಂಬ  ಸತ್ಯದ ಬಗ್ಗೆ  ಒಪ್ಪಿಗೆ ಇದ್ದಲ್ಲಿ, ಅನುಮಾನಗಳಿಲ್ಲದಿದ್ದಲ್ಲಿ, ಅದರ ಬರಹಗಾರರು ಏನಾದರೂ ತಪ್ಪಾಗಿ ಒಕ್ಕಣೆಗಳನ್ನು ಬರೆದಿದ್ದರೂ ದಾನ ಪಡೆದವರ ವಿರುದ್ಧ ಹೋಗುವುದಿಲ್ಲ. ಆದರೆ ಆ ದಾನ ಪತ್ರದ ಸತ್ಯಾಸತ್ಯತೆಯೇ ಪ್ರಶ್ನೆಗೊಳಗಾದಲ್ಲಿ, ಅಂತಹ ದಾನ ಪತ್ರವನ್ನು ಮೋಸದಿಂದ ಪಡೆಯಲಾಗಿದೆಯೆಂದು ಸಾಬೀತಾದಲ್ಲಿ,  ದಾನದ ಲಾಭವನ್ನು ಪಡೆಯುವ ಉದ್ದೇಶದಿಂದ ದಾನ ಪಡೆದವರೇ ಮಾಡಿಸಿದ್ದಾರೆಂದು ತಿಳಿಯಲಾಗುತ್ತದೆ. ದಾನದ ಕ್ರಿಯೆಯಲ್ಲಿ, ದಾನ ನೀಡುವವರ ಯಾವುದೇ ಅನುಚಿತ ಪ್ರಭಾವವಿಲ್ಲದ, ಬಲವಂತವಿಲ್ಲದ,  ಸ್ವಯಂ ಇಚ್ಛೆ, ಸ್ವಯಂ ನಿರ್ಧಾರಗಳು ಮತ್ತು ದಾನ ಪಡೆದವರು ಅದನ್ನು ಸ್ವೀಕರಿಸುವ ಪ್ರಕ್ರಿಯೆಗಳು ಮುಖ್ಯವಾಗುತ್ತವೆ. ನಿಮ್ಮ ತಂದೆ ಸ್ವ ಇಚ್ಛೆಯಿಂದ ನಿಮಗೆ ಅಂಗಡಿಯನ್ನು ದಾನವಾಗಿ ಕೊಟ್ಟಿರುವುದರಿಂದ ಅದರಲ್ಲಿರುವ ಒಕ್ಕಣೆಯೊಂದರಿಂದ ಅದು ವಿಫಲವಾಗಲಾರದು. ಇಡೀ ದಾನಪತ್ರದಲ್ಲಿರುವ ಪದಗಳಿಂದ ನಿಮ್ಮ ತಂದೆಯವರ ಉದ್ದೇಶದ ಬಗ್ಗೆ ಅರ್ಥೈಸಬಹುದು. ವಕೀಲರೊಬ್ಬರಿಗೆ  ದಾನಪತ್ರವನ್ನು ತೋರಿಸಿ ಸಲಹೆ ಕೇಳಿರಿ.

ಹೆಸರು ಬೇಡ, ಊರು ಬೇಡ

* ನನ್ನ ಗಂಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ. ನನಗೆ ಬೆದರಿಕೆ ಹಾಕುತ್ತಾರೆ. ನಾನು ಠಾಣಾಧಿಕಾರಿಗಳು, ಮೇಲಾಧಿಕಾರಿಗಳನ್ನು ಸಂಪರ್ಕಿಸಿದೆ, ಪ್ರಯೋಜನವಾಗಲಿಲ್ಲ. ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ನನಗೆ ಸರಿಯಾದ ಕಾನೂನಿನ ಅರಿವಿಲ್ಲ. ಆದ್ದರಿಂದ ದಯವಿಟ್ಟು ಕಾನೂನಿನ ಸೂಕ್ತ ಮಾಹಿತಿ ತಿಳಿಸಿ. ನನ್ನ ಗಂಡನನ್ನು ಆಕೆಯಿಂದ ಬಿಡುಗಡೆಗೊಳಿಸಿಕೊಳ್ಳುವುದು ಹೇಗೆ ತಿಳಿಸಿ. ನಾನು ಯಾವ ರೀತಿಯ ಕಾನೂನು ಹೋರಾಟ ಮಾಡಬಹುದೆಂದು ಹೇಳಿ.


- ಇದು ಬಲವಂತದಿಂದ, ಆದೇಶದಿಂದ ಆಗದ ಕೆಲಸ. ಮನ:ಪರಿವರ್ತನೆಯಾಗಬೇಕು. ನಿಮ್ಮಿಂದ ದೂರ ಸರಿಯಲು ಕಾರಣವೇನಿರಬಹುದೆಂದು ಅರಿಯಲು ಪ್ರಯತ್ನಿಸಿ. ಕೇವಲ ಆಕೆಯ ಆಕರ್ಷಣೆ ಯಾ ಪ್ರಭಾವಗಳೇ ಅಲ್ಲದೆ ಬೇರೇನಾದರೂ ಕಾರಣದಿಂದ ನಿಮ್ಮ ಪತಿ ಹೀಗೆ ಮಾಡುತ್ತಿದ್ದಾರೆಯೇ ಎಂದು ಸೂಕ್ಶ್ಮವಾಗಿ ತಿಳಿಯಲು ಪ್ರಯತ್ನಿಸಿ. ಅದಕ್ಕಾಗಿ ನೀವು ಮೊದಲು ಕೌಟುಂಬಿಕ ಸಲಹಾ ಕೇಂದ್ರವೊಂದನ್ನು ಸಂಪರ್ಕಿಸಿ ನಿಮ್ಮ ಪತಿಯನ್ನೂ ಕರೆಸಿ ನಿಮ್ಮ ವಿವಾದವನ್ನು ನುರಿತ ಕೌಟುಂಬಿಕ ಸಲಹೆಗಾರರ ಸಹಾಯದಿಂದ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ನಂತರ ವಕೀಲರನ್ನು ಸಂಪರ್ಕಿಸಿ ಕಾನೂನು ಪರಿಹಾರ ಪಡೆಯಬಹುದಾಗಿದೆ. ನಿಮ್ಮ ಪತಿಯಿಂದ ನೀವು ದಾಂಪತ್ಯದ ಹಕ್ಕನ್ನು ಕೇಳಿ ದಾಂಪತ್ಯ ಪುನರ್ಸ್ಥಾಪನೆಗೆ, ನಿಮ್ಮೊಂದಿಗೆ ದಾಂಪತ್ಯ/ಸಂಸಾರ ನಡೆಸುವಂತೆ ಕೌಟುಂಬಿಕ ನ್ಯಾಯಾಲಯದ ಆದೇಶ ಕೋರಬಹುದು. ವಿವಾಹಿತ ಪುರುಷ ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಲ್ಲಿ, ಅದು ವಿವಾಹ ವಿಚ್ಛೇದನ ಪಡೆಯಲೂ ಬಲವಾದ ಕಾರಣವಾಗುತ್ತದೆ.  ಆದರೆ ಇಂತಹ ಆರೋಪವನ್ನು ಸಾಬೀತು ಮಾಡುವುದು ಕಷ್ಟಸಾಧ್ಯ. ಅಷ್ಟೇ ಅಲ್ಲದೆ ಈ ಕಾರಣದಿಂದ ಪತಿಯ ನಿರ್ಲಕ್ಷ್ಯ ಹಾಗೂ ಮಾನಸಿಕ ಹಿಂಸೆಗೆ ಒಳಗಾಗುವ ಪತ್ನಿಯು, ಅಂತಹ ಪತಿಯಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತ, ಜೀವನಾಂಶವನ್ನು ಕೇಳಲೂ ಸಹ ಕಾನೂನು ಸಾಧ್ಯವಾಗಿಸುತ್ತದೆ.

ಎಸ್‌. ಲಕ್ಷ್ಮೀ, ಊರು ಬೇಡ

* ನನ್ನ ವಯಸ್ಸು 60 ವರ್ಷ, ವಿವಾಹಿತೆ. ನಮ್ಮ ತಂದೆಗೆ ನಾವು ಇಬ್ಬರು ಮಕ್ಕಳು, ನಾನು ಮದುವೆಯಾಗಿದ್ದು, ಮೈಸೂರಿನಲ್ಲಿ ವಾಸ ಇದ್ದೇನೆ. ನನ್ನ ತಮ್ಮನಿಗೆ 46 ವರ್ಷ ಇನ್ನು ಅವಿವಾಹಿತ. ನಮ್ಮ ತಾತನಿಂದ ಬಂದ ಪಿತ್ರಾರ್ಜಿತ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದಾನೆ. ಆಸ್ತಿ ವಿಭಾಗವಾಗಿಲ್ಲ. ನಮ್ಮ ತಂದೆ ತಾಯಿ ಈಗ ಬದುಕಿಲ್ಲ. ಆಸ್ತಿ ಮಾರಿರುವ ವಿಷಯವನ್ನು ನನ್ನ ತಮ್ಮ ಮುಚ್ಚಿಡುತ್ತಿದ್ದಾನೆ. ಅವನು ಆಸ್ತಿ ಮಾರಿರುವ ವಿಷಯ ನಮಗೆ ಸಬ್‌ ರಿಜಿಸ್ಟರ್‌ ಆಫೀಸಿನಲ್ಲಿ ವಿಚಾರಿಸಿದರೆ ತಿಳಿಯಬಹುದೆ? ಯಾರಿಗೆ, ಯಾವಾಗ ಎಷ್ಟು ಬೆಲೆಗೆ ಆಸ್ತಿ ಮಾರಿದ್ದಾನೆ ಎಂಬ ಮಾಹಿತಿ ಅಲ್ಲಿ ಕೊಡುತ್ತಾರೆಯೇ? ನಾನು ಆಸ್ತಿಯಲ್ಲಿ ಪಾಲು ಕೇಳಬೇಕೆಂದಿದ್ದೇನೆ ಆದರೆ 1954 ರಲ್ಲಿ ಹುಟ್ಟಿರುವುದರಿಂದ ನನಗೆ ಆಸ್ತಿಯಲ್ಲಿ ಪಾಲು ಕೇಳಲು ಹಕ್ಕು ಇದೆಯೇ ತಿಳಿಸಿ. ತಾನು  ಮದುವೆಯಾಗದ ಕಾರಣ ಆಸ್ತಿಯನ್ನು ಯಾರಿಗಾದರೂ ಮಾರುವ ಮತ್ತು ಯಾರಿಗೆ ಬೇಕಾದರೂ ಬರೆದುಕೊಡುವ ಹಕ್ಕು ಇದೆ ಎಂದು ಹೇಳುತ್ತಿದ್ದಾನೆ, ದಯವಿಟ್ಟು ಈ ಬಗ್ಗೆ ಸಲಹೆ ನೀಡಿ.


–ಆಸ್ತಿ ಮಾರಿದ ಬಗ್ಗೆ ಮಾಹಿತಿಯನ್ನು ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ವಿಚಾರಿಸಬಹುದು, ನಿರ್ದಿಷ್ಟ ಆಸ್ತಿಯ ವರ್ಗಾವಣೆಯ ದಾಖಲೆಗಳ ಪ್ರಮಾಣಿತ ನಕಲುಗಳನ್ನೂ ಪಡೆಯಬಹುದು. ಹಾಗೂ  ಅಸ್ತಿಯ ಸಂಬಂಧದಲ್ಲಿ ಋಣಭಾರ ರಾಹಿತ್ಯ ಪ್ರಮಾಣ ಪತ್ರವನ್ನು ತೆಗೆದುಕೊಂಡರೆ ತಿಳಿಯಬಹುದು. ಈಗ ಪುರುಷರೊಂದಿಗೆ ಸಮಾನವಾದ  ಹುಟ್ಟಿನಿಂದ ವಾರಸಾ ಹಕ್ಕು ಮಹಿಳೆಯರಿಗೆ ಬಂದಿದೆಯಾದರೂ ೧೯೫೬ ನಂತರ ಜನಿಸಿದ ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ. ಪಿತ್ರಾರ್ಜಿತ ಆಸ್ತಿ ಅಲ್ಲದಿದ್ದರೂ, ನಿಮ್ಮ ತಂದೆಯ ಸ್ವಂತ ಆಸ್ತಿಯಿದ್ದಲ್ಲಿ ಅದರಲ್ಲಿ ನಿಮಗೆ ಸಮಭಾಗ ಪಡೆಯಲು ಅವಕಾಶವಿದೆ. ಅದರಲ್ಲಿ ನಿಮ್ಮ ಪಾಲನ್ನು ನೀವು ಕೇಳಬಹುದು. ಮುಂದಿನ ಕ್ರಮಕ್ಕೆ ಕೂಡಲೇ ವಕೀಲರನ್ನು ಸಂಪರ್ಕಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.