ಶುಕ್ರವಾರ, ನವೆಂಬರ್ 22, 2019
23 °C

ಸಬಲೆ

Published:
Updated:

ಹೆಸರು, ಊರು ಬೇಡ

ನಾನು ಮದುವೆಯಾಗಿ 9 ವರ್ಷ ಕಳೆದಿದೆ. ಮದುವೆಯಾಗುವಾಗ ನನ್ನ ಗಂಡನ ಮೇಲೆ ಅವರ ಅಪ್ಪ ಮಾಡಿದ ಸಾಲದ ಹೊರೆ ಇತ್ತು. ಆದರೆ ಅವರಿಗೆ ಕೆಲಸ ಇರಲಿಲ್ಲ. ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂದು ಮದುವೆಯಾದೆ. ನಂತರ ತಿಳಿಯಿತು, ಅವರು ನನ್ನನ್ನು ಹಣದ ಆಸೆಗೆ ಮದುವೆಯಾಗಿದ್ದಾರೆ ಎಂದು. ಬಳಿಕ ತಮ್ಮ, ತಂಗಿಯ ಮದುವೆಗೆ ಎಂದು ನನ್ನ ಅಪ್ಪ ಮತ್ತು ಚಿಕ್ಕಪ್ಪನ ಕಡೆಯಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದರು. ಅದನ್ನೂ ತೀರಿಸಲಿಲ್ಲ. 2001ರಲ್ಲಿ ಅವರಿಗೆ ಸರ್ಕಾರಿ ಉದ್ಯೋಗ ದೊರಕಿತು. ಅವರು ಬೇರೆ ಊರಿಗೆ ಕೆಲಸಕ್ಕೆ ಹೋದರು. ನಮಗೆ ಇಬ್ಬರು ಮಕ್ಕಳು. ಯಾವತ್ತೂ ನನ್ನ ಹಾಗೂ ಮಕ್ಕಳ ಬೇಕು ಬೇಡಗಳನ್ನು ನೋಡಲಿಲ್ಲ. ಏನು ಕೇಳಿದರೂ `ಇನ್ನೂ ಸಾಲ ತೀರಿಲ್ಲ' ಎನ್ನುತ್ತಾ ಬಂದರು.

ನನಗೂ ಒಂದು ಅನುದಾನಿತ ಶಾಲೆಯಲ್ಲಿ ಕೆಲಸ ಸಿಕ್ಕಿತು. ಗಂಡ ತಿಂಗಳಲ್ಲಿ ಒಂದೆರಡು ಬಾರಿ ಬರುತ್ತಾರೆ. ತಮ್ಮ ಅಮ್ಮ-ಅಪ್ಪನ ಮಾತು ಕೇಳಿ ಜಗಳ ಕಾಯುತ್ತಾರೆ, ಹೊಡೆಯುತ್ತಾರೆ. ಅತ್ತೆಯೂ ಅನೇಕ ಬಾರಿ ಹೊಡೆದು ನನ್ನನ್ನು ಮನೆಯಿಂದ ಆಚೆ ಹಾಕಿದ್ದಾರೆ. ನನಗೆ ಬೇರೆ ದಾರಿ ಇಲ್ಲ, ಇತ್ತೀಚೆಗೆ ನನ್ನ ಆರೋಗ್ಯವೂ ಕೆಡುತ್ತಿದೆ. ಯಾರ ಸಹಾಯ ಕೇಳಬೇಕೆಂದು ತಿಳಿಯುತ್ತಿಲ್ಲ. ಮಹಿಳಾ ಆಯೋಗದಿಂದ ಅಥವಾ ಲೋಕಾಯುಕ್ತದಿಂದ ನೆರವು ಪಡೆಯಬಹುದೇ?


ನೀವು ಪತ್ರದಲ್ಲಿ ಹೇಳಿರುವಂತೆ ನಿಮ್ಮ ಪತಿ ಹಾಗೂ ಅತ್ತೆಯ ಎಲ್ಲ ವರ್ತನೆಗಳೂ ಮಾನಸಿಕ ಮತ್ತು ದೈಹಿಕ ಕಿರುಕುಳಗಳಲ್ಲದೆ ಪತಿಯಾಗಿ, ತಂದೆಯಾಗಿ ನಿಮ್ಮ ಪತಿಗಿರುವ ಎಲ್ಲ ಕರ್ತವ್ಯಗಳ ಲೋಪವೂ ಆಗಿರುತ್ತದೆ. ನಿಮ್ಮ ಸಮಸ್ಯೆಗೂ ಲೋಕಾಯುಕ್ತಕ್ಕೂ ಯಾವ ಸಂಬಂಧವಿಲ್ಲ. ಮಹಿಳಾ ಆಯೋಗದಿಂದ ಸ್ವಲ್ಪ ಮಟ್ಟಿನ ಸಹಾಯ ಆಗಬಹುದಾದರೂ, ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ವೈಯಕ್ತಿಕ ಕಾನೂನುಗಳಡಿ, ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಹಿಳೆಯರ ರಕ್ಷಣೆ ಕಾಯ್ದೆಯಡಿ, ಅಪರಾಧಿಕ ಕಾನೂನಿನಡಿ ಹಾಗೂ ಕೌಟುಂಬಿಕ ನ್ಯಾಯಾಲಯದಲ್ಲಿ ಪರಿಹಾರ ದೊರಕಬಹುದು. ಆಗಾಗ್ಗೆ ನಿಮ್ಮ ಪತಿ ನಿಮ್ಮಲ್ಲಿಗೆ ಬಂದು ಜಗಳ ಕಾಯುವುದನ್ನು ತಪ್ಪಿಸಲು, ಕರ್ತವ್ಯ ನಿರ್ವಹಣೆ ಮಾಡಲು ಅವರಿಗೆ ನಿರ್ದೇಶನ ನೀಡುವಂತೆ ಕೋರಲು ನಿಮಗೆ ಕಾನೂನಿನಡಿ ಅವಕಾಶಗಳಿವೆ. ನೀವು ಉಚಿತ ಕಾನೂನು ಸೇವೆಗಳ ಪ್ರಾಧಿಕಾರವನ್ನೋ, ಮಹಿಳಾ ಆಯೋಗವನ್ನೋ, ಯಾವುದಾದರೂ ಕೌಟುಂಬಿಕ ಸಲಹಾ ಕೇಂದ್ರವನ್ನೋ ಅಥವಾ ವಕೀಲರನ್ನೋ ಸಂಪರ್ಕಿಸಿ ನ್ಯಾಯಾಲಯದಲ್ಲಿ ಮುಂದಿನ ಕ್ರಮ ಕೈಗೊಳ್ಳಬಹುದು. ಚಿಂತಿಸದೆ ನಿಮ್ಮ ಜೀವನ ಸರಿಪಡಿಸಿಕೊಳ್ಳುವತ್ತ ಹೆಜ್ಜೆ ಇಡಿ.ಶೋಭಾ ಪತ್ತಾರ್, ಮೈಸೂರು

ನಾನು ಹಾಗೂ ನನ್ನ ಪತಿ ನಿವೃತ್ತ ಶಿಕ್ಷಕರು. ನಮಗೆ ಒಬ್ಬನೇ ಮಗ. ಬಿ.ಇ. ಓದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ನಾವೇ ಬಡ ಹುಡುಗಿಯನ್ನು ನೋಡಿ ಮದುವೆ ಮಾಡಿದೆವು. ಎರಡು ವರ್ಷ ಸೊಸೆ ನಮ್ಮಂದಿಗೆ ಚೆನ್ನಾಗಿಯೇ ಇದ್ದಳು. ಆದರೆ ಮೂರನೇ ವರ್ಷ ಬಾಣಂತನಕ್ಕೆ ಎಂದು ತವರಿಗೆ ಹೋದವಳು ಹೆರಿಗೆ ಮುಗಿಸಿ ಬಂದಾಗ ಸಂಪೂರ್ಣ ಬದಲಾಗಿದ್ದಳು.

ನಮ್ಮನ್ನು ಮಾತನಾಡಿಸುವುದನ್ನು ಬಿಟ್ಟಳು. ಅವಳ ಮನೆಗೆ ನಾವ್ಯಾರೂ ಹೋಗಬಾರದು ಎಂದು ಫೋನಿನಲ್ಲೇ ತಿಳಿಸಿದಳು. ನಮ್ಮ ಮಗ ಬಹಳ ಮೃದು ಸ್ವಭಾವದವನು. ಈಗ ಮಗುವಿಗೆ ಎರಡು ವರ್ಷ. ನಾವು ಮೊಮ್ಮಗಳನ್ನು ನೋಡೇ ಇಲ್ಲ. ನಮ್ಮ ವಂಶದ ಕುಡಿಯನ್ನು ನೋಡುವ ಹಂಬಲ. ನಮ್ಮ ಸಮಸ್ಯೆಗೆ ಪರಿಹಾರ ಇದೆಯೇ? ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯೇ ದಯವಿಟ್ಟು ಪರಿಹಾರ ತಿಳಿಸಿ.


ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ವೈವಾಹಿಕ ಸಂಬಂಧ ಮುರಿದಿರುವ ಈ ಸಮಸ್ಯೆ ವಿಚಿತ್ರವಾಗಿದೆ. ಸೊಸೆಯು ಯಾವ ಕಾರಣಕ್ಕಾಗಿ ನೀವು ಅವರ ಮನೆಗೆ ಬರಬಾರದೆಂದು ತಿಳಿಸಿದರು ಎಂಬುದನ್ನು ಅರಿಯಲು ನೀವು ಪ್ರಯತ್ನಿಸಿದಂತೆ ಕಂಡುಬರುವುದಿಲ್ಲ. ಆ ಬಗ್ಗೆ ಮೊದಲು ವಿಚಾರಿಸಿ. ನಿಮ್ಮ ಸೊಸೆಯ ತಂದೆ ತಾಯಿ ಮತ್ತು ಅವರ ಕುಟುಂಬದ ಇತರ ಹಿರಿಯರೊಂದಿಗೆ ಮಾತುಕತೆಯಾಡಿ ವಿಷಯ ಬಗೆಹರಿಸಿಕೊಳ್ಳುವುದು ಉತ್ತಮ. ನಿಮ್ಮ ಸೊಸೆ ಫೋನಿನ ಮೂಲಕ ಬರಬಾರದೆಂದು ತಿಳಿಸಿದಾಕ್ಷಣ ನೀವು ತಟಸ್ಥರಾಗಿ ಉಳಿಯದೆ, ನಿಮ್ಮ ಮಗನ ಸಾಂಸಾರಿಕ ಜೀವನ ಹದಗೆಡದಂತೆ ಎಚ್ಚರ ವಹಿಸುವುದು ಒಳಿತು. ಎಷ್ಟಾದರೂ ಮದುವೆ ಮಾಡುವುದು ದಂಪತಿ ಕೊನೆಯವರೆಗೂ ಜೀವನದ ಎಲ್ಲ ಕಷ್ಟ ಸುಖಗಳನ್ನೂ ಒಟ್ಟಾಗಿ ನಿಭಾಯಿಸಿಕೊಂಡು ಹೋಗುವುದಕ್ಕಲ್ಲವೇ? ಹಿಂದೂ ವಿವಾಹದ ಈ ಮೂಲ ಲಕ್ಷಣವನ್ನೇ ನಾವೆಲ್ಲರೂ ಈಗೀಗ ಮರೆಯುತ್ತಿದ್ದೇವೆ ಎನಿಸುತ್ತದೆ. ಈಗಾಗಲೇ ಎರಡು ವರ್ಷದಿಂದ ನಿಮ್ಮ ಮಗ, ಸೊಸೆ ಮತ್ತು ಮೊಮ್ಮಗಳು ಬೇರೆ ಇದ್ದಾರೆ. ಈಗಲಾದರೂ ನಿಮ್ಮ ಕಡೆಯಿಂದ ಪ್ರಯತ್ನ ಪ್ರಾರಂಭಿಸಿ. ಕುಟುಂಬದ ಹಿರಿಯರಿಂದ ಸರಿಪಡಿಸಲಾಗದಿದ್ದರೆ, ಕೌಟುಂಬಿಕ ಸಲಹಾ ಕೇಂದ್ರದ ಸಹಾಯ ಪಡೆದು ಸಂಧಾನಕ್ಕೆ ಪ್ರಯತ್ನಿಸಿ. ಹಾಗಾದರೂ ಸಮಸ್ಯೆ ಬಗೆಹರಿಯದಿದ್ದರೆ, ಕೌಟುಂಬಿಕ ನ್ಯಾಯಾಲಯದಲ್ಲಿ ನಿಮ್ಮ ಮಗ ಅರ್ಜಿ ಸಲ್ಲಿಸಿ, ಅವರ ಪತ್ನಿಯನ್ನು ತಮ್ಮಂದಿಗೆ ಸಂಸಾರ ನಡೆಸುವಂತೆ ಆದೇಶ ಕೋರಿ ಹಿಂದೂ ವಿವಾಹ ಕಾಯ್ದೆಯ ಒಂಬತ್ತನೇ ಕಲಂನ ಅನ್ವಯ ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆಗಾಗಿ ಅರ್ಜಿ ಸಲ್ಲಿಸಬಹುದು.ಮಗಳು ಕೇವಲ ಎರಡು ವರ್ಷದವಳಾದ್ದರಿಂದ, ಹಿಂದೂ ಅಪ್ರಾಪ್ತ ವಯಸ್ಕ ಮತ್ತು ಪಾಲಕತ್ವ ಕಾಯ್ದೆಯ ಆರನೇ ಕಲಂ ಪ್ರಕಾರ, ಐದು ವರ್ಷ ತುಂಬದ  ಮಗುವಿನ ಅಭಿರಕ್ಷೆ ಸಾಮಾನ್ಯವಾಗಿ ತಾಯಿಯ ಬಳಿ ಇರಬೇಕೆಂದಿದೆ. ಈ ಕೂಡಲೇ ತಂದೆಗೆ ಮಗುವಿನ ಅಭಿರಕ್ಷೆ ಪಡೆಯಲು ಕಾನೂನಿನನ್ವಯ ಸಾಧ್ಯವಿರದಿದ್ದರೂ, ಮಗಳನ್ನು ಭೇಟಿ ಮಾಡಲು, ನೋಡಲು ಹಾಗೂ ಮಗುವಿನ ಒಡನಾಟಕ್ಕೆ ಅವಕಾಶ ಮಾಡಿಕೊಡುವಂತೆ ನ್ಯಾಯಾಲಯದ ಆದೇಶವನ್ನು ಕೋರಬಹುದು. ಇಂತಹ ಅವಕಾಶದಿಂದ ಮಗುವಿನ ತಂದೆಯನ್ನು ವಂಚಿಸುವುದು ಸರಿಯಲ್ಲ. ಹೀಗೆ ಮಗುವನ್ನು ತಂದೆಯ ಒಡನಾಟವಿಲ್ಲದೆ ಒಂಟಿ ಪೋಷಕರಾಗಿ ಬೆಳೆಸುವುದರಿಂದ ಮಗುವಿನ ಸಂಪೂರ್ಣ ಬೆಳವಣಿಗೆಗೆ ಅಡ್ಡಿಯಾಗಬಹುದು. ತಾಯಿಯಾಗಿ ತಮ್ಮ ವೈಯಕ್ತಿಕ ಕಷ್ಟವೇನೇ ಇರಲಿ, ಅದರೊಂದಿಗೆ ಮಗುವಿನ ವ್ಯಕ್ತಿತ್ವದ ಸಂಪೂರ್ಣ ಬೆಳವಣಿಗೆಗೆ ಗಮನ ಹರಿಸುವುದು ಜೀವನದಲ್ಲಿ ಆಕೆಯ ಮುಖ್ಯ ಆದ್ಯತೆ ಆಗುತ್ತದೆ. ಇದನ್ನು ದಂಪತಿಗಳಿಬ್ಬರಿಗೂ ಮನವರಿಕೆ ಮಾಡಿಸುವುದು ಹಿರಿಯರಾದವರ ಕರ್ತವ್ಯ ಅಲ್ಲವೇ?

ಪ್ರತಿಕ್ರಿಯಿಸಿ (+)