ಸಬ್ಸಿಡಿಯೇತರ ಎಲ್‌ಪಿಜಿ ಬೆಲೆ : ಸರ್ಕಾರ ಮಧ್ಯಪ್ರವೇಶ ಇಲ್ಲ

7

ಸಬ್ಸಿಡಿಯೇತರ ಎಲ್‌ಪಿಜಿ ಬೆಲೆ : ಸರ್ಕಾರ ಮಧ್ಯಪ್ರವೇಶ ಇಲ್ಲ

Published:
Updated:

ನವದೆಹಲಿ: ಸಬ್ಸಿಡಿಯೇತರ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆ ನಿಗದಿ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪೆಟ್ರೋಲಿಯಂ ಸಚಿವ ಜೈಪಾಲ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಸದ್ಯ ಸಬ್ಸಿಡಿಯೇತರ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿಯೊಂದಕ್ಕೆ ರೂ. 895.50 ನಿಗದಿ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಸ್ಥಿತಿಗತಿಗೆ ಅನುಗುಣವಾಗಿ ಈ ದರವನ್ನು ಪರಿಷ್ಕರಿಸಬಹುದಾಗಿದೆ. ಇವುಗಳ ದರ ಎಷ್ಟೇ ಹೆಚ್ಚಾದರೂ ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.ಇದೇ ತಿಂಗಳ 31ರಂದು ಇಂತಹ ಸಿಲಿಂಡರ್‌ಗಳ ದರದ ಪರಿಷ್ಕರಣೆ ನಡೆಯಲಿದೆ. ಈಗಿನ ಸ್ಥಿತಿಯಲ್ಲಿ ಭಾರತ ಕೊಲ್ಲಿ ರಾಷ್ಟ್ರಗಳಿಂದ ಖರೀದಿಸುತ್ತಿರುವ ಎಲ್‌ಪಿಜಿ ದರ ಏರುಗತಿಯಲ್ಲಿ ಸಾಗಿರುವುದರಿಂದ ಇವುಗಳ ದರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂಬ ಸುಳಿವನ್ನು ಸಚಿವರು ನೀಡಿದರು.ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಭಾರಿ ಪ್ರಮಾಣದ ನಷ್ಟ ಅನುಭವಿಸುತ್ತಿದ್ದರೂ ಡೀಸೆಲ್ ದರವನ್ನು ಮತ್ತಷ್ಟು ಹೆಚ್ಚಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಈಗಂತೂ ಇಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದರು.ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿರುವ ತೈಲದ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇಲ್ಲ, ಇರಾನ್ ಹಾಗೂ ಸೌದಿ ಅರೇಬಿಯಾ ರಾಷ್ಟ್ರಗಳು ಭಾರತಕ್ಕೆ ಅತ್ಯಧಿಕ ಪ್ರಮಾಣದಲ್ಲಿ ತೈಲವನ್ನು ಪೂರೈಸುತ್ತಿವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry