ಸಬ್ಸಿಡಿ ಇನ್ನಷ್ಟು ಕಡಿತ: ಪ್ರಧಾನಿ ಸುಳಿವು

7

ಸಬ್ಸಿಡಿ ಇನ್ನಷ್ಟು ಕಡಿತ: ಪ್ರಧಾನಿ ಸುಳಿವು

Published:
Updated:

ನವದೆಹಲಿ (ಪಿಟಿಐ): ವಿತ್ತೀಯ ಕೊರತೆ ತಗ್ಗಿಸುವ ನಿಟ್ಟಿನಲ್ಲಿ ವಿದ್ಯುತ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ನೀಡುತ್ತಿರುವ ಸಬ್ಸಿಡಿ ಹೊರೆಯನ್ನು ಇನ್ನಷ್ಟು ತಗ್ಗಿಸುವ ಅಗತ್ಯವಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಪಾದಿಸಿದರು.ಸಾಮಾನ್ಯ ತೆರಿಗೆ ವಂಚನೆ ನಿಯಮಾವಳಿ (ಜಿಎಎಆರ್), ಮಾಹಿತಿ ತಂತ್ರಜ್ಞಾನ ಉದ್ದಿಮೆಗೆ ವಿಧಿಸಲಾಗುತ್ತಿರುವ ತೆರಿಗೆ, ನೇರ ತೆರಿಗೆ ಸಂಹಿತೆ ಹಾಗೂ ಸರಕು- ಸೇವಾ ತೆರಿಗೆ ಪದ್ಧತಿಗಳ ಸುಧಾರಣೆಗೂ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಬಹು ಬ್ರಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ  ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸಿದ ನಿರ್ಧಾರವನ್ನು  ಬಲವಾಗಿ ಸಮರ್ಥಿಸಿಕೊಂಡರು. ಎಫ್‌ಡಿಐ ವಿರೋಧಿಸುವವರಿಗೆ ಜಾಗತಿಕ ವಾಸ್ತವಗಳ ಅರಿವಿಲ್ಲ. ಅವರು `ಗತಕಾಲದ ಸಿದ್ಧಾಂತಗಳ' ಬಂಧನದಲ್ಲಿದ್ದಾರೆ ಎಂದು ಎಫ್‌ಐಸಿಸಿಐ ವಾರ್ಷಿಕ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ವೇಳೆ ಚುಚ್ಚಿದರು.ಆರ್ಥಿಕ ತರ್ಕಗಳನ್ನು ಆಧರಿಸಿ ಚಿಲ್ಲರೆ ಕ್ಷೇತ್ರ ಹಾಗೂ ಇತರ ವಲಯಗಳಲ್ಲಿ ಎಫ್‌ಡಿಐಗೆ ಅವಕಾಶ ಕಲ್ಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪುನರುಚ್ಚರಿಸಿದ ಸಿಂಗ್, `ರಾಜಕೀಯವಾಗಿ ಈ ನಿರ್ಧಾರಗಳು ತುಂಬಾ ಕಷ್ಟ.  ಎಲ್ಲರಿಗೂ ಮನವರಿಕೆ ಮಾಡುವ ಧೈರ್ಯ ಇದ್ದುದರಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿತು' ಎಂದರು.ಸರ್ಕಾರ ಕೈಗೊಂಡಿರುವ ಇತ್ತೀಚಿನ ಕ್ರಮಗಳು, ರಾಷ್ಟ್ರದ ಆರ್ಥಿಕ ಸ್ಥಿತಿಯನ್ನು ಪುನಶ್ಚೇತನಗೊಳಿಸಲು ಮತ್ತು ಅಭಿವೃದ್ಧಿ ದರ ಶೇ 8-9ರಷ್ಟು ತಲುಪಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಆರಂಭದ ಪ್ರಕ್ರಿಯೆಗಳಷ್ಟೇ ಎಂದೂ ಹೇಳಿದರು. `ಬಹು ಬ್ರಾಂಡ್ ಚಿಲ್ಲರೆ  ಕ್ಷೇತ್ರ, ನಾಗರಿಕ ವಿಮಾನಯಾನ, ವಿದ್ಯುತ್ ವಿನಿಮಯ ಮತ್ತು ಪ್ರಸಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಕುರಿತಂತೆ ನಾವು ಕೈಗೊಂಡಿರುವ ತೀರ್ಮಾನವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು' ಎಂದು ಅಭಿಪ್ರಾಯಪಟ್ಟರು.ಭದ್ರತೆ ಮತ್ತು ಆರ್ಥಿಕ ಹಿಂಜರಿತದಿಂದ ರಾಷ್ಟ್ರವನ್ನು ರಕ್ಷಿಸುವ ವಿಚಾರಗಳನ್ನೆಲ್ಲಾ ಗಮನದಲ್ಲಿರಿಸಿಕೊಂಡು ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಒತ್ತಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry