ಶನಿವಾರ, ಮೇ 8, 2021
26 °C

`ಸಬ್ಸಿಡಿ ನೀಡಿದರೆ ಪ್ರಯಾಣ ದರ ಇಳಿಕೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೆ ಬರುವ ಲಾಭದಲ್ಲಿ ಶೇ 90 ಪಾಲು ಡೀಸೆಲ್ ಖರೀದಿ ಹಾಗೂ ಸಂಸ್ಥೆಯ ಸಿಬ್ಬಂದಿಯ ವೇತನ ಪಾವತಿಗೆ ಖರ್ಚಾಗುತ್ತಿದೆ. ರಾಜ್ಯ ಸರ್ಕಾರ ಡೀಸೆಲ್ ಸಬ್ಸಿಡಿ ನೀಡಿದರೆ ಬಸ್ ಪ್ರಯಾಣ ದರ ಇಳಿಸಲು ಸಿದ್ಧ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, `ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಡೀಸೆಲ್ ಸಬ್ಸಿಡಿ ನೀಡುತ್ತಿಲ್ಲ. ಇದೇ 19ರಂದು ನಡೆಯುವ ಸಭೆಯಲ್ಲಿ ಸಬ್ಸಿಡಿ ನೀಡುವಂತೆ ಮನವಿ ಮಾಡಲಾಗುವುದು' ಎಂದು ತಿಳಿಸಿದರು.`ಕೇರಳ, ತಮಿಳುನಾಡಿನಲ್ಲಿ ಸಾರಿಗೆ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತಿವೆ. ಹೀಗಾಗಿ ಆ ರಾಜ್ಯಗಳಲ್ಲಿ ಬಸ್ ಪ್ರಯಾಣ ದರ ಕಡಿಮೆ ಇದೆ. ನಷ್ಟದ ಕಾರಣ ನೀಡಿ ಕೇರಳದಲ್ಲಿ 1,000 ಬಸ್‌ಗಳನ್ನು ಕಡಿಮೆ ಮಾಡಲಾಗಿದೆ. ರಾಜ್ಯದಲ್ಲಿ ಅಂತಹ ಕ್ರಮಗಳನ್ನು ತೆಗೆದುಕೊಂಡಿಲ್ಲ. ದರ ಏರಿಸದೆ ಇದ್ದರೆ ನಿಗಮಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗುತ್ತಿತ್ತು' ಎಂದು ಪ್ರಯಾಣ ದರ ಏರಿಕೆಯನ್ನು ಸಮರ್ಥಿಸಿಕೊಂಡರು.`ಪ್ರಯಾಣ ದರ ಏರಿಕೆಗೆ ನಿಗಮಗಳು ಜನವರಿಯಲ್ಲೇ ಪ್ರಸ್ತಾವ ಸಲ್ಲಿಸಿದ್ದವು. ಚುನಾವಣಾ ನೀತಿ ಸಂಹಿತೆಯ ಕಾರಣದಿಂದ ದರ ಏರಿಕೆಯನ್ನು ಮುಂದೂಡಲಾಗಿತ್ತು. ಆರು ತಿಂಗಳಲ್ಲೇ ಬಿಎಂಟಿಸಿ 147 ಕೋಟಿ ನಷ್ಟ ಅನುಭವಿಸಿದೆ. ಡೀಸೆಲ್ ದರವನ್ನು ಕಡಿಮೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು' ಎಂದರು.`ಸಾರಿಗೆ ನಿಗಮಗಳ ಎಲ್ಲ ಅಧಿಕಾರಿಗಳು ಮಧ್ಯಾಹ್ನ 3 ಗಂಟೆಯ ಬಳಿಕ ಕಚೇರಿಯಲ್ಲೇ ಇರಬೇಕು ಎಂದು ಸೂಚನೆ ನೀಡಲಾಗಿದೆ. ಇದರಿಂದ ಸಿಬ್ಬಂದಿಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.