ಶುಕ್ರವಾರ, ಡಿಸೆಂಬರ್ 6, 2019
25 °C

ಸಭಾತ್ಯಾಗ; ಗ್ರಾ.ಪಂ ಸಭೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಭಾತ್ಯಾಗ; ಗ್ರಾ.ಪಂ ಸಭೆ ಮುಂದೂಡಿಕೆ

ಪಡುಬಿದ್ರಿ: ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದ ಕಾರಣ ಮಾಸಿಕ ಸಾಮಾನ್ಯ ಸಭೆ ಗುರುವಾರ ಬೆಳಿಗ್ಗೆ ಮುಂದೂಡಲಾಯಿತು. ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿವಿಧ ಕಾಮಗಾರಿ ನಡೆಸುತ್ತಿದ್ದಾರೆ. ನಾವು ಬೆಂಬಲ ವಾಪಸ್ ಪಡೆದಿದ್ದೇವೆ ಎಂದು 17 ಸದಸ್ಯರು ಬುಧವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು. ಆರಂಭಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಬೆಂಬಲಿತ 15 ಸದಸ್ಯರು ಸಭಾತ್ಯಾಗ ಮಾಡಿದರು. ಕೋರಂ ಕೊರತೆಯಿಂದ ಸಾಮಾನ್ಯ ಸಭೆ ಮಧ್ಯಾಹ್ನದವರೆಗೂ ನಡೆಯಲಿಲ್ಲ. ಬಳಿಕವೂ 16 ಸದಸ್ಯರು ಮಾತ್ರ ಹಾಜರಿದ್ದುದರಿಂದ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಯಿತು.ತೆರೆಮರೆ ಕಸರತ್ತು: 33 ಸದಸ್ಯ ಬಲದ ಗ್ರಾಪಂನಲ್ಲಿ 15 ಸದಸ್ಯರು ಇಂದಿನ ಸಭೆ ಬಹಿಷ್ಕರಿಸಿದ್ದರು. ಒಬ್ಬರು  ವಿದೇಶ ಪ್ರವಾಸದಲ್ಲಿದ್ದಾರೆ. ಉಳಿದ 16 ಮಂದಿ ಸಭೆಯಲ್ಲಿ ಹಾಜರಿದ್ದರೂ ಕೋರಂ ಕೊರತೆ ಎದ್ದು ಕಂಡಿತು. ಆದರೂ ಛಲ ಬಿಡದ ಬಿಜೆಪಿ ಬೆಂಬಲಿತರು ಒಬ್ಬ ಸದಸ್ಯನನ್ನು ತಮ್ಮ ತೆಕ್ಕೆಗೆ ಎಳೆಯಲು ಭಾರೀ ಕಸರತ್ತು ನಡೆಸಿದರು.ಇದನ್ನು ಅರಿತ ಕಾಂಗ್ರೆಸ್ ಬೆಂಬಲಿತರು ಬೇರೆ ಸ್ಥಳವೊಂದರಲ್ಲಿ ಠಿಕಾಣಿ ಹೂಡಿದರು. ಬಿಜೆಪಿ ಬೆಂಬಲಿತರು ಎಲ್ಲಾ ಸದಸ್ಯರ ಮೊಬೈಲ್‌ಗೆ ಕರೆ ಮಾಡಿದರೂ ಪ್ರಯೋಜನ ಆಗಲಿಲ್ಲ. ಮಧ್ಯಾಹ್ನದ ವರೆಗೂ ಈ ಸ್ಥಿತಿ ಮುಂದುವರಿಯಿತು. ಬಳಿಕ ಸಾಮಾನ್ಯ ಸಭೆ ಮುಂದೂಡಲಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ಘೋಷಿಸಿದರು.  ಅನುಮತಿ ಬೇಕಿತ್ತು: ಇಂದಿನ ಸಭೆಯಲ್ಲಿ ಕಟ್ಟಡ, ಉದ್ಯಮ ಭೂಪರಿವರ್ತನೆಯ ನೂರಾರು ಅರ್ಜಿಗಳು ವಿಲೇವಾರಿ ಆಗಬೇಕಿತ್ತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲ್ಪಡುವ ಮೀನುಮಾರುಕಟ್ಟೆಗೆ ಶೇ.10ರಷ್ಟು ಮೊತ್ತ ಗ್ರಾಪಂ ವತಿಯಿಂದ ಭರಿಸಬೇಕಾಗಿರುವುದರಿಂದ ಈ ಬಗ್ಗೆಯೂ ಚರ್ಚೆ ನಡೆಯಬೇಕಿತ್ತು. ದಾರಿ ದೀಪ, ಕಾಮಗಾರಿ ಬಿಲ್ಲುಪಾವತಿ, ನೀರಿನ ಪಂಪ್‌ಸೆಟ್ ದುರಸ್ತಿ ಬಗ್ಗೆ ಸಭೆಯಲ್ಲಿ ಅನುಮತಿ ಪಡೆಯಬೇಕಿತ್ತು ಎಂದು ಅಭಿವೃದ್ಧಿ ಅಧಿಕಾರಿ ಮಮತಾ ಶೆಟ್ಟಿ ತಿಳಿಸಿದ್ದಾರೆ. ಕಾಮಗಾರಿಯಲ್ಲಿ ತಾರತಮ್ಯ: ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಭರವಸೆ ನೀಡಿದ ಕಾರಣ ಬೆಂಬಲ ನೀಡಿದ್ದೆ. ಆದರೆ ಅವರ ಭರವಸೆ ಹುಸಿ ಎಂದು ತಿಳಿಯಿತು. ನನ್ನ 1ನೇ ವಾರ್ಡ್‌ನಲ್ಲಿ ಇದುವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ. ದಾರಿದೀಪ, ರಸ್ತೆ, ಕುಡಿಯುವ ನೀರು, ಸ್ಮಶಾನ ಅಭಿವೃದ್ಧಿ ಆಗಿಲ್ಲ. ಇತರ ವಾರ್ಡ್‌ನಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಗ್ರಾಪಂ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಗ್ರಾಪಂ ಸದಸ್ಯೆ ಜುಬೇದ ದೂರಿದರು.ನಿರಾಕರಣೆ: ತಾವು ಅಧ್ಯಕ್ಷೆಯಾದ ಬಳಿಕ ಎಲ್ಲಾ ವಾರ್ಡ್‌ನಲ್ಲೂ ಸರಿಸಮಾನವಾಗಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಲಾಗುತ್ತದೆ ಎಂಬುದು ಸರಿಯಲ್ಲ ಎಂದು ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ತಿಳಿಸಿದರು.ಆರೋಪ-ಪ್ರತ್ಯಾರೋಪ: ಸಭೆ ಬಹಿಷ್ಕರಿಸಿದ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕಾಂಗ್ರೆಸ್ ಬೆಂಬಲಿತರಾದ ಸಂಜೀವ್ ಪೂಜಾರ್ತಿ ವಿದೇಶ ಪ್ರವಾಸದಲ್ಲಿದ್ದಾರೆ.  ಅವರು ಕಳೆದ ಎರಡು ಸಭೆಗೆ ಗೈರು ಹಾಜರಾಗಿದ್ದರು. ಇದು ಮೂರನೇ ಸಭೆ ಆಗಿದೆ. ಈ ಸಭೆಗೆ ಹಾಜರಾಗದಿದ್ದರೆ ಅವರ ಸದಸ್ಯತ್ವ ಕುತ್ತು ಬರಲಿತ್ತು. ಕಾಂಗ್ರೆಸ್ ಬೆಂಬಲಿತರು ಅವರನ್ನು ಉಳಿಸಲು ಮಾಡಿದ ಯತ್ನ ಇದು. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಗ್ರಾಪಂ ಸದಸ್ಯ ಮಿಥುನ್ ಹೆಗ್ಡೆ ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)