ಸಭಾಪತಿಯಾಗಿ ಶಂಕರಮೂರ್ತಿ ಪುನರಾಯ್ಕೆ?

7

ಸಭಾಪತಿಯಾಗಿ ಶಂಕರಮೂರ್ತಿ ಪುನರಾಯ್ಕೆ?

Published:
Updated:
ಸಭಾಪತಿಯಾಗಿ ಶಂಕರಮೂರ್ತಿ ಪುನರಾಯ್ಕೆ?

ಬೆಂಗಳೂರು: ವಿಧಾನ ಪರಿಷತ್‌ನ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ಸಲುವಾಗಿ ಇದೇ 28ರಂದು ಪರಿಷತ್ತಿನ ಅಧಿವೇಶನ ಕರೆಯಲಾಗಿದೆ.ಶನಿವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನ ಕರೆಯುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭಾಪತಿ ಸ್ಥಾನದ ಚುನಾವಣೆ ಹೊರತುಪಡಿಸಿ, ಇತರ ವಿಷಯಗಳು ಅಂದು ಚರ್ಚೆಗಳು ಬರುವುದಿಲ್ಲ ಎಂದು ಸಂಪುಟ ಸಭೆಯ ನಂತರ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

28ರಂದು ಬೆಳಿಗ್ಗೆ 11ಕ್ಕೆ ಕಲಾಪ ಆರಂಭವಾಗಲಿದೆ. ಅಧಿವೇಶನ ನಂತರ ಕಲಾಪ ಮುಂದೂಡಲಾಗುತ್ತದೆ.ಹಂಗಾಮಿ ಸಭಾಪತಿ ಬಹಳ ದಿನ ಮುಂದುವರಿಯುವುದು ಬೇಡ ಎಂದು ಬಿಜೆಪಿ ಮತ್ತು ಸರ್ಕಾರ ನಿರ್ಧರಿಸಿರುವುದರಿಂದ ಸಭಾಪತಿ ಸ್ಥಾನದ ಚುನಾವಣೆ ಸಲುವಾಗಿ ಅಧಿವೇಶನ ಕರೆಯಲಾಗಿದೆ ಎಂದರು.ತುರ್ತಾಗಿ ಕರೆದ ಸಚಿವ ಸಂಪುಟ ಸಭೆ ಆಗಿದ್ದರಿಂದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಏಳು ಜನ ಸಚಿವರು ಮಾತ್ರ ಭಾಗವಹಿಸಿದ್ದರು.ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಸಚಿವರು ಸಂಪುಟದ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದರು. ಸಭಾಪತಿ, ಉಪ ಸಭಾಪತಿ ಸ್ಥಾನಗಳು ಖಾಲಿ ಇರುವುದರಿಂದ ಬೇಗ ಚುನಾವಣೆ ನಡೆಸಬೇಕು ಎಂಬುದು ಸರ್ಕಾರದ ಆಶಯ. ಸದ್ಯ ಸಭಾಪತಿ ಸ್ಥಾನದ ಚುನಾವಣೆ ನಡೆಯಲಿದೆ. ಮುಂದಿನ ತಿಂಗಳ 16ರಿಂದ ಆರಂಭವಾಗುವ ಅಧಿವೇಶನದಲ್ಲಿ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಅವರು ತಿಳಿಸಿದರು.ಹಂಗಾಮಿ ಸಭಾಪತಿ ಎಂ.ವಿ.ರಾಜಶೇಖರನ್ ಅವರು ಆದಷ್ಟು ಬೇಗ ತಮ್ಮನ್ನು ಈ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿರುವುದರಿಂದ ತುರ್ತು ಸಚಿವ ಸಂಪುಟ ಸಭೆ ನಡೆಸುವ ನಿರ್ಧಾರವನ್ನು ಶುಕ್ರವಾರ ತೆಗೆದುಕೊಳ್ಳಲಾಯಿತು. ದೂರವಾಣಿ ಮೂಲಕ ಎಲ್ಲ ಸಚಿವರಿಗೂ ಮಾಹಿತಿ ನೀಡಲಾಗಿತ್ತು. ಆದರೆ ಹಲವರು ತಮ್ಮ ಸ್ವಂತ ಕ್ಷೇತ್ರಗಳ ಪ್ರವಾಸದಲ್ಲಿ ಇರುವುದರಿಂದ ಸಭೆಗೆ ಬರಲು ಆಗಿಲ್ಲ. ಆದರೆ ಅಧಿವೇಶನ ಕರೆಯಲು ಅವರ ಸಮ್ಮತಿಯೂ ಇದೆ ಸದಾನಂದಗೌಡ ಅವರು ಸುದ್ದಿಗಾರರಿಗೆ ತಿಳಿಸಿದರು.ಇದೇ 21ರಂದು ಸಭಾಪತಿ ಸ್ಥಾನದಿಂದ ನಿವೃತ್ತರಾಗಿರುವ ಡಿ.ಎಚ್.ಶಂಕರಮೂರ್ತಿ ಅವರನ್ನೇ ಮತ್ತೆ ಸಭಾಪತಿಯನ್ನಾಗಿ ಮಾಡುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಈಗಾಗಲೇ ಶಂಕರಮೂರ್ತಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಬಿಜೆಪಿಯ ಪ್ರಮುಖರ ಸಮಿತಿ ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸಿ ಅವರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಪ್ರಮಾಣ ವಚನ: ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಈಚೆಗೆ ನಡೆದ ಚುನಾವಣೆಯಲ್ಲಿ ಪುನರಾಯ್ಕೆಯಾಗಿರುವ ಡಿ.ಎಚ್.ಶಂಕರಮೂರ್ತಿ, ಗಣೇಶ್ ಕಾರ್ಣಿಕ್, ವೈ.ಎ.ನಾರಾಯಣಸ್ವಾಮಿ ಅವರು ಶನಿವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry