ಸಭೆಗೆ ಸದಸ್ಯರ ಬಹಿಷ್ಕಾರ

7
ಪಿಡಿಒ ವಿರುದ್ಧ ಆಕ್ರೋಶ

ಸಭೆಗೆ ಸದಸ್ಯರ ಬಹಿಷ್ಕಾರ

Published:
Updated:

ಸಾಲಿಗ್ರಾಮ: ತಾಲ್ಲೂಕಿನ ಅಂಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ  ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸದಸ್ಯರು ಸಾಮಾನ್ಯ ಸಭೆಗೆ ಬಹಿಷ್ಕಾರ ಹಾಕಿ ಹೊರ ನಡೆದ ಘಟನೆ ಮಂಗಳವಾರ ನಡೆದಿದೆ.ಸಾಮಾನ್ಯ ಸಭೆ ಪ್ರಾರಂಭವಾಗುತ್ತಿದ್ದಂತೆ ಜೂನ್ 2012ರ ಸಾಮಾನ್ಯ ಸಭೆಯಲ್ಲಿ ಪಂಚಾಯಿತಿ ಬಿಲ್‌ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್. ರವಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಪಿಡಿಒ ಸ್ವಾಮಿನಾಯಕ್ ಅವರು ರವಿ ಅವರನ್ನು ಕರ್ತವ್ಯದಲ್ಲಿ ಮುಂದುವರಿಸುತ್ತಿದ್ದಾರೆ. ಇದರಿಂದ ಚುನಾಯಿತ ಪ್ರತಿನಿಧಿಗಳಿಗೆ ಅವಮಾನವಾಗಿದೆ. ಅಲ್ಲದೆ ಸಭೆಯ ನಿರ್ಣಯವನ್ನು ಪಿಡಿಒ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಸಭೆಯಿಂದ ಹೊರ ನಡೆದರು.ಅಧ್ಯಕ್ಷೆ ಶಿವಮ್ಮಕೃಷ್ಣೇಗೌಡ, ಉಪಾಧ್ಯಕ್ಷೆ ದೇವಮ್ಮ, ಸದಸ್ಯರಾದ ಸುಶೀಲಮ್ಮ, ತಿಮ್ಮಪ್ಪ, ಕೃಷ್ಣೇಗೌಡ, ರೂಪಶೇಖರ್, ರಮೇಶ್ ಸಭೆಗೆ ಬಹಿಷ್ಕಾರ ಹಾಕಿ ಹೊರ ನಡೆಯುತ್ತಿದ್ದಂತೆ ತಬ್ಬಿಬಾದ ಪಿಡಿಒ ಸಮಜಾಯಿಷಿ ನೀಡಲು ಮುಂದಾದರೂ, ಕಿವಿ ಗೊಡದ ಸದಸ್ಯರು ಪಟ್ಟು ಬಿಡದೆ ಹೊರ ನಡೆದರು.ಈ ಸಂದರ್ಭ ಸದಸ್ಯರಾದ ನಾಟನಹಳ್ಳಿ ಲೋಕೇಶ್, ಅಂಕನಹಳ್ಳಿ ಅನಿಲ್‌ಕುಮಾರ್ ಮತ್ತು ತೇಜ ಅವರು ಪಿಡಿಒ ವಿಷಯ ಹೊರತು ಪಡಿಸಿ, ಉಳಿದ ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಸಭೆಗೆ ಬಹಿಷ್ಕಾರ ಹಾಕ ಬೇಡಿ ಎಂದು ಸಭಾಂಗಣದಿಂದ ಹೊರ ಬಂದ ಅಧ್ಯಕ್ಷರು ಮತ್ತು ಸದಸ್ಯರನ್ನು ಮನವೊಲಿಸಲು ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ.ಪಿಡಿಒ ಸ್ವಾಮಿನಾಯಕ `ಪ್ರಜಾವಾಣಿ' ಜತೆ ಮಾತನಾಡಿ ಸದಸ್ಯರು ಆರೋಪ ಮಾಡಿದಂತೆ ನಾನು ನಡೆದುಕೊಂಡಿಲ್ಲ. ಪಂಚಾಯಿತಿ ಬಿಲ್‌ಕಲೆಕ್ಟರ್ ಎಸ್. ರವಿ ಅನ್ನು ಸಾಮಾನ್ಯ ಸಭೆಯಲ್ಲಿ ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.ಆದರೆ, ಬಿಲ್‌ಕಲೆಕ್ಟರ್ ಎಸ್. ರವಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಿಂದ ತಡೆಯಾಜ್ಞೆ ತಂದ ಮೇರೆಗೆ ಕರ್ತವ್ಯದಲ್ಲಿ ಮುಂದುವರಿಸಲಾಗಿದೆ. ಇದನ್ನು ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಮನವರಿಕೆ ಮಾಡುವಷ್ಟರಲ್ಲಿ ಸಾಮಾನ್ಯಸಭೆಯಿಂದ ಹೊರ ಹೋಗಿದ್ದಾರೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry