ಸಭೆಗೆ ಸೀಮಿತವಾಗಿ ಉಳಿದ ಐಸಿಸಿ ನಿರ್ಣಯ

7
ನಿಷೇಧಿತ ಬೆಳೆಗಾಗಿ ನೀರಿನ ಬೇಡಿಕೆ: ಕೆಳಭಾಗದ ರೈತರ ಬವಣೆಗಿಲ್ಲ ಬೆಲೆ

ಸಭೆಗೆ ಸೀಮಿತವಾಗಿ ಉಳಿದ ಐಸಿಸಿ ನಿರ್ಣಯ

Published:
Updated:
ಸಭೆಗೆ ಸೀಮಿತವಾಗಿ ಉಳಿದ ಐಸಿಸಿ ನಿರ್ಣಯ

ಯಾದಗಿರಿ: ಬತ್ತ ಇಲ್ಲಿ ನಿಷೇಧಿತ ಬೆಳೆ. ಆದರೂ ಪ್ರತಿ ವರ್ಷ ಬಿತ್ತನೆ ಆಗುವ ಬತ್ತದ ಪ್ರಮಾಣ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆ ಆಗುತ್ತಿಲ್ಲ. ಬತ್ತಕ್ಕಾಗಿ ಕಾಲುವೆ ನೀರು ಹರಿಸುವ ಆಗ್ರಹ ಪ್ರತಿ ವರ್ಷ ಕೇಳಿ ಬರುತ್ತಲೇ ಇದೆ. ಇರುವ ನೀರಿನಲ್ಲಿಯೇ ಮೂರ‌್ನಾಲ್ಕು ಜಿಲ್ಲೆಗಳ ರೈತರಿಗೆ ಒದಗಿಸುವುದು ಹೇಗೆ ಎನ್ನುವ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದ್ದರೆ, ಹೊಲಕ್ಕೆ ನೀರು ಹರಿಸಿ, ಬತ್ತ ಬೆಳೆಯಬೇಕು ಎನ್ನುವ ಆಗ್ರಹ ರೈತರಿಂದ ಕೇಳಿ ಬರುತ್ತಿದೆ.ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರು ಪ್ರತಿ ವರ್ಷ ಕಾಲುವೆ ನೀರು ಹರಿಸುವ ಅವಧಿಗೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಲೇ ಇದ್ದಾರೆ. ಬೇಸಿಗೆ ಬೆಳೆಗೆ ಏಪ್ರಿಲ್ 15ರವರೆಗೆ ನೀರು ಬೇಕು ಎನ್ನುವ ಬೇಡಿಕೆ ಮುಂದಿಡುತ್ತಿದ್ದಾರೆ. ಆದರೆ ಸದ್ಯಕ್ಕೆ ಲಭ್ಯವಿರುವ ನೀರಿನಲ್ಲಿ ಅಲ್ಲಿಯವರೆಗೆ ಹೇಗೆ ಹರಿಸಬೇಕು ಎಂಬುದು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ತೋಚದಾಗಿದೆ.ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳ್ಳುವ ಮೊದಲು ಗುಲ್ಬರ್ಗ, ವಿಜಾಪುರ, ಯಾದಗಿರಿ, ರಾಯಚೂರು ಜಿಲ್ಲೆಗಳು ಬರಪೀಡಿತ ಪ್ರದೇಶಗಳು. ಬಿಸಿಲಿನ ಬವಣೆಯ ಮಧ್ಯೆ, ರೈತರು ಒಂದು ಬೆಳೆ ತೆಗೆದುಕೊಳ್ಳಲು ಪರದಾಡುವ ಸ್ಥಿತಿ. ಇದನ್ನು ನಿವಾರಿಸಲಿಕ್ಕಾಗಿಯೇ ಸುಮಾರು ರೂ.15 ಸಾವಿರ ಕೋಟಿ ವೆಚ್ಚದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಅನುಷ್ಠಾನಗೊಳಿಸಿದ ಸರ್ಕಾರ, ಸುಮಾರು 25 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಒದಗಿಸಿತು. ಲಭ್ಯವಿರುವ ನೀರು ಎಲ್ಲರಿಗೂ ದೊರೆಯಲಿ ಎಂಬ ಆಶಯದಿಂದ ಯೋಜನೆ ರೂಪಿಸುವ ಸಂದರ್ಭದಲ್ಲಿಯೇ ದೀರ್ಘಾವಧಿ ಮತ್ತು ಹೆಚ್ಚು ನೀರಿನ ಅಗತ್ಯ ಇರುವ ಕಬ್ಬು, ಬಾಳೆ, ಬತ್ತದ ಬೆಳೆಗಳನ್ನು ಈ ಪ್ರದೇಶದಲ್ಲಿ ನಿಷೇಧಿಸಲಾಯಿತು.1989 ರಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ)ಯನ್ನು ರಚಿಸಲಾಯಿತು. ಅಚ್ಚುಕಟ್ಟು ಪ್ರದೇಶದ ನೀರಾವರಿ ವ್ಯವಸ್ಥೆ ನಿಯಂತ್ರಿಸುವ ಅಧಿಕಾರವನ್ನು ಸಮಿತಿಗೆ ನೀಡಲಾಯಿತು. ಅಣೆಕಟ್ಟುಗಳಲ್ಲಿ ಲಭ್ಯವಿರುವ ನೀರಿಗೆ ಅನುಗುಣವಾಗಿ ಕಾಲುವೆಗೆ ಎಲ್ಲಿಂದ, ಎಲ್ಲಿಯವರೆಗೆ ನೀರು ಹರಿಸಬೇಕು ಎನ್ನುವ ನಿರ್ಧಾರವನ್ನು ಈ ಸಮಿತಿ ನಿರ್ಧರಿಸುತ್ತದೆ. ಪ್ರತಿವರ್ಷ ಈ ಸಮಿತಿ ಎರಡು ಬಾರಿ ಸಭೆ ಸೇರುತ್ತದೆ.ಅದೇ ರೀತಿ ಪ್ರತಿ ಸಭೆಯಲ್ಲೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತ, ಬಾಳೆ, ಕಬ್ಬು ಬೆಳೆಯುವುದನ್ನು ನಿಷೇಧಿಸಲಾಗಿದೆ ಎನ್ನುವ ನಿರ್ಣಯವನ್ನು ಕೈಗೊಳ್ಳುತ್ತದೆ. ಈಗಲೂ ಇದೇ ರೀತಿಯ ನಿರ್ಣಯ ಕೈಗೊಳ್ಳಲಾಗುತ್ತಿದೆ. ಆದರೆ ಇದು ಕೇವಲ ಸಭೆಗೆ ಮಾತ್ರ ಸೀಮಿತವಾಗಿ ಉಳಿಯುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ನಿಷೇಧಿತ ಬತ್ತದ ಬೆಳೆ ಯಾವುದೇ ನಿರ್ಬಂಧ ಇಲ್ಲ ಎನ್ನುವಂತೆ ಬೆಳೆಯಲಾಗುತ್ತಿದೆ ಎಂದು ಕಾಲುವೆ ಕೊನೆ ಭಾಗದ ರೈತರು ದೂರುತ್ತಿದ್ದಾರೆ.ಆಂಧ್ರಪ್ರದೇಶದ ವಲಸಿಗರು ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಯ ಮೇಲ್ಭಾಗದ ಜಮೀನುಗಳನ್ನು ಲೀಜ್‌ಗೆ ಪಡೆದೋ ಅಥವಾ ಖರೀದಿಸಿಯೋ, ನಿಷೇಧಿತ ಬತ್ತದ ಬೆಳೆಯನ್ನು ಬೆಳೆಯುತ್ತಲೇ ಇದ್ದಾರೆ. ಇದರಿಂದ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ ಎಂದು ನೇತಾಜಿ ಯುವ ಸೇನೆ ಅಧ್ಯಕ್ಷ ನಿಂಗು ಜಡಿ ಆರೋಪಿಸುತ್ತಾರೆ.ವರ್ಷದಲ್ಲಿ ಒಂದು ಬೆಳೆ ಪಡೆದರೆ ಸಾಕು ಎನ್ನುವ ಪರಿಸ್ಥಿತಿಯಲ್ಲಿದ್ದಾಗ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸಿ, ನೀರಾವರಿ ಸೌಲಭ್ಯ ಕಲ್ಪಿಸಿತು. ಆದರೆ ನೀರು ಸಿಗುತ್ತಿದ್ದಂತೆಯೇ ವರ್ಷಕ್ಕೆ ಎರಡು ಬತ್ತದ ಬೆಳೆ ತೆಗೆದುಕೊಳ್ಳುವ ಪ್ರವೃತ್ತಿ ಆರಂಭವಾಯಿತು. ಇದನ್ನು ನೋಡಿದ ಸ್ಥಳೀಯ ರೈತರೂ ವರ್ಷಕ್ಕೆ ಎರಡು ಬತ್ತದ ಬೆಳೆ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿ ಕಾಲುವೆಗೆ ಹರಿಸುವ ನೀರಿನಲ್ಲಿ ಹೆಚ್ಚಿನ ಪ್ರಮಾಣ ಮೇಲ್ಭಾಗದ ರೈತರ ಪಾಲಾಗುತ್ತಿದೆ. ಕೊನೆಯ ಭಾಗದ ರೈತರು ಅಲ್ಪಾವಧಿ ಬೆಳೆಗಳಾದ ಶೇಂಗಾ, ಹತ್ತಿ, ಜೋಳ ಬೆಳೆಯುವುದಕ್ಕೂ ನೀರು ಸಿಗದಂತಾಗಿದೆ ಎಂದು ಹೇಳುತ್ತಾರೆ.ಹೂಗಾರ ವರದಿ: ಮೇಲ್ಭಾಗದ ರೈತರಿಂದ ಹೆಚ್ಚಿನ ನೀರು ಬಳಕೆ ಆಗುತ್ತಿದ್ದುದರಿಂದ ಕೊನೆಯ ಭಾಗದ ರೈತರಿಗೆ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದಕ್ಕಾಗಿ ಹೋರಾಟ ಆರಂಭಿಸಿದ ರೈತರ ಒತ್ತಡಕ್ಕೆ ಮಣಿದ ಸರ್ಕಾರ, ನೀರಿನ ಉಪಯೋಗದ ಬಗ್ಗೆ ವಿವರವಾದ ವರದಿ ಸಲ್ಲಿಸಲು ಕೃಷಿ ಅರ್ಥಶಾಸ್ತ್ರಜ್ಞ ಡಾ. ಎಲ್.ಬಿ. ಹೂಗಾರ ನೇತೃತ್ವದ ಸಮಿತಿ ರಚಿಸಿತು.2003ರ ಆಗಸ್ಟ್‌ನಲ್ಲಿ ವರದಿ ಸಲ್ಲಿಸಿದ ಹೂಗಾರ ಸಮಿತಿಯು, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಸಮಗ್ರ ಹಿತದೃಷ್ಟಿಯಿಂದ ಈ ಪ್ರದೇಶದಲ್ಲಿ ಬತ್ತ ಬೆಳೆಯುವುದನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ. ಅಲ್ಲದೇ ಬತ್ತ ಬೆಳೆಯುವುದನ್ನು ಮುಂದುವರಿಸಿದರೆ, ಯೋಜನೆಯ ನೀರು ಕೇವಲ ಸುರಪುರ ತಾಲ್ಲೂಕಿಗೆ ಮಾತ್ರ ಸೀಮಿತವಾಗಲಿದ್ದು, ಉಳಿದ ತಾಲ್ಲೂಕುಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಲಿವೆ ಎಂಬ ಎಚ್ಚರಿಕೆ ನೀಡಿದೆ.ಒಂದು ಎಕರೆ ಬತ್ತ ಬೆಳೆಯುವ ಅಗತ್ಯವಿರುವ ನೀರಿನಲ್ಲಿ 3 ಎಕರೆ ಶೇಂಗಾ ಅಥವಾ 4 ಎಕರೆ ಗೋದಿ ಅಥವಾ 4 ಎಕರೆ ಹಿಂಗಾರಿ ಜೋಳ ಅಥವಾ 4 ಎಕರೆ ಸೂರ್ಯಕಾಂತಿ ಅಥವಾ 7 ಎಕರೆ ಸಜ್ಜೆ ಅಥವಾ 3 ಎಕರೆ ಹತ್ತಿ, 3 ಎಕರೆ ಮೆಣಸಿನ ಕಾಯಿಯನ್ನು ಬೆಳೆಯಬಹುದು. ಕೇವಲ ಬತ್ತ ಬೆಳೆಯುವುದಕ್ಕಾಗಿಯೇ ನೀರನ್ನು ಉಪಯೋಗಿಸಿದಲ್ಲಿ ಕೇವಲ 5 ಲಕ್ಷ ಎಕರೆಗೆ ಮಾತ್ರ ನೀರು ಒದಗಿಸಲು ಸಾಧ್ಯ. ಇನ್ನುಳಿದ 20 ಎಕರೆ ಜಮೀನು ನೀರಾವರಿಯಿಂದ ವಂಚಿತವಾಗಲಿದೆ ಎಂಬ ಅಂಶವನ್ನು ಕೃಷಿ ತಜ್ಞರು ಆಗಲೇ ತಿಳಿಸಿದ್ದಾರೆ.ನ್ಯಾಯಾಲಯಗಳಲ್ಲೂ ಅನೇಕ ದಾವೆಗಳನ್ನು ದಾಖಲಿಸಿದ್ದು, ನ್ಯಾಯಾಲಯಗಳೂ ಈ ಪ್ರದೇಶದಲ್ಲಿ ಬತ್ತ ಬೆಳೆಯಬಾರದು ಎಂದು ಆದೇಶಿಸಿವೆ. ಆದರೆ ಕಾಲುವೆಯ ಮೇಲ್ಭಾಗದಲ್ಲಿ ಮಾತ್ರ ಬತ್ತ ಬೆಳೆಯನ್ನು ಎಗ್ಗಿಲ್ಲದೇ ಬೆಳೆಯಲಾಗುತ್ತಿದೆ ಎನ್ನುವ ಆರೋಪ ಕೆಳಭಾಗದ ರೈತರದ್ದು.ವ್ಯರ್ಥ ಪೋಲು: ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಹರಿಯುವ ನೀರು ಬಹುಪಾಲ ವ್ಯರ್ಥವಾಗುತ್ತಿದೆ. ಮುಖ್ಯ ಕಾಲುವೆ ಇದೀಗ ನವೀಕರಣವಾಗಿದ್ದು, ಉಪಕಾಲುವೆಗಳು ಶಿಥಿಲಾವಸ್ಥೆಯಲ್ಲಿಯೇ ಇವೆ. ಇದರಿಂದಾಗಿ ಉಪಕಾಲುವೆಗಳು ಒಡೆದು, ನೀರು ಪೋಲಾಗುತ್ತಿದೆ.ಕೊನೆಯ ಭಾಗದ ಕಾಲುವೆಗಳ ದುರಸ್ತಿಯೂ ಆಗಿಲ್ಲ. ಅಲ್ಲದೇ ಈ ಕಾಲುವೆಗಳಿಗೆ ಹರಿಯುವ ನೀರು ಪ್ರಮಾಣವೂ ಅಷ್ಟಕ್ಕಷ್ಟೆ. ಇದರಿಂದಾಗಿ ಇಲ್ಲಿನ ರೈತರು ಪ್ರತಿ ವರ್ಷ ಒಂದೇ ಬೆಳೆ ಬೆಳೆಯುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ ಹೇಳುತ್ತಾರೆ.ಸದ್ಯಕ್ಕೆ ನೀರಿಗಾಗಿ ರಾಜ್ಯ ರಾಜ್ಯಗಳ ಮಧ್ಯೆ ವ್ಯಾಜ್ಯ ನಡೆಯುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜಿಲ್ಲೆಗಳ ಮಧ್ಯೆ ಹಾಗೂ ತಾಲ್ಲೂಕು ರೈತರ ಮಧ್ಯೆ ವಿವಾದ ಉಂಟಾಗಲಿದೆ ಎನ್ನುವ ಎಚ್ಚರಿಕೆಯನ್ನು ರೈತ ಮಲ್ಲಯ್ಯ ನೀಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry