ಸಮಕಾಲೀನರ ನೆನೆದ ಜಯಾ

7
ಭಾರತೀಯ ಚಿತ್ರರಂಗದ ಶತಮಾನೋತ್ಸವ ಸಂಭ್ರಮ

ಸಮಕಾಲೀನರ ನೆನೆದ ಜಯಾ

Published:
Updated:

ಚೆನ್ನೈ: ‘ಹಿಂದೆ ಒಂದು ಸಿನಿಮಾ 100 ದಿನ ಪ್ರದರ್ಶನ ಪೂರೈಸಿದರೆ,ಅದಕ್ಕಾಗಿ ದುಡಿದ ಪ್ರತಿಯೊಬ್ಬರೂ ನಮ್ಮ ಸಿನಿಮಾ ಎಂದು ಸಂಭ್ರಮಿಸುತ್ತಿದ್ದರು. ಇಂದು ಇಡೀ ಭಾರತೀಯ ಚಿತ್ರರಂಗ ನೂರು ವರ್ಷಗಳನ್ನು ಕ್ರಮಿಸಿದೆ. ಇದರ ಆಚರಣೆಗೆ ಚೆನ್ನೈ ಸಾಕ್ಷಿಯಾಗುತ್ತಿರುವುದು ಸಂತಸ ತಂದಿದೆ. ಚಿತ್ರರಂಗದ ಈ ಪಯಣದಲ್ಲಿ ಒಬ್ಬ ನಟಿಯಾಗಿ ನಾನೂ ಪಾಲುದಾರಳಾಗಿರುವುದು ಹೆಮ್ಮೆಯ ಸಂಗತಿ’ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿದರು.ಭಾರತೀಯ ಚಲನಚಿತ್ರರಂಗಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಚೆನ್ನೈನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಸಂಭ್ರಮಾಚರಣೆಗೆ, ಮೂಲತಃ  ಚತುರ್ಭಾಷಾ ಚಿತ್ರನಟಿಯಾಗಿದ್ದ ಜಯಲಲಿತಾ ಚಾಲನೆ ನೀಡಿದರು.ರಾಜಕುಮಾರ್, ಉದಯಕುಮಾರ್, ಪಂಡರೀಬಾಯಿ, ಬಿ. ಸರೋಜಾದೇವಿ ಸೇರಿದಂತೆ ಕನ್ನಡ ಚಿತ್ರರಂಗದ ತಮ್ಮ ಸಮಕಾಲೀನ ಸಾಧಕರ ಹೆಸರನ್ನು ಭಾಷಣದಲ್ಲಿ ಪ್ರಸ್ತಾಪಿಸಿದರು. ತಮ್ಮ ಗುರು ಎಂ.ಜಿ. ರಾಮಚಂದ್ರನ್ ಗುಣಗಾನಕ್ಕೆ ಮತ್ತು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಟೀಕೆಗೆ ಈ ವೇದಿಕೆಯನ್ನು ಬಳಸಿಕೊಂಡರು.ಸಂಭ್ರಮಾಚರಣೆಯ ಮೊದಲ ದಿನ, ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಹಿರಿಯರಿಗೆ ಗೌರವ ಸಲ್ಲಿಸಲು ಮತ್ತು ತಮಿಳು ಚಿತ್ರರಂಗ ನಡೆದು ಬಂದ ಹಾದಿಯ ಪರಿಚಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿತ್ತು.

ತಮಿಳುಮಯ: ದಕ್ಷಿಣದ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷಾ ಚಿತ್ರೋದ್ಯಮಗಳು ಸೇರಿ ಆಯೋಜಿಸಿದ ಕಾರ್ಯಕ್ರಮವಾಗಿದ್ದರೂ, ಉದ್ಘಾಟನಾ ಸಮಾರಂಭ ಸಂಪೂರ್ಣ ತಮಿಳುಮಯವಾಗಿತ್ತು. ಅದ್ದೂರಿ ವೇದಿಕೆಯಲ್ಲಿ ತಮಿಳು ಹೊರತಾಗಿ ಇತರೆ ಭಾಷೆಯ ಚಿತ್ರರಂಗದ ಗಣ್ಯರಿಗೆ ಅವಕಾಶವಿರಲಿಲ್ಲ. ಶತಮಾನೋತ್ಸವ ಸಂಭ್ರಮಾಚರಣೆ ಸಮಿತಿಯ ಅಧ್ಯಕ್ಷ ಸಿ. ಕಲ್ಯಾಣ್ ಅವರ ಭಾಷಣವೂ ಕನ್ನಡ ಸೇರಿದಂತೆ ಯಾವುದೇ ಚಿತ್ರೋದ್ಯಮದ ಸಹಭಾಗಿತ್ವದ ಕುರಿತು ಪ್ರಸ್ತಾಪಿಸದೆ, ‘ಅಮ್ಮ’ನ ಹೊಗಳಿಕೆಗೆ ಮೀಸಲಾಗಿತ್ತು.

ರಜನೀಕಾಂತ್, ಕಮಲಹಾಸನ್, ಇಳೆಯರಾಜ, ಬಾಲಕೃಷ್ಣ, ಜಯಪ್ರದಾ, ತ್ರಿಶಾ, ಮೀನಾ ಮುಂತಾದ ತಾರಾ ಸಮೂಹವೇ ಅಲ್ಲಿತ್ತು. ನಾಲ್ಕೂ ಭಾಷೆಗಳ ಪ್ರತಿನಿಧಿಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ತಮ್ಮ ನೆಚ್ಚಿನ ತಾರೆಯರನ್ನು ನೋಡಲು ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಜಾತ್ರೆಯೇ ನೆರೆದಿತ್ತು. ಚೆನ್ನೈ ಮಾತ್ರವಲ್ಲದೆ, ದೂರದ ಊರುಗಳಿಂದ ಬಂದಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಕನ್ನಡ ಚಿತ್ರೋದ್ಯಮ ಹೈರಾಣ

ಕಾರ್ಯಕ್ರಮದ ಮೊದಲ ದಿನ ತಮಿಳು ಚಿತ್ರೋ ದ್ಯಮಕ್ಕೆ ಆದ್ಯತೆ ನೀಡುವ ಮೂಲಕ ಕನ್ನಡ ಮತ್ತು ಇತರೆ ಚಿತ್ರೋದ್ಯಮಗಳನ್ನು ಕಡೆಗಣಿಸಿರುವುದು ಚಿತ್ರರಂಗದ ಪ್ರತಿನಿಧಿಗಳ ಮಾತಿನಲ್ಲಿ ವ್ಯಕ್ತವಾಯಿತು. ಸುಮಾರು 9000 ಜನರು ಕುಳಿತುಕೊಳ್ಳಲು ಅವಕಾಶ ವಿರುವ ಜಾಗದಲ್ಲಿ ಕನ್ನಡ ಚಿತ್ರರಂಗದ ಪ್ರತಿನಿಧಿಗಳಿಗೆ ಸಿಕ್ಕಿದ್ದು 70 ಪ್ರವೇಶ ಪಾಸುಗಳು ಮಾತ್ರ. ಸಂಭ್ರಮಾ ಚರಣೆಯಲ್ಲಿ ಚಿತ್ರರಂಗವನ್ನು ಪ್ರತನಿಧಿಸುತ್ತಿರುವ ನಿರ್ಮಾಪಕ ಸಾ.ರಾ. ಗೋವಿಂದು, ‘ನಾವಿಲ್ಲಿ ಕೇವಲ ಕೆಲಸಗಾರರಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭಾನುವಾರ ಬೆಳಿಗ್ಗೆ ಕನ್ನಡ ಚಿತ್ರರಂಗ ಬೆಳೆದುಬಂದ ಹಾದಿಯ ಕಿರುನೋಟ, ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಹಿರಿಯ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry