ಸಮಕಾಲೀನ ಛಾಯಾಚಿತ್ರ ಪ್ರದರ್ಶನ ಆರಂಭ

7

ಸಮಕಾಲೀನ ಛಾಯಾಚಿತ್ರ ಪ್ರದರ್ಶನ ಆರಂಭ

Published:
Updated:

ಬೆಂಗಳೂರು: ಲಂಡನ್‌ನ ‘ವಿಕ್ಟೋರಿಯ ಮತ್ತು ಆಲ್ಬರ್ಟ್ ಸಂಗ್ರಹಾಲಯ’ದ (ವಿ ಅಂಡ್ ಎ) ಸಮಕಾಲೀನ ಛಾಯಾಚಿತ್ರ ಕಲೆಯ ಆಯ್ದ ಛಾಯಾಚಿತ್ರಗಳ ಪ್ರದರ್ಶನವು ನಗರದ ಅರಮನೆ ರಸ್ತೆಯಲ್ಲಿರುವ ಆಧುನಿಕ ಕಲೆಯ ರಾಷ್ಟ್ರೀಯ ಚಿತ್ರಶಾಲೆಯಲ್ಲಿ (ಎನ್‌ಜಿಎಂಎ) ಶನಿವಾರ ಪ್ರಾರಂಭವಾಯಿತು.ಪ್ರದರ್ಶನ ಪ್ರಾರಂಭಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ‘ವಿ ಅಂಡ್ ಎ’ ಸಮಕಾಲೀನ ಕಾರ್ಯಕ್ರಮಗಳ ವಿಭಾಗದ ಉಪ ಮುಖ್ಯಸ್ಥೆ ಲೂಯಿಸ್ ಶೆನಾನ್, ‘ನಾನು ಎಂದೂ ನಿಜದಲ್ಲಿ ಕಾಣಲಾಗದಂತಹದ್ದು’ ಎಂಬ ಶೀರ್ಷಿಕೆಯ ಈ ಪ್ರದರ್ಶನವು ಫೆಬ್ರುವರಿ 27ರವರೆಗೆ ನಡೆಯಲಿದೆ’ ಎಂದರು. ಸೋಮವಾರ ಹೊರತುಪಡಿಸಿ ವಾರದ ಉಳಿದ ದಿನಗಳಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರದರ್ಶನದ ಗ್ಯಾಲರಿಯು ಸಾರ್ವಜನಿಕರಿಗಾಗಿ ತೆರೆದಿರುತ್ತದೆ ಎಂದು ಅವರು ಹೇಳಿದರು.ಬ್ರಿಟಿಷ್ ಗ್ರಂಥಾಲಯ, ‘ವಿ ಅಂಡ್ ಎ’, ಬ್ರಿಟಿಷ್ ಸಂಗ್ರಹಾಲಯ ಸೇರಿದಂತೆ ಆ ದೇಶದ ಆರು ಪ್ರಮುಖ ಸಂಸ್ಥೆಗಳ ಸಂಯುಕ್ತ ವೇದಿಕೆಯಾದ ‘ವರ್ಲ್ಡ್ ಕಲೆಕ್ಷನ್ ಪ್ರೊಗ್ರಾಮ್’ ಸಂಸ್ಥೆಯು ಈ ಪ್ರದರ್ಶನವನ್ನು ಆಯೋಜಿಸಿದೆ ಎಂದು ಅವರು ತಿಳಿಸಿದರು. ‘ವಿ ಅಂಡ್ ಎ’, ಇಂಗ್ಲೆಂಡ್ ಸರ್ಕಾರದ ದತ್ತಿ ಸಂಸ್ಥೆ. ಇದು ಕಲೆ ಮತ್ತು ವಿನ್ಯಾಸಕ್ಕೆ ಮುಡಿಪಾದ ಜಗತ್ತಿನ ಅತ್ಯುತ್ತಮ ಸಂಗ್ರಹಾಲಯವಾಗಿದ್ದು, ಅಂತರರಾಷ್ಟ್ರೀಯ ಛಾಯಾಗ್ರಾಹಕರ ಉತ್ತಮವಾದ ಛಾಯಾಚಿತ್ರಗಳ ಸಂಗ್ರಹವನ್ನು ಹೊಂದಿದೆ ಎಂದು ಅವರು ನುಡಿದರು.ಎನ್‌ಜಿಎಂಎ ನಿರ್ದೇಶಕಿ ಶೋಭಾ ನಂಬಿಶನ್ ಮಾತನಾಡಿ, ಕಳೆದ ಎರಡು ದಶಕಗಳಿಂದ ‘ವಿ ಅಂಡ್ ಎ’ ಸಂಗ್ರಹಿಸಿರುವ ಛಾಯಾಚಿತ್ರಗಳನ್ನು ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ನಿಂದ ಹೊರಗೆ, ಬೆಂಗಳೂರಿನಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry