ಗುರುವಾರ , ಏಪ್ರಿಲ್ 15, 2021
31 °C

ಸಮಗ್ರಕೃಷಿ ನೀತಿಗೆ ರೈತಮುಖಂಡ ಪುಟ್ಟಣ್ಣಯ್ಯ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಬರಗಾಲವನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಸರ್ಕಾರಗಳು ಕೃಷಿನೀತಿಯನ್ನು ರೂಪಿಸಬೇಕು ಎಂದು ರೈತ ಸಂಘದ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಆಗ್ರಹಿಸಿದರು.ರಾಜ್ಯ ರೈತ ಸಂಘ, ಹಸಿರು ಸೇನೆ ಇವರ ಸಂಯುಕ್ತಾಶ್ರಯದಲ್ಲಿ ಬರಗೂರು ಗ್ರಾಮದಲ್ಲಿ ~ರೈತ ಗ್ರಾಮ ಘಟಕದ ಉದ್ಘಾಟನಾ ಸಮಾರಂಭ~ದಲ್ಲಿ ಸೋಮವಾರ ಮಾತನಾಡಿದ ಅವರು, ಹಿಂಗಾರು, ಮುಂಗಾರು ಮಳೆ ಕೈ ಕೊಟ್ಟಾಗ ರೈತರ ನೆರವಿಗೆ ಯಾವ ರೀತಿ ದಾವಿಸಬೇಕು. ಆಹಾರ ಮತ್ತು ಮೇವು ಒದಗಿಸುವ ಬಗೆ. ರೈತರನ್ನು ಗುಳೆ ಹೋಗದಂತೆ ಯಾವ ರೀತಿ ತಡೆಯಬೇಕು. ಈ ಬಗ್ಗೆ ಕೃಷಿ ನೀತಿ ರೂಪಿಸಿ ಸಮಸ್ಯೆ ನಿಭಾಯಿಸುವ ಇಚ್ಛಾಶಕ್ತಿ ರಾಜಕಾರಣಿಗಳಲ್ಲಿರಬೇಕು ಎಂದರು.ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಸಿಗುವಂತಾಗಬೇಕು. ಸಮರ್ಪಕ ವಿದ್ಯುತ್, ನೀರಾವರಿ ಯೋಜನೆ ರೂಪಿಸಬೇಕು. ಆಹಾರ ಕ್ಷೇತ್ರವನ್ನು ದೊಡ್ಡ  ಉದ್ದಿಮೆ ಎಂದು ಪರಿಗಣಿಸಬೇಕು. ಆದರೆ, ಯಾವ ರಾಜಕಾರಣಿಯೂ ರೈತರ ಬಗ್ಗೆ ಚಿಂತಿಸುತ್ತಿಲ್ಲ. ದೇವೇಗೌಡರು ಪ್ರಧಾನಿಯಾದಾಗ ಎಲ್ಲರು ಖುಷಿ ಪಟ್ಟೆವು. ನಂತರ ಅವರು ರೈತರಿಗಾಗಿ ಮಾಡಿದ್ದೇನು ಎಂದು ಪ್ರಶ್ನಿಸಿದರು?.ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿ, ಪ್ರತಿ ಗ್ರಾಮದಲ್ಲಿಯೂ ಯುವಕರು ರೈತ ಸಂಘದ ಗ್ರಾಮ ಘಟಕ ಆರಂಭಿಸಬೇಕು. ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು.ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ರಾಜಕಾರಣಿಗಳ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.ಸಂಘದ ರಾಜ್ಯಪ್ರಧಾನ ಕಾರ್ಯ ದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿದರು. ಮುಖಂಡರಾದ ಜಯ ರಾಂ, ಲಕ್ಷ್ಮೀನಾರಾಯಣ್, ರಾಮ ಸ್ವಾಮಿ, ಡಿ,ಕೆ. ನಿಂಗೇಗೌಡ, ಬಿ.ಎಂ. ರಾಮದಾಸ್, ಸತ್ತಿಗೌಡ, ಯು.ಟಿ. ಅಜ್ಜೇಗೌಡ, ಎಂ.ಎಲ್. ಹರೀಶ್, ದೊಡ್ಡೇರಿ ಶ್ರೀಕಂಠು ಇದ್ದರು. ಸಭೆಯ ಆರಂಭದಲ್ಲಿ ಕಲಾವಿದ ಸಿ.ಜಿ. ಸೋಮಶೇಖರ್ ರೈತ ಗೀತೆ ಹಾಡಿದರು.ಗಣಪತಿ ವಿಸರ್ಜನೆ

ಚನ್ನರಾಯಪಟ್ಟಣ: ಜಾನಪದ ಕಲಾತಂಡಗಳೊಂದಿಗೆ ಗಣಪತಿ ಮೂರ್ತಿಯ ಉತ್ಸವ ಪಟ್ಟಣದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು.ಗಣಪತಿ ಪೆಂಡಾಲ್‌ನಲ್ಲಿ ಬೆಳಿಗ್ಗೆ ಪೂಜೆ ನೆರವೇರಿಸಿ ಅಲಂಕೃತ ವಾಹನದಲ್ಲಿ ಗಣಪತಿಯನ್ನು ಪ್ರತಿಷ್ಟಾಪಿಸಲಾಯಿತು. ಉತ್ಸವ ಸಾಗುವ ರಸ್ತೆಯನ್ನು ಸ್ವಚ್ಛಗೊಳಿಸಿದ ಮಹಿಳೆಯರು ರಂಗೋಲಿ ಹಾಕಿ ಬರಮಾಡಿಕೊಂಡರು. ಹಣ್ಣು, ಕಾಯಿ ಅರ್ಪಿಸಿ ಪೂಜೆ ಮಾಡಿಸಿದರು. ಪಟಕುಣಿತ, ವೀರಗಾಸೆ, ಡೊಳ್ಳು ಕುಣಿತ,  ರೋಡ್ ಆರ್ಕೆಸ್ಟ್ರಾ, ಗಣೇಶೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಕರಾವಳಿಯ ಪ್ರಸಿದ್ಧ ಹುಲಿವೇಷ, ಯಕ್ಷಗಾನ ಬೊಂಬೆ, ದಸರಾ ಗೊಂಬೆ ಕುಣಿತ

ಮೆರವಣಿಗೆಯ ಆಕರ್ಷಣೆ. ತಮಟೆ ವಾದ್ಯಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ಹೆಜ್ಜೆ ಹಾಕಿದರು.ಪ್ರಸನ್ನ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು ಬಿಳಿ ಸಮವಸ್ತ್ತ್ರ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆನೆಯ ಮೇಲೆ ನಾಡದೇವತೆ ಚಾಮುಂಡೇಶ್ವರಿಯನ್ನು ಪ್ರತಿಷ್ಟಾಪಿಸಲಾಗಿತ್ತು. ಕೇರಳದ ಚಂಡೆ ಮದ್ದಳೆ ಈ ವರ್ಷದ ಉತ್ಸವದ ಪ್ರಮುಖ ಆಕರ್ಷಣೆ. ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಸಂಜೆ ಅಮಾನಿಕೆರೆಯಲ್ಲಿ ಗಣಪತಿಯನ್ನು ವಿಸರ್ಜಿಸುವ ಮೂಲಕ 48 ದಿನಗಳ ಉತ್ಸವಕ್ಕೆ ತೆರೆಬಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.