ಸೋಮವಾರ, ಮೇ 17, 2021
25 °C

ಸಮಗ್ರತೆ ರಕ್ಷಣೆ ಕೋಮು ಹಿಂಸೆ ತಡೆ ಮಸೂದೆ ಉದ್ದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೋಮು ಹಿಂಸಾಚಾರ ತಡೆ ಮಸೂದೆ ದೇಶದ ಸಮಗ್ರತೆ ಕಾಪಾಡುವ ಉದ್ದೇಶ ಹೊಂದಿದೆ. ಸರ್ಕಾರ ಐದು ವರ್ಷಗಳ ಹಿಂದೆಯೇ ಇಂಥದ್ದೊಂದು ಕಾನೂನಿನ ಅವಶ್ಯಕತೆಯನ್ನು ಮನಗಂಡಿತ್ತು~ ಎಂದು ಕೇಂದ್ರದ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.ನಗರದ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ಮತ್ತು ಮಾನವ ಹಕ್ಕುಗಳ ಶಿಕ್ಷಣ ಘಟಕದ ವತಿಯಿಂದ ಶುಕ್ರವಾರ ಆರಂಭವಾದ `ಮಾನವ ಹಕ್ಕುಗಳು- ಭಾರತದಲ್ಲಿ ಬದಲಾಗುತ್ತಿರುವ ಒಲವು ಮತ್ತು ಸವಾಲುಗಳು~ ವಿಷಯದ ಮೇಲೆ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.`ವಿಭಜಕ ಶಕ್ತಿಗಳು ಒಂದು ಸಮುದಾಯವನ್ನು ಗುರಿ ಮಾಡಿದಾಗ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಸಾಧ್ಯವಾಗುಂತೆ ಇಂಥ ಕಾನೂನು ನೆರವಿಗೆ ಬರುತ್ತದೆ~ ಎಂದು ಅವರು ಸಮರ್ಥನೆ ನೀಡಿದರು.ವ್ಯಕ್ತಿ, ಸಂಘಟನೆಗಳ ಸ್ವಾರ್ಥ, ದುರಾಸೆಯಿಂದ ಸಮಾಜದಲ್ಲಿ ಇನ್ನೂ ಅಸಮಾನತೆ ಉಳಿದಿದೆ. ದುರಾಸೆ ಎಂಬ ವಿಷಬೀಜ ಬೇರೆಯವರ ಮೇಲೆ ದೌರ್ಜನ್ಯ, ಶೋಷಣೆ ನಡೆಸುವಂತೆ ಪ್ರೇರೇಪಿಸುತ್ತದೆ ಎಂದು ಮೊಯಿಲಿ ವಿಶ್ಲೇಷಿಸಿದರು.`ಶಾಲಾ ಕಾಲೇಜುಗಳಲ್ಲಿ ಮಾನವ ಹಕ್ಕುಗಳ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಶಾಂತಿಯುತವಾಗಿ ಬದುಕುವುದು ಹೇಗೆ ಎಂಬುದನ್ನು ಇಂಥ ಶಿಕ್ಷಣ ಕಲಿಸಿಕೊಡಬೇಕು. ಎಲ್ಲರೂ ಸೌಹಾರ್ದ, ಸಹಬಾಳ್ವೆಯಿಂದ ನೆಲೆಸುವಂಥ ಸಮಾಜದ ನಿರ್ಮಾಣ ಮಾನವ ಹಕ್ಕುಗಳ ಶಿಕ್ಷಣದಿಂದ ಸಾಧ್ಯವಾಗಬೇಕು~ ಎಂದು ಮೊಯಿಲಿ ಆಶಿಸಿದರು.ದೇಶದ ಸವಾಲು: `ದೇಶದೆಲ್ಲೆಡೆ ಮಾನವ ಹಕ್ಕು ವಿರೋಧಿಗಳ ಧ್ವನಿಯಡಗಿಸುವುದು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ಜನಪರ ನಿಲುವು ತೆಗೆದುಕೊಳ್ಳುವ ಮಾನವ ಹಕ್ಕು ಕಲ್ಯಾಣಕ್ಕೆ ತೆರೆದುಕೊಳ್ಳುವುದು 21ನೇ ಶತಮಾನದಲ್ಲಿ ದೇಶದ ಮುಂದಿರುವ ಬಹು ದೊಡ್ಡ ಸವಾಲಾಗಿದೆ~ ಎಂದು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಎಸ್.ಆರ್.ನಾಯಕ್ ಹೇಳಿದರು.ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಾಗಿ 63 ವರ್ಷ ಕಳೆದಿವೆ. `ಎಲ್ಲರೂ ಸ್ವಾತಂತ್ರ್ಯ ಫಲ ಉಣ್ಣುವಂತೆ ಮತ್ತು ನಿರ್ಭೀತರಾಗಿ ಬದುಕುವಂಥ ವಾತಾವರಣ~ ಮೂಡಿಸಬೇಕೆಂಬ ಈ ಘೋಷಣೆಯ ಆಶಯ ಇನ್ನೂ ದೂರದ ಮಾತಾಗಿದೆ. ಜನಾಂಗೀಯ ಹತ್ಯೆ, ಯುದ್ಧಗಳು 21ನೇ ಶತಮಾನದಲ್ಲೂ ಮುಂದುವರಿದಿವೆ ಎಂದು ವಿಷಾದಿಸಿದರು. ಭಯೋತ್ಪಾದನೆ ವಿರುದ್ಧ ಸಮರದಿಂದ ಹಿಡಿದು, ಹವಾಮಾನ ಬದಲಾವಣೆ, ನಗರೀಕರಣದಿಂದ ಹಿಡಿದು ಆರ್ಥಿಕ ಮತ್ತು ಆಹಾರದ ಬಿಕ್ಕಟ್ಟಿನವರೆಗೆ ಮಾನವ ಹಕ್ಕುಗಳು ಹೊಸ ಸವಾಲುಗಳನ್ನು ಎದುರಿಸುತ್ತಿವೆ ಎಂದರು.ಅಭಿವೃದ್ಧಿ ಮತ್ತು ಮಾನವ ಹಕ್ಕುಗಳು ಒಂದನ್ನೊಂದು ಅವಲಂಬಿಸಿದ ವಿಷಯಗಳು. ಆದರೆ ದೀರ್ಘ ಕಾಲದಿಂದ ಅವುಗಳ ಮಧ್ಯೆ ಅಂತರ ಉಳಿದಿದೆ. ಹಲವು ಪ್ರಕರಣಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಬಡವರ ಪಾಲಿಗೆ `ನಿರ್ವಸಿತ~ರಾಗುವುದು ಅಭಿವೃದ್ಧಿ ಎಂಬಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ, ಜೀವ ವೈವಿಧ್ಯಕ್ಕೆ ಹಾನಿ ಮಾಡಲಾಗುತ್ತಿದೆ ಎಂದು ನ್ಯಾ.ನಾಯಕ್ ವಿಷಾದಿಸಿದರು.ಕೇಂದ್ರ ಕಾನೂನು ಆಯೋಗದ ಸದಸ್ಯೆ ಹಾಗೂ ಪುಣೆಯ ಸಿಂಬಿಯಾಸಿಸ್ ಅಂತರರಾಷ್ಟ್ರೀಯ ವಿವಿಯ ಕಾನೂನು ನಿಕಾಯದ ಡೀನ್ ಡಾ.ಶಶಿಕಲಾ ಗುರುಪುರ ಅವರನ್ನು ಸನ್ಮಾನಿಸಲಾಯಿತು. ಶಶಿಕಲಾ ಇದೇ ಕಾಲೇಜಿನಲ್ಲಿ ಪದವಿ ಓದಿದ್ದರು.ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಎಂ.ಪ್ರೇಮ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕು ಶಿಕ್ಷಣ ಘಟಕದ ಸಂಚಾಲಕ ಚಂದ್ರಮೋಹನ ಮರಾಠೆ ಅತಿಥಿಗಳ ಪರಿಚಯ ಮಾಡಿಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.