ಶುಕ್ರವಾರ, ಜೂಲೈ 10, 2020
22 °C

ಸಮಗ್ರ ಅಭಿವೃದ್ಧಿಗೆ ಯೋಜನೆ: ಸಿಎಂ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಗ್ರ ಅಭಿವೃದ್ಧಿಗೆ ಯೋಜನೆ: ಸಿಎಂ ಸೂಚನೆ

ಹುಬ್ಬಳ್ಳಿ: ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ-ಧಾರವಾಡ ನಗರಗಳ ಅಭಿವೃದ್ಧಿಗೆ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.ಹುಬ್ಬಳ್ಳಿ-ಧಾರವಾಡ ರಸ್ತೆಯ ಅಮರಗೋಳ, ಗಾಮನಗಟ್ಟಿ ಹಾಗೂ ಧಾರವಾಡದ ಹಿರೇಮಲ್ಲಿಗವಾಡದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸುತ್ತಿರುವ ವಸತಿ ಯೋಜನೆಗಳ ಕಾಮಗಾರಿಗೆ ಅಮರಗೋಳದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭೂಮಿಪೂಜೆ ನೆರವೇರಿಸಿ, ಜಮೀನಿಗೆ ಬದಲಾಗಿ ನಿವೇಶನ ಪಡೆದುಕೊಂಡ ರೈತರಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.ಅವಳಿ ನಗರಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಹಣಕಾಸಿನ ನೆರವು ನೀಡಿದೆ. ಅಭಿವೃದ್ಧಿ ಕಾರ್ಯಗಳು ಕೂಡ ಸಾಕಷ್ಟು ನಡೆಯುತ್ತಿವೆ. ಆದರೆ ಯದ್ವಾ-ತದ್ವಾ ಅಭಿವೃದ್ಧಿ ನಡೆಯುವಂತಾಗಬಾರದು. ಅಭಿವೃದ್ಧಿಗೆ ಸರಿಯಾದ ದಿಶೆ ಕಲ್ಪಿಸುವುದಕ್ಕಾಗಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಅವರು ಹೇಳಿದರು.ರಾಜ್ಯದ ಅಭಿವೃದ್ಧಿಗೆ ಬಳಸಲಾದ ಹಣದಲ್ಲಿ ಬಹುಪಾಲು ಅವಳಿ ನಗರಕ್ಕೆ ದಕ್ಕಿದೆ. ಆದ್ದರಿಂದ ಇನ್ನು ಮುಂದೆ ಯಾವುದೇ ಬೇಡಿಕೆ ಮುಂದಿಡುವುದು ಬೇಡ ಎಂದು ಹೇಳಿದ ಮುಖ್ಯಮಂತ್ರಿಗಳು ಅವಳಿ ನಗರಗಳ ಮಧ್ಯೆ ನಿರ್ಮಾಣವಾಗುವ ಚತುಷ್ಪಥ ರಸ್ತೆ ರಾಜ್ಯದ ಪ್ರಮುಖ ರಸ್ತೆಯಾಗಿ ಗಮನ ಸೆಳೆಯಲಿದೆ.  ಈ ರಸ್ತೆ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವನ್ನಾಗಿ ಮಾಡುವ ಸಂಬಂಧ ಕೆಲಸ ನಡೆಯುತ್ತಿದೆ. ಅವಳಿ ನಗರಗಳಿಗೆ ಪ್ರತಿದಿನ ಕುಡಿಯುವ ನೀರು ಒದಗಿಸುವ ಕಾರ್ಯ ಕೂಡ ಶೀಘ್ರ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ ಅವರು, ಅಭಿವೃದ್ಧಿ ಕಾಮಗಾರಿಗಳನ್ನು ಒಮ್ಮಿಂದೊಮ್ಮೆಲೆ ಮಾಡಲಾಗುವುದಿಲ್ಲ. ಹೀಗಾಗಿ ವಿರೋಧ ಪಕ್ಷಗಳು ಟೀಕೆ ಮಾಡುವಾಗ ಸರಿಯಾಗಿ ಆಲೋಚನೆ ಮಾಡಬೇಕು ಎಂದು ಹೇಳಿದರು.`ಏಜೆಂಟ್‌ಗಳನ್ನು ನಿಯಂತ್ರಿಸಿ~


ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಸರ್ಕಾರದ ಉತ್ತಮ ಕೆಲಸಗಳ ದುರುಪಯೋಗ ಮಾಡಿಕೊಳ್ಳುವವರು ಸಾಕಷ್ಟು ಮಂದಿ ಇದ್ದಾರೆ, ಕರ್ನಾಟಕ ಗೃಹ ಮಂಡಳಿಯ ಯೋಜನೆಗಳಿಗೆ ಸಂಬಂಧಪಟ್ಟು ಕೆಲಸ ಮಾಡುವ ಏಜೆಂಟರು ರಾಜ್ಯದಾದ್ಯಂತ ಇದ್ದಾರೆ. ಅವರನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಅಮರಗೋಳದಲ್ಲಿ ವಸತಿ ಯೋಜನೆಗೆ ಭೂಮಿ ಪಡೆದುಕೊಳ್ಳುವಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ.ಆದರೆ ತಾವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಆಗಲಿ, ಮುಖ್ಯಮಂತ್ರಿಗಳಾಗಲಿ ಇದರಲ್ಲಿ ಯಾವುದೇ ಪೂರ್ವಾಗ್ರಹ ಹೊಂದಿರಲಿಲ್ಲ ಎಂದು ಅವರು ಹೇಳಿದರು.ವಸತಿ ಖಾತೆ ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ಈ ವಸತಿ ಯೋಜನೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.ಸಚಿವ ಜಗದೀಶ ಶೆಟ್ಟರ, ವಸತಿ ಯೋಜನೆ ಸಿದ್ಧ ಮಾಡುವಾಗ ಬಡ ಹಾಗೂ ಮಧ್ಯಮ ವರ್ಗದವರನ್ನು ಗಮನದಲ್ಲಿರಿಸಬೇಕು. ಇದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದರು.ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸುವುದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು 90 ಶೇಕಡಾ  ಭಾಗ ಪೂರ್ಣಗೊಂಡಿದೆ. ನಗರದ ಸುತ್ತ ವರ್ತುಲ ರಸ್ತೆ ನಿರ್ಮಾಣ ಮಾಡುವುದಕ್ಕೂ ಭೂಸ್ವಾಧೀನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಚಂದ್ರಕಾಂತ ಬೆಲ್ಲದ, ಎಸ್.ಐ. ಸಿಕ್ಕನಗೌಡರ, ಸೀಮಾ ಮಸೂತಿ, ವೀರಭದ್ರಪ್ಪ ಹಾಲಹರವಿ, ಶಂಕರ ಪಾಟೀಲ ಮುನೇನಕೊಪ್ಪ, ಶಿವರಾಜ ಸಜ್ಜನರ, ಮೇಯರ್ ಪೂರ್ಣಾ ಪಾಟೀಲ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದತ್ತಾ ಡೋರ್ಲೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಮಾಜಿ ಸಂಸದ ಐ.ಜಿ. ಸನದಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.