ಶುಕ್ರವಾರ, ಮೇ 14, 2021
21 °C

ಸಮಗ್ರ ಅಭಿವೃದ್ಧಿಗೆ ಸಂಜೀವಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದ ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ ಸಂಜೀವಿನಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು~ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಏನಿದು ಸಂಜೀವಿನಿ ?

ಸಮಗ್ರ ಗ್ರಾಮೀಣಾಭಿವೃದ್ಧಿಯ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅನ್ನು ದೇಶಾದ್ಯಂತ ಆರಂಭಿಸಲಾಗಿದೆ. ರಾಜ್ಯದಲ್ಲಿ ಮಿಷನ್ `ಸಂಜೀವಿನಿ~ ಹೆಸರಿನಿಂದ ಬುಧವಾರದಿಂದ ಕಾರ್ಯಾರಂಭ ಮಾಡಿದೆ. ಸಂಜೀವಿನಿ ಯೋಜನೆಯನ್ನು ರಾಜ್ಯದಲ್ಲಿ ಸದ್ಯ ಬೆಳಗಾವಿ, ಧಾರವಾಡ, ಗುಲ್ಬರ್ಗ, ಮೈಸೂರು ಮತ್ತು ತುಮಕೂರು ಜಿಲ್ಲೆಗಳ 20 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಗ್ರಾಮೀಣ ಭಾಗಗಳ ಬಡತನ ನಿವಾರಣೆ, ಸ್ವಸಹಾಯ ಸಂಘಗಳಿಗೆ ಹಣಕಾಸಿನ ನೆರವು ಹಾಗೂ ವೃತ್ತಿ ನೈಪುಣ್ಯತೆ ಅಭಿವೃದ್ಧಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶ ಯೋಜನೆಯದ್ದಾಗಿದೆ. ಸ್ವಸಹಾಯ ಸಂಘಗಳು ಹಾಗೂ ಸರ್ಕಾರೇತರ ಸಂಸ್ಥೆಗಳನ್ನು ಸಕ್ರಿಯವಾಗಿ ಬಳಸಿಕೊಂಡು ಸಮಗ್ರ ಗ್ರಾಮೀಣಾಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಯೋಜನೆ ಹೊಂದಿದೆ.

ನಗರದಲ್ಲಿ ಬುಧವಾರ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್‌ನ ಕಾರ್ಯಾಲಯ `ಸಂಜೀವಿನಿ~ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸದ್ಯ ಐದು ಜಿಲ್ಲೆಗಳಲ್ಲಿ ಹೊಸದಾಗಿ ಸಂಜೀವಿನಿ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಂಜೀವಿನಿ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು. ಯೋಜನೆಯಿಂದ ಗ್ರಾಮೀಣ ಭಾಗಗಳ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣಾಭಿವೃದ್ಧಿಯ ಕನಸನ್ನು ನನಸಾಗಿಸಲು ಪ್ರಯತ್ನಿಸಲಾಗುವುದು~ ಎಂದರು.`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 13 ವರ್ಷಗಳಿಂದಲೂ ಸ್ವರ್ಣ ಜಯಂತಿ ಗ್ರಾಮೀಣ ಸ್ವರೋಜ್‌ಗಾರ್ ಯೋಜನೆಯ ಮೂಲಕ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗಿಲ್ಲದ ಕಾರಣ ಯೋಜನೆಯನ್ನು ಪುನರ್ ರಚಿಸಿ ಹೊಸದಾಗಿ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಸ್ಥಾಪನೆಯಾಗಿದೆ. ಮಿಷನ್‌ನ ಮೂಲಕ ಗ್ರಾಮೀಣ ಭಾಗಗಳ ಸ್ವಸಹಾಯ ಗುಂಪುಗಳಿಗೆ ಹಣಕಾಸಿನ ನೆರವು, ಕೌಶಲ್ಯ ವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು~ ಎಂದು ಅವರು ಹೇಳಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್ ಮಾತನಾಡಿ, `ದೇಶದ 18 ರಾಜ್ಯಗಳಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. 2018 ರ ವೇಳೆಗೆ ರಾಜ್ಯದಲ್ಲಿ ಸಂಪೂರ್ಣವಾಗಿ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ರಾಜ್ಯದ ಸುಮಾರು 600 ಸ್ವಸಹಾಯ ಸಂಘಗಳ ಮೂಲಕ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲಾಗುವುದು~ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.