ಸಮಗ್ರ ಆರ್ಥಿಕ ಪಾಲುದಾರಿಕೆಗೆ ಪ್ರಧಾನಿ ಒತ್ತು

7

ಸಮಗ್ರ ಆರ್ಥಿಕ ಪಾಲುದಾರಿಕೆಗೆ ಪ್ರಧಾನಿ ಒತ್ತು

Published:
Updated:
ಸಮಗ್ರ ಆರ್ಥಿಕ ಪಾಲುದಾರಿಕೆಗೆ ಪ್ರಧಾನಿ ಒತ್ತು

ಬಾಲಿ (ಇಂಡೊನೇಷ್ಯಾ) (ಪಿಟಿಐ): `ಕಳೆದ ಐದು ವರ್ಷಗಳಲ್ಲಿ ಭಾರತ ಸರಾಸರಿ ವಾರ್ಷಿಕ ಶೇ 8.4ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕಾಭಿವೃದ್ಧಿಯ ವೇಗ ಸ್ವಲ್ಪ ಕುಂಠಿತವಾಗಿದ್ದರೂ, ಶೇ 7.5ರಷ್ಟು ಪ್ರಗತಿ ನಿರೀಕ್ಷಿಸಲಾಗಿದೆ~ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದರು.18 ರಾಷ್ಟ್ರಗಳ ಸದಸ್ಯತ್ವದ ಪೂರ್ವ ಏಷ್ಯಾ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರದ ಸಂದರ್ಭದಲ್ಲಿ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಗಳು ಉತ್ತಮ ಚೇತರಿಕೆ ಕಂಡು, ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ ಮತ್ತು ಭಾರತ ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.ಆರ್ಥಿಕ ಸಮಗ್ರತೆಗಾಗಿ ಪೂರ್ವ ಏಷ್ಯಾದಲ್ಲಿ ಸಂಪೂರ್ಣ ಆರ್ಥಿಕ ಪಾಲುದಾರಿಕೆ ವ್ಯವಸ್ಥೆ ಜಾರಿಗೆ ಬರಬೇಕು. ಸಮಗ್ರ ಆರ್ಥಿಕ ಸಹಕಾರ ಒಪ್ಪಂದ ಜಾರಿಯಾಗುವುದಕ್ಕೆ ಸಹಕಾರಿಯಾಗುವ, ವಾಣಿಜ್ಯವಾಗಿ ಅರ್ಥಪೂರ್ಣವಾದ ಸೇವೆ ಮತ್ತು ಹೂಡಿಕೆಗೆ ಸಂಬಂಧಿಸಿದ ಒಡಂಬಡಿಕೆಯು 2012ರ ಮಾರ್ಚ್ ಒಳಗಾಗಿ ಏರ್ಪಡಬೇಕು.ಯೂರೊ ಕರೆನ್ಸಿ ವಲಯದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಈ ಬಿಕ್ಕಟ್ಟು ನಿವಾರಣೆ ಯತ್ನದಲ್ಲಿ ನಾವು ನಿಮ್ಮ ಜತೆಗೆ ಇದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ಏಷ್ಯಾ ರಾಷ್ಟ್ರಗಳು ರವಾನಿಸಬೇಕು ಎಂದು ಸಲಹೆ ನೀಡಿದರು.ಏಕಾಂಗಿಯಾಗಿ ಇದ್ದುಕೊಂಡು ಯಾವುದೇ ರಾಷ್ಟ್ರ ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಯೂರೊ ಕರೆನ್ಸಿ ವಲಯದ ರಾಷ್ಟ್ರಗಳು ಈ ತಪ್ಪೆಸಗಿರುವುದರಿಂದಲೇ ಇಂದು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ ಎಂದು ಸಿಂಗ್ ಅಭಿಪ್ರಾಯಪಟ್ಟರು. ಏಷ್ಯಾ ವಲಯದಲ್ಲಿ ಸಮಗ್ರ ಆರ್ಥಿಕಾಭಿವೃದ್ಧಿ ಸಾಧಿಸುವ ಉದ್ದೇಶದಿಂದ ಭಾರತ ಈಗಾಗಲೇ ಅಸಿಯಾನದ 10 ರಾಷ್ಟ್ರಗಳ ಜತೆ ಆರ್ಥಿಕ ಸಹಕಾರ ಒಪ್ಪಂದದತ್ತ ಕಾರ್ಯಮಗ್ನವಾಗಿದೆ ಎಂದರು.2010-11ನೇ ಸಾಲಿನಲ್ಲಿ ಅಸಿಯಾನದ ಜತೆ ನಮ್ಮ ರಾಷ್ಟ್ರ ನಡೆಸಿದ ವ್ಯಾಪಾರ ವಹಿವಾಟಿನಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಒಟ್ಟು 50 ಶತಕೋಟಿ ಡಾಲರ್ ವಹಿವಾಟು ನಡೆದಿದೆ. 2012ರ ವೇಳೆಗೆ ಈ ಮೊತ್ತ 70 ಶತಕೋಟಿ ಡಾಲರ್ ಗುರಿ ತಲುಪಲಿದೆ ಎಂದರು.

 

ನೈಸರ್ಗಿಕ ವಿಪತ್ತು ನಿರ್ವಹಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಪೂರ್ವ ಏಷ್ಯಾ ರಾಷ್ಟ್ರಗಳ ಮುಂದಿನ ಕಾರ್ಯಾಗಾರವನ್ನು ಭಾರತದಲ್ಲಿ ಏರ್ಪಡಿಸುವುದಾಗಿ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು. ಬಳಿಕ, ನಾಲ್ಕು ದಿನಗಳ ಪ್ರವಾಸದ ಕೊನೆಯ ದಿನವಾದ ಶನಿವಾರ ಪ್ರಧಾನಿ ಇಲ್ಲಿಂದ ಸಿಂಗಪುರಕ್ಕೆ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry