ಸಮಗ್ರ ಕೃಷಿ ಪದ್ಧತಿಯಲ್ಲಿ ವೀರಣ್ಣ ಸಾಹಸಗಳು

7

ಸಮಗ್ರ ಕೃಷಿ ಪದ್ಧತಿಯಲ್ಲಿ ವೀರಣ್ಣ ಸಾಹಸಗಳು

Published:
Updated:

ಶಿಡ್ಲಘಟ್ಟ: ಕೆಲ ರೈತರು ವಾಣಿಜ್ಯ ಬೆಳೆ ಬೆಳೆಯಲ್ಲಿ, ಇನ್ನು ಕೆಲವರು ಆಹಾರ ಬೆಳೆಯತ್ತ ಆಸಕ್ತಿ. ಆದರೆ ತಾಲ್ಲೂಕಿನ ಸೀಗೆಹಳ್ಳಿ ವೀರಣ್ಣ ಅವರು ವಿರಳ ಪದ್ಧತಿ ಅನುಸರಿಸಿ, ಮಾದರಿಯಾಗಿದ್ದಾರೆ.ವಿವಿಧ ಬೆಳೆಗಳು, ಜಾನುವಾರು ಸಾಕಣೆ, ಸಾವಯವ ಕೃಷಿ ಪದ್ಧತಿ ರೂಢಿಸಿಕೊಂಡು ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ. ಸಾವಯವ ತೊಟ್ಟಿ, ಎರೆಹುಳು ಗೊಬ್ಬರ ತಯಾರಿಕೆ, ರಸಸಾರ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ತೋಟಕ್ಕೆ ಬೇಕಾಗುವಷ್ಟು ಸಾವಯವ ಗೊಬ್ಬರವನ್ನು ತಮ್ಮಲ್ಲೇ ತಯಾರಿಸಿಕೊಳ್ಳುತ್ತಾರೆ.ಮನೆ ಬಳಕೆಗೆ ಸಗಣಿಯಿಂದ ತಯಾರಾದ ಗೋಬರ್ ಗ್ಯಾಸ್ ಬಳಸುತ್ತಾರೆ. ತಿಂಗಳಿಗೆ 1000 ರೇಷ್ಮೆ ಮೊಟ್ಟೆ ಮೇಯಿಸಲು ಬೇಕಾದ ಹಿಪ್ಪುನೇರಳೆ ಸೊಪ್ಪು, ರಾಗಿ, ಮಾವು, ತೊಗರಿ, ಗೋಡಂಬಿ, ತೆಂಗು, ಮನೆ ಬಳಕೆಗೆ ತರಕಾರಿಯನ್ನೂ ಬೆಳೆಯುತ್ತಾರೆ.ರ‌್ಯಾಂಬೊಲೇಟ್ ತಳಿಯ ಕುರಿಗಳು, ಸೀಮೆ ಹಸುಗಳು, ಎತ್ತುಗಳು, ಎಮ್ಮೆಗಳು, ಕೋಳಿಗಳನ್ನೂ ಸಾಕಿದ್ದಾರೆ. ಗೋಬರ್ ಗ್ಯಾಸ್ ತೊಟ್ಟಿಯಲ್ಲಿ ಉಳಿಯುವ ಸ್ಲರಿ, ಹಸಿಸೊಪ್ಪು, ಒಣಎಲೆ, ಹುಲ್ಲನ್ನು ಹಾಕಿ ಎರೆಹುಳು ಗೊಬ್ಬರ ತಯಾರಿಸುತ್ತಾರೆ.ದನದ ಕೊಟ್ಟಿಗೆಯಿಂದ ಗೋಮೂತ್ರ ತೊಟ್ಟಿಯೊಂದಕ್ಕೆ ಬೀಳುತ್ತದೆ. ಅದನ್ನು ಡ್ರಿಪ್ ಮೂಲಕ ತೋಟಕ್ಕೆ ಹರಿಸುತ್ತಾರೆ. ತೋಟದ ತ್ಯಾಜ್ಯ ಸುರಿದು ರಸಸಾರ ತೊಟ್ಟಿಯಿಂದ ರಸಸಾರವನ್ನು ಪಡೆದು ಡ್ರಿಪ್ ಮೂಲಕ ತೋಟಕ್ಕೆ ಹರಿಸುತ್ತಾರೆ. ಮನೆಯ ತ್ಯಾಜ್ಯಗಳೆಲ್ಲಾ ಹರಿದು ಕಾಂಪೋಸ್ಟ್ ತೊಟ್ಟಿಯನ್ನು ಸೇರುವಂತೆ ವ್ಯವಸ್ಥೆ ರೂಪಿಸಿದ್ದಾರೆ.ರೇಷ್ಮೆ ಹುಳು ಹಣ್ಣಾದಾಗ ಚಂದ್ರಿಕೆಗಳನ್ನು ಇಡಲು ಹುಳು ಮನೆಯ ಮೇಲೆ ವಿನೂತನ ಮಾದರಿಯ ಶೀಟ್‌ಗಳನ್ನು ಅಳವಡಿಸಿರುವ ಶೆಡ್ ಕಟ್ಟಿದ್ದಾರೆ. ಪೈಂಟೆಡ್ ಶೀಟ್‌ಗಳೆಂದು ಕರೆಯುವ ಶೀಟ್ ಬಳಸಿರುವುದರಿಂದ ಹೊರಗೆ ಎಷ್ಟೇ ಬಿಸಿಯಿದ್ದರೂ ಇಲ್ಲಿ ಸದಾ ತಂಪಾಗಿರುತ್ತದೆ. ಇದನ್ನು ಓಡಿಶಾ ಮಾದರಿಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಯಾವುದೇ ಬಿರುಗಾಳಿಗೂ ಜಗ್ಗದು.ಒಂದೇ ಬಾರಿ ಸಾವಿರ ಮೊಟ್ಟೆಗಳನ್ನು ಮೇಯಿಸಿದ ನಂತರ ಗೂಡುಕಟ್ಟಿಸಲು ಬೇಕಾದ ಸುವ್ಯವಸ್ಥೆಯನ್ನು ಈ ಶೆಡ್ ಒಳಗೊಂಡಿದೆ. ಇದರಿಂದ ಜಾಗ ಉಳಿಕೆ, ರೇಷ್ಮೆಗೆ ಅಗತ್ಯವಿರುವ ವಾತಾವರಣ, ಕೆಳಗಿನ ಕಟ್ಟಡದ ಭದ್ರತೆ, ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆ ಇದೆ.`ಎರೆಹುಳು ತೊಟ್ಟಿಯಲ್ಲಿ ಮೊದಲು 2 ಕೆ.ಜಿ ಹುಳ ಬಿಟ್ಟಿದ್ದೆವು. ಈಗದು 10 ಕೆ.ಜಿ ಆಗಿದೆ~ ಎಂದು ಸಂತಸದಿಂದ ಹಂಚಿಕೊಳ್ಳುತ್ತಾರೆ ರೈತ ವೀರಣ್ಣ.`ಬಯೋಡೈಜೆಸ್ಟ್, ಕಾಂಪೋಸ್ಟ್ ಗೊಬ್ಬರ, ಎರೆಹುಳು ಗೊಬ್ಬರ ಮುಂತಾದ ಸಾವಯವ ವಿಧಾನಗಳನ್ನು ರೈತರು ಬಳಸಿಕೊಳ್ಳಬೇಕೆಂದು ಸರ್ಕಾರ ಸಹಾಯಧನ ನೀಡುತ್ತಿದೆ. ರೇಷ್ಮೆ ಹುಳುಗಳು ಬಹು ಸೂಕ್ಷ್ಮವಾದುದರಿಂದ ಯಾವುದೇ ರಾಸಾಯನಿಕ ಬಳಕೆಯೂ ಮಾರಕವಾಗುತ್ತದೆ. ಹಲವಾರು ಸಸ್ಯಜನ್ಯ ಕಷಾಯಗಳಿಂದ ಶಿಲೀಂದ್ರ ಕ್ರಿಮಿ ಕೀಟ, ರೋಗಗಳ ಹತೋಟಿಯನ್ನು ಸಾಧಿಸಬಹುದು. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ರೈತರ ತೋಟಗಳಿಗೆ ಭೇಟಿ ನೀಡಿ ರೈತರು ಜ್ಞಾನಹೆಚ್ಚಿಸಿಕೊಳ್ಳಬೇಕು~ ಎಂದು ಸಾವಯವ ಕೃಷಿ ಪರಿವಾರದ ಸಂಚಾಲಕ ರಾಮಾಂಜಿನಪ್ಪ ತಿಳಿಸಿದರು.

 

ಯಂತ್ರ ಬಳಕೆ

ಕೆಲಸದಾಳುಗಳ ಕೊರತೆ ನೀಗಿಸಲು ರಾಗಿ ಹೊಲ ಕತ್ತರಿಸುವ ಯಂತ್ರ, ಹುಲ್ಲು, ಸೊಪ್ಪು ಕತ್ತರಿಸುವ ಯಂತ್ರ ಇಟ್ಟುಕೊಂಡಿದ್ದಾರೆ. ವೀರಣ್ಣ ಅವರ ಮಕ್ಕಳಾದ ದೇವರಾಜ, ರಾಜಣ್ಣ, ಸುಬ್ಬರೆಡ್ಡಿ ಪದವಿ ಪೂರೈಸಿದ್ದಾರೆ. ಇವರ‌್ಯಾರು ಪಟ್ಟಣದಲ್ಲಿ ಕೆಲಸಕ್ಕೆ ಹೋಗದೆ ಭೂಮಿಯನ್ನೇ ನಂಬಿ ತಂದೆಗೆ ಸಾಥ್ ನೀಡುತ್ತಿದ್ದಾರೆ. ಇದು ಸಮಗ್ರ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿದೆ.       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry