ಮಂಗಳವಾರ, ನವೆಂಬರ್ 12, 2019
19 °C

ಸಮಗ್ರ ತನಿಖೆಯಾಗಲಿ

Published:
Updated:

ಬೀದರ್‌ನ ಚೌಳಿ ಮಠದ ಮೂವರು ಕಿರಿಯ ಸ್ವಾಮಿಗಳು ಸೋಮವಾರ ಅಗ್ನಿಪ್ರವೇಶದ ಹೆಸರಿನಲ್ಲಿ ಆತ್ಮಾಹುತಿ ಮಾಡಿಕೊಂಡಿರುವ ಘಟನೆ ಅತ್ಯಂತ ನಿಗೂಢವಾಗಿದೆ. ಒಂದೂವರೆ ತಿಂಗಳ ಹಿಂದೆ ಮಠದ ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಅದಕ್ಕೂ ಮೊದಲು ಮಾರುತಿ ಸ್ವಾಮೀಜಿ ಎಂಬ ಸಾಧಕ ನಾಪತ್ತೆಯಾಗಿದ್ದರು. ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಈ ಘಟನೆಗಳು ಆಕಸ್ಮಿಕವಂತೂ ಅಲ್ಲ. ನಾಪತ್ತೆ, ಸಾವು, ಆತ್ಮಾಹುತಿಗಳಿಗೆ ಏನು ಕಾರಣ ಎಂಬುದು  ಗೊತ್ತಾಗಬೇಕು. ಈಗ ಮಠದಲ್ಲಿ ಭಯ ಮತ್ತು ಆತಂಕದ ವಾತಾವರಣವಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಗಣೇಶ್ವರ ಅವಧೂತರ ಸಾವಿನ ಪ್ರಕರಣದ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆ ತರುವ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ. ಮಠಗಳಲ್ಲಿ  ಮುಕ್ತ ಹಾಗೂ ನಿರ್ಭೀತ ವಾತಾವರಣ ಇರುವಂತೆ ನೋಡಿಕೊಳ್ಳಬೇಕಾದ ಹೊಣೆ ಸರ್ಕಾರ ಮತ್ತು ಭಕ್ತರದು. ಧಾರ್ಮಿಕ ಮಾರ್ಗದರ್ಶನದಲ್ಲಿ ತೊಡಗಿಸಿಕೊಂಡವರಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಹಾಗೂ ಈ ಕುರಿತಾದ ವಿವಾದಗಳು ಸರ್ಕಾರಕ್ಕೆ ಗೌರವ ತರುವ ವಿಷಯ ಅಲ್ಲ. ಗಣೇಶ್ವರ ಅವಧೂತರ ಸಾವಿನ ಸಂದರ್ಭದಲ್ಲಿ ಗೃಹ ಸಚಿವರು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವುದಾಗಿ ಹೇಳಿದ್ದರು. ಈಗ ಮುಖ್ಯಮಂತ್ರಿಯವರು ಅವೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ. ಭರವಸೆ ಕಾರ್ಯರೂಪಕ್ಕೆ ಬರಬೇಕು. ಸಾವು ಮತ್ತು ನಾಪತ್ತೆ ಪ್ರಕರಣಗಳೇ ಅಲ್ಲದೆ ಮಠದ ಎಲ್ಲಾ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು.ಕರ್ನಾಟಕದ ಮಠ, ಮಾನ್ಯಗಳಿಗೆ ಉನ್ನತ ಧಾರ್ಮಿಕ ಪರಂಪರೆ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವು ಮಠಗಳು ರಾಜಕೀಯದಲ್ಲಿ ನೇರವಾಗಿ ತೊಡಗಿಕೊಂಡು, ಜಾತಿ ಚಟುವಟಿಕೆಗಳ ಕೇಂದ್ರಗಳಾಗುತ್ತಿವೆ. ಜೊತೆಗೆ ಶಿಕ್ಷಣದ ಹೆಸರಲ್ಲಿ ಲಾಭದಾಯಕ ಸಂಸ್ಥೆಗಳನ್ನು ನಡೆಸುವುದಲ್ಲದೆ ಭೂಮಿಯ ಅತಿಕ್ರಮಣ ವ್ಯವಹಾರಗಳಲ್ಲೂ ಭಾಗಿಗಳಾಗಿರುವುದು ದುರದೃಷ್ಟಕರ. ಇದರ ನಡುವೆಯೂ ಕೆಲವು ಮಠಗಳು ಶಿಕ್ಷಣ, ದಾಸೋಹ ಮತ್ತು ಧಾರ್ಮಿಕ ಮಾರ್ಗದರ್ಶನದಂತಹ ಚಟುವಟಿಕೆಗಳ ಮೂಲಕ ಉನ್ನತ ಪರಂಪರೆಯನ್ನು ಎತ್ತಿ ಹಿಡಿಯುತ್ತಿವೆ. ದುರದೃಷ್ಟದ ಸಂಗತಿ ಎಂದರೆ ಆರ್ಥಿಕವಾಗಿ ಸಬಲವಾಗಿರುವ ಮಠಗಳನ್ನು ಕೈವಶ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಮಠಗಳ ಉತ್ತರಾಧಿಕಾರಿ ನೇಮಕ, ಆಸ್ತಿ ಪಾಸ್ತಿ ಇತ್ಯಾದಿಗಳು ದುಷ್ಕೃತ್ಯಗಳಿಗೆ  ಕಾರಣವಾಗುತ್ತಿವೆ. ಚೌಳಿ ಮಠದ ದುರ್ಘಟನೆಗಳಿಗೆ ಇಂತಹ ಹಿನ್ನೆಲೆ ಇರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಮಠ ಮಾನ್ಯಗಳ ಆಸ್ತಿ ಪರಭಾರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕೆಲಸವೇ ಆದರೂ ಮಠಗಳ ಭಕ್ತರೂ ಈ ನಿಟ್ಟಿನಲ್ಲಿ ಎಚ್ಚರವಹಿಸುವ ಅಗತ್ಯವಿದೆ. ಸಾಮೂಹಿಕವಾಗಿ ಆತ್ಮಾಹುತಿಗೆ ಮೊದಲು ಮೂವರು ಕಿರಿಯ ಸ್ವಾಮೀಜಿಗಳು ಬರೆದಿಟ್ಟ ಮರಣ ಪತ್ರದಲ್ಲಿ ಪ್ರಸ್ತಾಪಿಸಿರುವ ವಿಷಯಗಳು ಕುತೂಹಲಕಾರಿಯಾಗಿವೆ. ಈ ಕುರಿತಂತೆ ಸಾಮಾಜಿಕ, ಮನಶಾಸ್ತ್ರೀಯ ನೆಲೆಗಳಲ್ಲೂ ತನಿಖೆಯಾಗಬೇಕು. ಗಣೇಶ್ವರ ಅವಧೂತರ ಸಾವಿಗೆ ಏನು ಕಾರಣ ಎನ್ನುವುದು ಪತ್ತೆಯಾದರೆ ಉಳಿದ ವಿಷಯಗಳನ್ನು ಪತ್ತೆ ಹಚ್ಚುವುದು ಸುಲಭ. ಸರ್ಕಾರ ಯಾರ ಒತ್ತಡಕ್ಕೂ ಮಣಿಯದೆ ಚೌಳಿ ಮಠದ ಘಟನೆಗಳ ಬಗ್ಗೆ ತುರ್ತಾಗಿ ತನಿಖೆ ನಡೆಸಬೇಕು.

ಪ್ರತಿಕ್ರಿಯಿಸಿ (+)