ಶುಕ್ರವಾರ, ನವೆಂಬರ್ 15, 2019
21 °C

ಸಮಗ್ರ ತೋಟಗಾರಿಕೆ ಯೋಜನೆ ಜಾರಿ

Published:
Updated:

ಚಿತ್ರದುರ್ಗ: ಜಿಲ್ಲೆಯಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗಿದೆ.ರೈತಾಪಿ ಜನರನ್ನು ಗುರುತಿಸಿ ಸಂಘಟಿಸಿ ಬಿತ್ತನೆಯಿಂದ ಕಟಾವು ಸೇರಿದಂತೆ ಮಾರುಕಟ್ಟೆವರೆಗೆ ಉತ್ಪನ್ನಗಳನ್ನು ಸಾಗಿಸುವವರೆಗೂ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಮಗ್ರ ತೋಟಗಾರಿಕೆ ಯೋಜನೆ ಜಾರಿಗೊಳಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ವಿವರಿಸಿದರು.ನಗರದ ವಾರ್ತಾ ಇಲಾಖೆ ಸಭಾಂಗಣದಲ್ಲಿ ವಾರ್ತಾ ಇಲಾಖೆ ಹಾಗೂ ಮಾಧ್ಯಮ ಬಳಗ ಶನಿವಾರ ಆಯೋಜಿಸಿದ್ದ ತೋಟಗಾರಿಕೆ ಯೋಜನೆಗಳ ಕುರಿತು ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಯೋಜನೆ ಅಡಿಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಎರಡು ಕ್ಲಟ್ಟರ್‌ಗಳನ್ನು ರಚಿಸಿ ಪಪ್ಪಾಯಿ, ಗುಲಾಬಿ, ಮಾವು, ಸಪೋಟಾ, ಹಲಸು, ಬಾಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು. ಇದಕ್ಕಾಗಿ 2012-13ನೇ ಸಾಲಿಗೆ ರೂ. 368.67 ಲಕ್ಷ ರೈತರಿಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.ಜಿಲ್ಲೆಯಾದ್ಯಂತ 1,11,157 ಹೆಕ್ಟೇರ್  ಪ್ರದೇಶದಲ್ಲಿ ವಿವಿಧ ಹಣ್ಣು, ತರಕಾರಿ, ಸಾಂಬಾರು, ಹೂ, ಔಷಧಿ ಮತ್ತು ಸುಗಂಧಿತ ಬೆಳೆಗಳ ಬೆಳೆಯಲಾಗುತ್ತಿದ್ದು, ಒಟ್ಟಾರೆ ಉತ್ಪಾದನೆ 72,9603 ಟನ್‌ಗಳಿದ್ದು ಮುಂದಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ಆದ್ಯತೆ ನೀಡಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಹೆಚ್ಚಳ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.ಆನ್‌ಲೈನ್ ವ್ಯವಸ್ಥೆ: ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ದೇವರಾಜ್ ಮಾತನಾಡಿ ಪ್ರಸಕ್ತ ಸಾಲಿನಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ನೋಂದಾವಣಿ ನಂತರ ರೈತರ ಜತೆ ಸಮಾಲೋಚನೆ ಮಾಡಲಾಗುವುದು ಎಂದು ತಿಳಿಸಿದರು.ರಾಷ್ಟ್ರಾದ್ಯಂತ ಈ ಯೋಜನೆಯನ್ನು ಆನ್‌ಲೈನ್ ಮಾಡಲಾಗಿದೆ. ಯೋಜನೆಯ ಪ್ರಗತಿ ಮತ್ತು ನಿಗಾವಹಿಸಲು ಇದರಿಂದ ಅನುಕೂಲವಾಗುತ್ತದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲಾಖೆಯಲ್ಲೂ ನೋಂದಣಿ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ತಮ್ಮ ತೋಟದಲ್ಲಿ ಪ್ಯಾಕ್‌ಹೌಸ್ ನಿರ್ಮಾಣ ಮಾಡಿಕೊಳ್ಳಲು ರೂ. 1.50 ಲಕ್ಷ ಸಹಾಯಧನ ದೊರೆಯಲಿದ್ದ, ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಜಿಲ್ಲೆಗೆ 80 ಪ್ಯಾಕ್‌ಹೌಸ್ ಘಟಕಗಳಿಗೆ ಬೇಡಿಕೆ ಇಡಲಾಗಿದೆ ಎಂದು ಹೇಳಿದರು. ನಿವೃತ್ತ ಕೃಷಿ ಅಧಿಕಾರಿ ಶಾಂತವೀರಯ್ಯ, ವಾರ್ತಾಧಿಕಾರಿ ಎಸ್.ಮಹೇಶ್ವರಯ್ಯ, ಸಹಾಯಕ ವಾರ್ತಾಧಿಕಾರಿ ಧನಯಂಜಕುಮಾರ್ ಹಾಜರಿದ್ದರು.

ಒಣಗಿದ ಈರುಳ್ಳಿ

ಚಿತ್ರದುರ್ಗ: ಮಳೆ ಇಲ್ಲದೆ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಬಿತ್ತನೆಯಾಗಿರುವ ಈರುಳ್ಳಿಯಲ್ಲಿ ಶೇಕಡಾ 50ರಷ್ಟು ಒಣಗಿದೆ.ಜಿಲ್ಲೆಯಲ್ಲಿ ಈ ವರ್ಷ 16,500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ ನೀರಾವರಿ ಪ್ರದೇಶದಲ್ಲಿನ 6,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.

 

ಆದರೆ, ಮಳೆಯ ಅಭಾವದಿಂದಾಗಿ ಬಿತ್ತನೆ ಮಾಡಿರುವ ಈರುಳ್ಳಿ ಫಸಲು ಶೇಕಡಾ 50ರಷ್ಟು ಈಗಾಗಲೇ ಒಣಗಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ತಿಳಿಸಿದರು.ತೀವ್ರ ಮಳೆ ಕೊರತೆಯಿಂದಾಗಿ ಅಂತರ್ಜಲಮಟ್ಟ ಕುಸಿತಕಂಡಿದ್ದು ತೋಟಗಾರಿಕೆ ಬೆಳೆಗಳು ಒಣಗುವ ಸ್ಥಿತಿ ತಲುಪುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.2011-12ನೇ ಸಾಲಿನಲ್ಲಿ ಮಳೆ ಅಭಾವದಿಂದ 2256 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗೆ ಹಾನಿಯಾಗಿದ್ದು, ರೂ. 122.39 ಲಕ್ಷ ನಷ್ಟವಾಗಿದೆ. ಬರದಿಂದ 1082 ತೋಟಗಾರಿಕೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಸಮೀಕ್ಷೆಯಿಂದ ತಿಳಿದು ಬಂದಿತ್ತು ಎಂದು ತಿಳಿಸಿದರ.ಪ್ರಸ್ತುತ ಮೊಳಕಾಲ್ಮುರು ತಾಲ್ಲೂಕಿನಲ್ಲಿ ದಾಳಿಂಬೆಗೆ ಬ್ಲೈಟ್ ತಗಲಿರುವುದು ವರದಿಯಾಗಿದೆ ಎಂದು ತಿಳಿಸಿದರು.

 

ಪ್ರತಿಕ್ರಿಯಿಸಿ (+)