ಶುಕ್ರವಾರ, ಡಿಸೆಂಬರ್ 13, 2019
24 °C

ಸಮಗ್ರ ಯೋಜನೆಯ ಜರೂರಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಗ್ರ ಯೋಜನೆಯ ಜರೂರಿದೆ

ಶೈಕ್ಷಣಿಕವಾಗಿ  ಹಿಂದುಳಿದಿರುವ ಈಶಾನ್ಯ ಕರ್ನಾಟಕದ ಎಂಟು ಜಿಲ್ಲೆಗಳ ಸ್ಥಿತಿಗತಿಯನ್ನು ಅವಲೋಕಿಸಿದಾಗ, ರಾಜ್ಯದ ಇತರೆಡೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಒದಗಿರುವ ಅವಜ್ಞೆಯ ನೋಟದಲ್ಲಿ ಹೆಚ್ಚಿನ ಬದಲಾವಣೆಯೇನೂ ಕಂಡುಬರುವುದಿಲ್ಲ.ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಪ್ರಮಾಣ ವಿದ್ಯಾರ್ಥಿಗಳ ದಾಖಲಾತಿಯ ಮೇಲೆ ನೇರ ಪರಿಣಾಮ ಬೀರಿದೆ. ಆದರೆ ಇದೇ ವೇಳೆ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತದೆ.ಇದರೊಂದಿಗೆ, ಇಲ್ಲಿನ ಕೆಲವು ಭಾಗಗಳಲ್ಲಿ ಬಾಲ್ಯ ವಿವಾಹ ಪದ್ಧತಿ ಇನ್ನೂ ಜಾರಿಯಲ್ಲಿರುವುದು ಸಹ ಮಕ್ಕಳು ಶಿಕ್ಷಣ ಪೂರೈಸುವುದಕ್ಕೆ ಅಡ್ಡಗಾಲಾಗಿದೆ. ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ಪೋಷಕರು ಗುಳೆ ಹೋಗುವುದರಿಂದ ಅವರ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಗಿದೆ. ದಾಖಲಾತಿ ಆಂದೋಲನಗಳ ಭರಾಟೆಯ ನಡುವೆಯೂ ಇಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಮಾಡಲು ಸಾಧ್ಯವಾಗುತ್ತಿಲ್ಲ.ಸರ್ಕಾರಿ ಶಾಲೆಗಳಲ್ಲಿ ಸಾಮಾನ್ಯವಾಗಿರುವ ಶಿಕ್ಷಕರ ಕೊರತೆ ಮತ್ತು ಮಕ್ಕಳ ದಾಖಲಾತಿ ಇಳಿಕೆಗೆ ಸಂಬಂಧಿಸಿದ ಅಂಕಿ-ಅಂಶಗಳು ಶಿಕ್ಷಣ ವ್ಯವಸ್ಥೆ ಸದ್ಯಕ್ಕೆ ಅನುಭವಿಸುತ್ತಿರುವ ವ್ಯಾಧಿಯ ಮೇಲ್‌ಸ್ತರದ ಲಕ್ಷಣಗಳು ಮಾತ್ರ.ಮೂಲದಲ್ಲಿ ಪರಿಹಾರಗಳನ್ನು ಕಂಡು ಹಿಡಿಯದಿದ್ದರೆ ಈ ವ್ಯಾಧಿ ಇಡೀ ವ್ಯವಸ್ಥೆಗೆ ಮಾರಕವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಹೀಗಾಗಿ ರಾಜ್ಯದ ಸರ್ಕಾರಿ ಶಾಲೆಗಳ ಸುಧಾರಣೆಯನ್ನು ದೂರಗಾಮಿ ದೃಷ್ಟಿಕೋನದಿಂದ ಪರಿಗಣಿಸಬೇಕಾಗಿದೆ.ಇಂಥ ಕ್ರಮಗಳು ಸರ್ಕಾರಿ ಶಾಲಾ ವ್ಯವಸ್ಥೆಯ ಬಗ್ಗೆ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಸದಭಿಪ್ರಾಯ ರೂಪಿಸುವಲ್ಲಿ, ಬ್ರ್ಯಾಂಡ್ ಇಮೇಜನ್ನು ಮೂಡಿಸುವಲ್ಲಿ ನೆರವಾಗಬಹುದು. ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ಎಲ್ಲ ಕಡೆ ಹುಟ್ಟಿಕೊಂಡಿರುವ  ರೀತಿಯಲ್ಲಿಯೇ ಪ್ರಸ್ತುತ ಎಲ್ಲ ಜಿಲ್ಲೆಗಳಲ್ಲಿ ಖಾಸಗಿ ಶಿಶುವಿಹಾರಗಳು ಸಹ ತಲೆಯೆತ್ತಿವೆ. ಅಂಗನವಾಡಿ ಕೇಂದ್ರಗಳಿದ್ದರೂ 3 ವರ್ಷವೂ ತುಂಬದ  ಎಳೆಯ ಕೂಸುಗಳನ್ನು ಈ ಶಿಶುವಿಹಾರಗಳಿಗೆ ಸೇರಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.ಇದಕ್ಕೆ ಕಾರಣ ಅಂಗನವಾಡಿಗಳಲ್ಲಿ ಮಕ್ಕಳ ಮೊದಲ ಹಂತದ ಶಿಕ್ಷಣಕ್ಕೆ ಯಾವುದೇ ಒತ್ತು ನೀಡದಿರುವುದು. ಖಾಸಗಿ ಶಿಶುವಿಹಾರಗಳಲ್ಲಿ ಅಕ್ಷರ ಕಲಿಕೆ, ಹಾಡು, ನೃತ್ಯದ ಮೂಲಕ  ಲವಲವಿಕೆಯ ವಾತಾವರಣ ಮೂಡಿಸುವ ಪ್ರಯತ್ನ ಹೆಚ್ಚಿನ ಮಟ್ಟಿಗೆ ನಡೆಯುತ್ತದೆ.ಹೀಗೆ ಶಿಶುವಿಹಾರದ ಮೂಲಕ ಚೇತೋಹಾರಿ ನಡೆ-ನುಡಿ ಬೆಳೆಸಿಕೊಂಡ ಮಕ್ಕಳನ್ನು ಒಂದನೇ ತರಗತಿಗೆ ಸರ್ಕಾರಿ ಶಾಲೆಗೆ ಸೇರಿಸುವ ಆಲೋಚನೆ ಪೋಷಕರಿಗೆ ಬರುತ್ತದೆ ಎಂದುಕೊಳ್ಳುವುದು ಭ್ರಮೆಯಾಗುತ್ತದೆ.ಅಂಗನವಾಡಿ ಕೇಂದ್ರಗಳನ್ನು ಪುನರ್‌ರೂಪಿಸಿ ಶಿಕ್ಷಣದ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬೇರ್ಪಡಿಸಿ, ಶಿಕ್ಷಣ ಇಲಾಖೆಯೇ ವಹಿಸಿಕೊಳ್ಳುವಂತೆ ಆಗಬೇಕು.ಕಿರಿಯ ಪ್ರಾಥಮಿಕ ಶಾಲೆಗಳೊಂದಿಗೆ ಶಿಶುವಿಹಾರದಂಥ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಬೇಕು. ಇದರಿಂದ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಅವಕಾಶವಾಗುತ್ತದೆ.ಇಂಗ್ಲಿಷನ್ನು ಒಂದನೇ ತರಗತಿಯಿಂದ ಭಾಷೆಯಾಗಿಯೂ, ಐದನೇ ತರಗತಿಯಿಂದ ಮಾಧ್ಯಮವಾಗಿಯೂ ಕಲಿಸಲು ಯೋಜಿಸಬೇಕು. ಇಂಗ್ಲಿಷನ್ನು ಇಂಗ್ಲಿಷಿನಲ್ಲಿಯೇ ಬೋಧಿಸುವಂಥ ಸಮರ್ಥ ಶಿಕ್ಷಕರನ್ನು ಪ್ರಸ್ತುತ ಸೇವೆಯಲ್ಲಿರುವ ಶಿಕ್ಷಕರ ಗುಂಪಿನಿಂದ ಆಯ್ದುಕೊಳ್ಳುವುದರ ಜೊತೆಗೆ, ತರಬೇತಿ ಪಡೆದವರನ್ನು ಹೊಸದಾಗಿ ನೇಮಿಸಿಕೊಳ್ಳಬೇಕಾದ ಜರೂರಿದೆ.ಖಾಸಗಿ ಶಾಲೆಗಳಲ್ಲಿ, ಸಾಮಾನ್ಯವಾಗಿ ತರಬೇತಿ ಹೊಂದಿಲ್ಲದಿದ್ದರೂ ಪ್ರತಿ ತರಗತಿಗೂ ವಿಷಯಾಧಾರಿತ ಶಿಕ್ಷಕರಿರುತ್ತಾರೆ. ಆದರೆ ಏಕೋಪಾಧ್ಯಾಯ ಅಥವಾ ಇಬ್ಬರು ಉಪಾಧ್ಯಾಯರಿರುವ ಸಾವಿರಾರು ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು ಬಹುವರ್ಗ ಬೋಧನೆ ಜಾರಿಯಲ್ಲಿದೆ.ಎಷ್ಟೇ ಕಡಿಮೆ ಸಂಖ್ಯೆಯ ಮಕ್ಕಳಿದ್ದರೂ ಕಿರಿಯ ಪ್ರಾಥಮಿಕ ಹಂತದಲ್ಲಿ ತರಗತಿಗೊಬ್ಬರಂತೆ ಶಿಕ್ಷಕರಿಲ್ಲದಿದ್ದಲ್ಲಿ ಮಕ್ಕಳ ಕಲಿಕೆ ಖಂಡಿತ ತೃಪ್ತಿಕರವಾಗಿ ಆಗದು. ಹಿರಿಯ ಪ್ರಾಥಮಿಕ ಹಂತದಲ್ಲಿಯೇ ವಿಷಯಾಧಾರಿತ ಪರಿಕಲ್ಪನಾತ್ಮಕ ಆಧಾರವನ್ನು ಗಟ್ಟಿಯಾಗಿ ನಿರ್ಮಿಸದಿದ್ದರೆ ಮೇಲಿನ ತರಗತಿಗಳಲ್ಲಿ ಹಿಂದೆ ಗಳಿಸಲಾರದ ಕಲಿಕಾಂಶಗಳನ್ನು ಮಕ್ಕಳಿಗೆ ನೀಡಲಾಗುವುದಿಲ್ಲ. ಇದರಿಂದ ಸರ್ಕಾರಿ ಶಾಲೆಗಳ ಮಕ್ಕಳು ಮುಂದಿನ ಸ್ಪರ್ಧಾತ್ಮಕ ಪರಿಸರಕ್ಕೆ ಸಜ್ಜುಗೊಳ್ಳುವುದಿಲ್ಲ.ಶಿಕ್ಷಕರು ಮತ್ತು ಮಕ್ಕಳ ಅನುಪಾತವನ್ನು ರಾಜ್ಯ ಮಟ್ಟದಲ್ಲಿ ಸರಾಸರಿ ಪ್ರಮಾಣದಲ್ಲಿ ಪರಿಗಣಿಸುವ ಬದಲು ಶಾಲಾ ಮಟ್ಟದಲ್ಲಿ ಪರಿಗಣಿಸುವುದು ಉಚಿತ. ಭವಿಷ್ಯದ  ಮಾನವ ಸಂಪನ್ಮೂಲವು ಶಾಲೆಗಳಲ್ಲಿ ರೂಪುಗೊಳ್ಳುವುದರಿಂದ, ಹಣಕಾಸು ಸಂಪನ್ಮೂಲದ ಹೊರೆಯನ್ನೇ ಮುಂದಿಟ್ಟುಕೊಂಡು ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನಿಯೋಜಿಸದೆ ಇರುವುದು ಅತ್ಯಂತ ಸಂಕುಚಿತ ನಿಲುವಾಗುತ್ತದೆ.ಸೂಕ್ತ ತರಗತಿ ಕೋಣೆಗಳು, ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯಗಳು, ಆಟದ ಮೈದಾನ ಮತ್ತು ಆಟೋಪಕರಣಗಳು, ಅಗತ್ಯ ಕುರ್ಚಿ, ಮೇಜು, ವಾಚನಾಲಯ, ಪ್ರಯೋಗಾಲಯ, ಕೈತೋಟ ಮುಂತಾದವುಗಳನ್ನೊಳಗೊಂಡ ಸುಸಜ್ಜಿತ ಶಾಲೆಯಲ್ಲಿ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಹೆಚ್ಚಿನ ಅವಕಾಶವಿರುತ್ತದೆ.ಭಾರಿ ಸಂಖ್ಯೆಯ ಮಕ್ಕಳನ್ನು ಹೊಂದಿದ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಯಾವುದೇ ವಿಧದಲ್ಲಿಯೂ ಸರ್ಕಾರಿ ಶಾಲೆಗಳು ಕಳಪೆಯಲ್ಲವೆಂದು ಜಗಜ್ಜಾಹೀರಾಗುತ್ತದೆ ಮತ್ತು ಅಧಿಕ ಸಂಖ್ಯೆಯ ಮಕ್ಕಳು ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗುತ್ತಾರೆ. ಸಮುದಾಯ ಮತ್ತು ದಾನಿಗಳಿಂದ ಶಾಲೆಗಳಿಗೆ ಅಗತ್ಯ ಕೊಡುಗೆಯನ್ನು ಪಡೆಯುವಲ್ಲಿ ಎಸ್‌ಡಿಎಂಸಿಗಳ ಪಾತ್ರ ಬಹು ದೊಡ್ಡದು.  ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ 2002– 05ರ  ನಡುವೆ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈಶಾನ್ಯ ಕರ್ನಾಟಕದ ಏಳು ಜಿಲ್ಲೆಗಳ ಕಲಿಕಾ ಖಾತ್ರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತ್ತು. ಇದರ ಅನ್ವಯ, ಶೇ 100ರಷ್ಟು ದಾಖಲಾತಿ ಹಾಗೂ ಶೇ 90ರಷ್ಟು ನಿರಂತರ ಹಾಜರಾತಿಯನ್ನು ಹೊಂದಿದ್ದ 896 ಶಾಲೆಗಳಲ್ಲಿ ಅಧ್ಯಯನ ಕೈಗೊಳ್ಳಲಾಯಿತು.ಇದರಿಂದ ಹೊರಬಂದ ಪ್ರಮುಖ ಅಂಶಗಳೆಂದರೆ, ಮಕ್ಕಳ ಕಲಿಕಾ ಮಟ್ಟವನ್ನು ಯಶಸ್ವಿಯಾಗಿ ಸಾಧಿಸಿದ ಶಾಲೆಗಳಲ್ಲಿ ಬದ್ಧತೆ ಮತ್ತು ಶಿಸ್ತನ್ನು ರೂಢಿಸಿಕೊಂಡ ಮುಖ್ಯ ಶಿಕ್ಷಕರನ್ನೊಳಗೊಂಡ ಶಿಕ್ಷಕರ ವ್ಯವಸ್ಥೆ ಇತ್ತು.ಅವರು ಉತ್ತಮ ಶೈಕ್ಷಣಿಕ ಅಭ್ಯಾಸಗಳನ್ನು (ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ, ಮನೆಗೆಲಸ ನೀಡುವುದು, ವಿಶೇಷ ಪರೀಕ್ಷೆಗಳನ್ನು ನಡೆಸುವುದು, ವಿದ್ಯಾರ್ಥಿಗಳ ಕಲಿಕೆ ಸುಧಾರಿಸಲು ಪೋಷಕರೊಂದಿಗೆ ಸಂವಾದ ನಡೆಸುವುದು,ಮಕ್ಕಳನ್ನು ಧನಾತ್ಮಕವಾಗಿ ಪ್ರೇರೇಪಿಸುವುದು ಇತ್ಯಾದಿ) ಮೈಗೂಡಿಸಿಕೊಂಡಿದ್ದುದು ಮತ್ತು ಶಾಲಾ ಪ್ರಕ್ರಿಯೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡ ಎಸ್‌ಡಿಎಂಸಿ ಮತ್ತು ಪೋಷಕರನ್ನೊಳಗೊಂಡ ಸಕ್ರಿಯ ಸಮುದಾಯ ವ್ಯವಸ್ಥೆಗಳು ಇದ್ದದ್ದು ಕಂಡುಬಂದಿತು. ಈ ಒಳನೋಟ ಇಂದಿಗೂ ಪ್ರಸ್ತುತವಾಗುತ್ತದೆ.ಗ್ರಾಮ ಪಂಚಾಯ್ತಿಗೊಂದು ಮಾದರಿ ಶಾಲೆಗಳ ಆರಂಭಕ್ಕೆ ಸರ್ಕಾರ ಈಗ ಒಲವು ವ್ಯಕ್ತಪಡಿಸಿದೆ. ಮೊದಲು ಪ್ರಯೋಗಾತ್ಮಕವಾಗಿ ಕೆಲವು ಪಂಚಾಯ್ತಿಗಳಲ್ಲಿ ಮಾದರಿ ಶಾಲೆಗಳು ಆರಂಭವಾಗಲಿ.ಸಮಗ್ರ ಕಲಿಕಾ ವಾತಾವರಣಕ್ಕೆ ಪೂರಕವಾದ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ವ್ಯವಸ್ಥಿತ ನಿರ್ವಹಣೆಯ ಜವಾಬ್ದಾರಿ ಸಹಿತ ವಿಷಯವಾರು ಶಿಕ್ಷಕರನ್ನು ನಿಯೋಜಿಸಬೇಕು.ನಂತರ ಇಂತಹ ಶಾಲೆಗಳನ್ನು ಇತರೆಡೆಗಳಲ್ಲಿ ಹಂತ ಹಂತವಾಗಿ ನಿರ್ಮಿಸುವುದು ಒಳಿತು. ಈ ಪ್ರಕ್ರಿಯೆಯಲ್ಲಿ ಎಲ್ಲ ಭಾಗೀದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದುದು ಅತ್ಯಗತ್ಯ. ಅದರಲ್ಲೂ ಶಿಕ್ಷಕರ ಸಂಘಗಳು ಮಹತ್ತರವಾದ ಪಾತ್ರ ವಹಿಸಬೇಕಾಗುತ್ತದೆ.ಸೇವಾ ನಿರತ ಶಿಕ್ಷಕರ ವೃತ್ತಿಪರ ಬೆಳವಣಿಗೆಯನ್ನು ಹೊಸ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ. ಶಿಕ್ಷಕರು ತಮ್ಮ ನೈಜ ಅಗತ್ಯಗಳಿಗೆ ತಕ್ಕಂತೆ ತರಬೇತಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು.ಅದಕ್ಕೆಂದೇ ವಿಶೇಷ ಪಠ್ಯಕ್ರಮ ರಚಿಸಿ ಅದರಂತೆ ಆಯ್ದ ಸಂಪನ್ಮೂಲ ವ್ಯಕ್ತಿಗಳಿಂದ ಅತ್ಯುನ್ನತ ಮಟ್ಟದ ತರಬೇತಿ ಆಯೋಜಿಸಬೇಕು. ನಿರಂತರ ಕಲಿಕೆಯಲ್ಲಿ ತೊಡಗುವ ಶಿಕ್ಷಕರೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವರೆಂಬುದು ಎಲ್ಲರೂ ಒಪ್ಪುವ ಅಂಶ.

ಇಂತಹ ಸುಧಾರಣಾ ಕ್ರಮಗಳ ಜೊತೆಗೆ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಒದಗಿಸುತ್ತಿರುವ ಸವಲತ್ತುಗಳ ಬಗ್ಗೆ ಕೈಹೊತ್ತಿಗೆಗಳನ್ನು, ಪೋಸ್ಟರ್‌ಗಳನ್ನು ತಯಾರಿಸಿ ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸವನ್ನೂ ಜಿಲ್ಲೆ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಮಾಡಬೇಕಾಗಿದೆ.ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರ ಕೂಲಂಕಷವಾಗಿ ವಿಮರ್ಶಿಸಿ ಶೈಕ್ಷಣಿಕ ಸುಧಾರಣೆಗೆ ಸಮಗ್ರ ಯೋಜನೆ ರೂಪಿಸಬೇಕಾಗಿದೆ.

ಬಯಲಾಯ್ತು ತಪ್ಪು ಕಲ್ಪನೆ

ಅಜೀಂ ಪ್ರೇಮ್‌ಜಿ ಪ್ರತಿಷ್ಠಾನವು ಆಂಧ್ರ ಪ್ರದೇಶದ  ಐದು ಜಿಲ್ಲೆಗಳಲ್ಲಿ ಕೈಗೊಂಡ ವಿಶೇಷ ಸಂಶೋಧನೆಯು ಜನರಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಬಗ್ಗೆ ಇದ್ದ ತಪ್ಪು ಕಲ್ಪನೆಯನ್ನು ಬಯಲು ಮಾಡಿತು.ಈ ಜಿಲ್ಲೆಗಳ ಗ್ರಾಮೀಣ ಭಾಗದ ಅವಕಾಶ ವಂಚಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ, ಅವರು ತಮ್ಮ ಆಯ್ಕೆಯ ಖಾಸಗಿ ಶಾಲೆಗಳಿಗೆ ಸೇರುವ ಅವಕಾಶ ಕಲ್ಪಿಸಲಾಯಿತು.ಬಳಿಕ ಈ ಮಕ್ಕಳು ಹಾಗೂ ಸರ್ಕಾರಿ ಶಾಲೆಗಳಲ್ಲೇ ಮುಂದುವರಿದ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು  ಐದು ವರ್ಷಗಳ ಕಾಲ ನಿರಂತರವಾಗಿ (2008-2013ರ ಅವಧಿಯಲ್ಲಿ) ಅಧ್ಯಯನ ಮಾಡಲಾಯಿತು.ಈ ಸಂದರ್ಭದಲ್ಲಿ ತಿಳಿದು ಬಂದ ಅಂಶ ನಮ್ಮೆಲ್ಲರ ಕಣ್ಣು ತೆರೆಸಿತು. ವಿದ್ಯಾರ್ಥಿ ವೇತನ ಪಡೆದು ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಮುಂದುವರಿದ ಮಕ್ಕಳಿಗಿಂತ ತೆಲುಗು, ಗಣಿತ, ಪರಿಸರ ವಿಜ್ಞಾನ ಮತ್ತು ಇಂಗ್ಲಿಷ್‌ನಲ್ಲಿ ಕಡಿಮೆ ಸಾಮರ್ಥ್ಯ ಹೊಂದಿದ್ದರು.ಆದರೆ ಪೋಷಕರನ್ನು ಈ ಕುರಿತು ಸಂದರ್ಶಿಸಿದಾಗ, ಖಾಸಗಿ ಶಾಲೆಗಳಲ್ಲಿ ಒದಗಿಸಲಾಗುವ ಸಮವಸ್ತ್ರ, ಅಲ್ಲಿ ಪಾಲಿಸುವ ಶಿಸ್ತು, ಹಾಜರಾತಿ (ಶಿಕ್ಷಕರು ಮತ್ತು ಮಕ್ಕಳದ್ದು), ಇಂತಹ ಶಾಲೆಗಳಿಗೆ ಸೇರಿಸುವುದರಿಂದ ಸಮಾಜದಲ್ಲಿ ತಮಗೆ ಸಿಗುವ ಮನ್ನಣೆಯ ಕಾರಣದಿಂದ ಅವರು ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸ ಬಯಸಿದ್ದುದು ತಿಳಿದುಬಂತು.

ಶಿಕ್ಷಕರಾಗಿಯೇ ಇರಲಿ

ಶಿಕ್ಷಕರನ್ನು ಚುನಾವಣೆ, ಜನಗಣತಿ, ಜಾತಿಗಣತಿ, ಪ್ರಾಣಿಗಣತಿಯಂತಹ  ಶೈಕ್ಷಣಿಕವಲ್ಲದ ಎಲ್ಲ ಬಗೆಯ ಕೆಲಸಗಳಿಗೆ ಬಳಸಿಕೊಳ್ಳುವುದು ಸಾಮಾನ್ಯ.

ರಾಜಸ್ತಾನದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳ ಹಿಂದಿನ ಲೋಕಸಭಾ ಕ್ಷೇತ್ರದಲ್ಲಿ ‘ಸ್ವಚ್ಛ ಭಾರತ್’ ಅಭಿಯಾನದಡಿ, ಬಯಲು ಮಲ ವಿಸರ್ಜನೆ ವಿರುದ್ಧ ಜನ ಜಾಗೃತಿ ಮೂಡಿಸುವ ಕಾರ್ಯಕ್ಕೂ ಶಿಕ್ಷಕರನ್ನು ಬಳಸಿಕೊಂಡ ಉದಾಹರಣೆ ಇದೆ!

ಪ್ರತಿಕ್ರಿಯಿಸಿ (+)