ಸಮಗ್ರ ಶಿಕ್ಷಣ ವ್ಯವಸ್ಥೆ ಜಾರಿಗೆ ಸಲಹೆ

7

ಸಮಗ್ರ ಶಿಕ್ಷಣ ವ್ಯವಸ್ಥೆ ಜಾರಿಗೆ ಸಲಹೆ

Published:
Updated:
ಸಮಗ್ರ ಶಿಕ್ಷಣ ವ್ಯವಸ್ಥೆ ಜಾರಿಗೆ ಸಲಹೆ

ಬೆಂಗಳೂರು: `ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗೆ ಒತ್ತು ನೀಡಬೇಕಿದೆ~ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಹೇಳಿದರು.ಇಂಡಸ್ ಪ್ರತಿಷ್ಠಾನವು ನಗರದ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇಂಡೋ-ಗ್ಲೋಬಲ್ ಶಿಕ್ಷಣ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.`ಈಚಿನ ವರ್ಷಗಳಲ್ಲಿ ಶಿಕ್ಷಣ ವ್ಯವಸ್ಥೆಯು ಸಮಗ್ರತೆಯನ್ನು ಕಳೆದುಕೊಳ್ಳುತ್ತಿದೆ. ಪ್ರತಿಯೊಂದನ್ನು ಬಿಡಿ ಬಿಡಿಯಾಗಿ ವ್ಯಾಸಂಗ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಬದಲಿಗೆ ಸಮಗ್ರ ವಿಷಯಗಳನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆ ಇರಬೇಕು~ ಎಂದು ಅಭಿಪ್ರಾಯಪಟ್ಟರು.`ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 55ರಷ್ಟು ಮಂದಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹಾಗಾಗಿ ಯುವ ಜನತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಮುಂದಿನ ಐದು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ವಿದೇಶಿ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಸಮಾವೇಶ ಆಯೋಜಿಸಿರುವುದು ಪ್ರಸ್ತುತವೆನಿಸಿದೆ~ ಎಂದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಮಹೇಶಪ್ಪ, `ಜಾಗತೀಕರಣದಿಂದ ಜಗತ್ತಿನ ರಾಷ್ಟ್ರಗಳು ಸಮೀಪವಾದಂತಾಗಿದ್ದು, ಗಡಿರಹಿತ ರಾಷ್ಟ್ರಗಳಾಗಿ ಹೊರಹೊಮ್ಮುತ್ತಿವೆ. ವಿದೇಶಿ ಶಿಕ್ಷಣ ಸಂಸ್ಥೆಗಳು ಭಾರತದ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ತಮ್ಮ ಕೇಂದ್ರಗಳನ್ನು ತೆರೆಯಲು ಈ ಸಮಾವೇಶ ಸಹಕಾರಿ ಎನಿಸಿದೆ~ ಎಂದು ಹೇಳಿದರು.`ಗುಣಮಟ್ಟದ ವಿಶ್ವವಿದ್ಯಾಲಯ, ಕೈಗಾರಿಕೆಗಳು ಹಾಗೂ ಉತ್ತಮ ಸರ್ಕಾರದಿಂದ ದೇಶದ ಅಭಿವೃದ್ಧಿ ಸಾಧ್ಯ. ಹಾಗಾಗಿ ತಂತ್ರಜ್ಞಾನದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲೂ ಸಂಶೋಧನೆ ಮತ್ತು ಸುಧಾರಣೆ ಹಾಗೂ ಸಂಶೋಧನಾ ಪ್ರಬಂಧ ಮಂಡನೆಗೆ ಆದ್ಯತೆ ನೀಡಲಾಗಿದೆ~ ಎಂದರು.ಬೆಂಗಳೂರು ವಿ.ವಿ. ಕುಲಪತಿ ಪ್ರೊ.ಎನ್.ಪ್ರಭುದೇವ್, ಕೆನಡಾದ ಕಾರ್ಲ್‌ಟನ್ ವಿ.ವಿ ಆಡಳಿತ ಮಂಡಳಿಯ ಜಾಕ್ಸ್ ಜೆ.ಎಂ. ಶೋರ್, ಇಂಡೋನೇಷಿಯಾದ ಸುಲ್ತಾನ್ ಅಗುಂಗ್ ಇಸ್ಲಾಮಿಕ್ ವಿ.ವಿಯ ಅಧ್ಯಕ್ಷ ಡಾ.ಖಮಲುದ್ದೀನ್, ಇಂಡಸ್ ಪ್ರತಿಷ್ಠಾನದ ಅಧ್ಯಕ್ಷ ಸಿ.ಡಿ. ಅರಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry