ಸಮಗ್ರ ಹಣದುಬ್ಬರ ಕುಸಿತ

7

ಸಮಗ್ರ ಹಣದುಬ್ಬರ ಕುಸಿತ

Published:
Updated:

ನವದೆಹಲಿ (ಪಿಟಿಐ): ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಒಟ್ಟಾರೆ ಹಣದುಬ್ಬರ ದರ ಜನವರಿ ತಿಂಗಳಲ್ಲಿ ಎರಡು ವರ್ಷಗಳ ಹಿಂದಿನ ಮಟ್ಟ ಶೇ 6.55ಕ್ಕೆ ಇಳಿಕೆ ಕಂಡಿದೆ.ಈ ಅವಧಿಯಲ್ಲಿ ತರಕಾರಿ, ಹಣ್ಣು, ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಣನೀಯ ಇಳಿಕೆ ಕಂಡಿವೆ. ಸಮಗ್ರ ಹಣದುಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಿನ ಮಧ್ಯಂತರ ತ್ರೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರ ಇಳಿಕೆಗೆ ಮುಂದಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟಾರೆ ಹಣದುಬ್ಬರ ದರವು ಶೇ 9.47ರಷ್ಟಿತ್ತು. ಕಳೆದ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಶೇ 7.47ಕ್ಕೆ ಇಳಿಕೆ ಕಂಡಿತ್ತು.  2009ರ ನಂತರ ದಾಖಲಾಗಿರುವ ಗರಿಷ್ಠ ಸಮಗ್ರ ಹಣದುಬ್ಬರ ಕುಸಿತ ಇದಾಗಿದೆ.ಪ್ರಣವ್ ಪತ್ರಿಕ್ರಿಯೆ: `ಒಟ್ಟಾರೆ ಹಣದುಬ್ಬರ 25 ತಿಂಗಳ ಹಿಂದಿನ ಮಟ್ಟಕ್ಕೆ ಇಳಿಕೆಯಾದರೂ ಕೆಲವು ಆಹಾರ ಪದಾರ್ಥಗಳ ದರಗಳು  ಇನ್ನೂ  ಗರಿಷ್ಠ ಮಟ್ಟದಲ್ಲಿವೆ. ಬೆಲೆಗಳು ಇನ್ನಷ್ಟು ಹಿತಕರ ಮಟ್ಟಕ್ಕೆ ತಗ್ಗಬೇಕಿದೆ~ ಎಂದು ಕೇಂದ್ರ  ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.ಹಣದುಬ್ಬರ ಅಂಕಿ ಅಂಶಗಳು ಇನ್ನೂ ಸ್ವೀಕಾರಯೋಗ್ಯ ಮಟ್ಟದಲ್ಲಿ ಇಲ್ಲ. ಮುಂಬರುವ ದಿನಗಳಲ್ಲಿ ಬೆಲೆಗಳು ಇನ್ನಷ್ಟು ಇಳಿಕೆಯಾಗುತ್ತದೆ ಎನ್ನುವ ಭರವಸೆ ಇದೆ ಎಂದಿದ್ದಾರೆ.ಮಂಗಳವಾರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಡಿಸೆಂಬರ್ ತಿಂಗಳಲ್ಲಿ ಶೇ (-) 0.74ರಷ್ಟಿದ್ದ  ಆಹಾರ ಹಣದುಬ್ಬರ ದರವು ಜನವರಿಯಲ್ಲಿ ಶೇ (-) 0.52ಕ್ಕೆ ಕುಸಿದಿದ್ದು, ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ತರಕಾರಿ ಮತ್ತು ಗೋಧಿ ದರಗಳು ಶೇ 43ಮತ್ತು ಶೇ 3ರಷ್ಟು ಇಳಿಕೆ ಕಂಡಿವೆ.  ಈರುಳ್ಳಿ ಮತ್ತು ಆಲೂಗಡ್ಡೆ ದರ ಶೇ 75  ಮತ್ತು ಶೇ 23ರಷ್ಟು ಇಳಿಕೆಯಾಗಿವೆ.  ಸಮಗ್ರ ಹಣದುಬ್ಬರ ದರಕ್ಕೆ ಶೇ 14ರಷ್ಟು ಕೊಡುಗೆ ನೀಡುವ ಪ್ರಾಥಮಿಕ ಸರಕುಗಳು ಗಣನೀಯ ಇಳಿಕೆ ದಾಖಲಿಸಿವೆ.ಗರಿಷ್ಠ ಮಟ್ಟ: 2011 ಫೆಬ್ರುವರಿ ತಿಂಗಳಿಂದಲೂ ತಯಾರಿಕೆ ವಲಯದ ಹಣದುಬ್ಬರ ದರ ಗರಿಷ್ಠ ಮಟ್ಟದಲ್ಲಿದೆ.  ಜನವರಿ ತಿಂಗಳಲ್ಲಿ ಇದು ಶೇ 6ರ ಗಡಿ ದಾಟಿದೆ. ಕಬ್ಬಿಣದ ಬೆಲೆ ಶೇ 18ರಷ್ಟು ಇಳಿದರೆ, ಖಾದ್ಯ ತೈಲ ಶೇ 9ರಷ್ಟು ತುಟ್ಟಿಯಾಗಿದೆ. ಪ್ರಾಥಮಿಕ ಲೋಹಗಳ ದರಗಳು ಶೇ 12ರಷ್ಟು ಹೆಚ್ಚಾಗಿವೆ. ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ತೈಲ ಮತ್ತು ಇಂಧನ ದರ ಶೇ 14.21ಕ್ಕೆ ತಗ್ಗಿದೆ. `ಡಬ್ಲ್ಯುಪಿಐ~ಗೆ ತಯಾರಿಕೆ ವಲಯದ ಕೊಡುಗೆ ಶೇ 65ರಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry