ಗುರುವಾರ , ಜೂನ್ 24, 2021
29 °C

ಸಮನ್ವಯತೆ ಸಾರುವ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಹೆಬಳ್ಳಿ, ಮಾಡಿಯಾಳ ಮತ್ತು ಜೀರಹಳ್ಳಿ ಗ್ರಾಮಗಳಲ್ಲಿನ ವಿವಿಧ ಧರ್ಮಿಯರು ಸಮನ್ವಯತೆಯಿಂದ ಸೇರಿ ಬೀದರನ ಅಷ್ಟೂರವರೆಗೂ ಸಾಮೂಹಿಕ ಮೆರವಣಿಗೆ ಮೂಲಕ ಕೈಗೊಳ್ಳುವ ಪಾದಯಾತ್ರೆ ಶನಿವಾರ ಸಾಯಂಕಾಲದಿಂದ ಆರಂಭಗೊಂಡಿದೆ.ಮಾಡಿಯಾಳ, ಜೀರಹಳ್ಳಿ ಗ್ರಾಮಗಳ ಅಲ್ಲಂಪ್ರಭುವಿನ ಭಕ್ತರು, ಹೆಬಳ್ಳಿಯ ಅಲ್ಲಂಪ್ರಭು ಮತ್ತು ಹಜರತ ಸುಲ್ತಾನ ಮಶಾಕರ ಅನುಯಾಯಿಗಳು ಹಿಂದೂ ಮುಸ್ಲಿಂ ತಾರತಮ್ಯವಿಲ್ಲದೆ ಸುಮಾರು ನಾಲ್ಕು ನೂರುಕ್ಕಿಂತ ಹೆಚ್ಚು ಜನ ಸಾಮೂಹಿಕವಾಗಿ ಮಾಡಿಯಾಳದ ಶಿವರಾಯ ಮುತ್ಯಾ ಒಡೆಯರ ಮತ್ತು ಹೆಬಳ್ಳಿ ಧರ್ಮಣ್ಣಾ ಮುತ್ಯಾ ಒಡೆಯರ ನೇತೃತ್ವದಲ್ಲಿ ತಾಲ್ಲೂಕಿನ ಮಟಕಿ, ಪಡಸಾವಳಿ, ಮಹಾರಾಷ್ಟ್ರದ ಬೆಳಾಂ, ಕೇಸರ ಜವಳಗಾ ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು.ಬೀದರ ಸಮೀಪದಲ್ಲಿರುವ ಅಷ್ಟೂರುನಲ್ಲಿ ಬಹುಮನಿ ಸುಲ್ತಾನರ ಕಾಲದಲ್ಲಿ ನಿರ್ಮಾಣಗೊಂಡ ಪ್ರಸಿದ್ಧ ದರ್ಗಾಗಳಿಗೆ ಭೇಟಿ ನೀಡುವರು. ಈ ದರ್ಗಾಗಳಲ್ಲಿ ತಾಲ್ಲೂಕಿನ ಒಡೆಯರ ಮನೆತನದವರು ಪೂಜೆ ನೆರವೇರಿಸುವ ಮೂಲಕ ಅಷ್ಟೂರ ಅಲ್ಲಂಪ್ರಭುವಿನ ಜಾತ್ರೆ ಆರಂಭಗೊಳ್ಳಲುವುದು ವಿಶಿಷ್ಠ ಪರಂಪರೆಯ ಪ್ರತೀಕವಾಗಿದೆ.  ಬೀದರನ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ.ತಾಲ್ಲೂಕಿನಿಂದ ಸಾಗುವ ಪಾದಯಾತ್ರೆಯು ರಾಚಣ್ಣವಾಗ್ದರ್ಗಿ, ಬಸವಕಲ್ಯಾಣ, ಹುಮನಾಬಾದ ರಾಜ್ಯ ಹೆದ್ದಾರಿ ಮಾರ್ಗವಾಗಿ ಬೀದರ ಬಳಿ ಇರುವ ಅಷ್ಟೂರ ಗ್ರಾಮಕ್ಕೆ ಮಾರ್ಚ್ 15ರಂದು ತಲುಪುವುದು. ಅಲ್ಲಂಪ್ರಭುವಿನ ಜಾಗೃತ ಕೇಂದ್ರ ಮತ್ತು ಸುಲ್ತಾನ ಮಶಾಕರ ಶೃದ್ಧಾಕೇಂದ್ರವೆಂದು ಹಿಂದೂ ಮತ್ತು ಮುಸ್ಲಿಮರು ಪಾಲ್ಗೊಂಡು ಉತ್ಸವ ಜರುಗುತ್ತದೆ.ಅಷ್ಟೂರು ಜಾತ್ರೆ ಮುಕ್ತಾಯಗೊಳಿಸಿ ತಾಲ್ಲೂಕಿನ ಮಾಡಿಯಾಳ ಮತ್ತು ಹೆಬಳ್ಳಿ ಗ್ರಾಮದ ಒಡೆಯರರು ಹಗಲು ರಾತ್ರಿ ಪಾದಯಾತ್ರ ಮೂಲಕ  ಮೂಲಸ್ಥಾನಗಳಿಗೆ ತಲುಪುತ್ತಾರೆ. ದಾರಿಯುದ್ದಕ್ಕೂ ಪೂಜೆ, ಪ್ರಸಾದ, ನಂದಿಕೋಲ ಮೆರವಣಿಗೆ, ಮಾಯಾದೇವಿ ಮೂರ್ತಿ ಮೆರವಣಿಗೆ ಮತ್ತಿತರ ಧಾರ್ಮಿಕ ವಿಧಿವಿಧಾನಗಳು ಜರುಗುತ್ತವೆ. ಚಂದ್ರಮಾನದ ಯುಗಾದಿ ಅಮವಾಸೆಯಿಂದ ಮಾಡಿಯಾಳ, ಹೆಬಳ್ಳಿ ಗ್ರಾಮಗಳಲ್ಲಿ ಜಾತ್ರೆ ಪ್ರಾರಂಭವಾಗುವುದು. ಸರ್ವ ಧರ್ಮಿಯರು ಸಾಮರಸ್ಯಭಾವದಿಂದ ಆಚರಿಸುವ ಜಾತ್ರೆ ವಿಶೇಷವಾಗಿ ನಡೆಯುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.