ಸೋಮವಾರ, ಮೇ 17, 2021
22 °C

ಸಮಯ ಬದಲಾವಣೆಗೆ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಅಧಿಕಾರಾವಧಿಯಲ್ಲಿ ಈ ಭಾಗದ ಭೌಗೋಳಿಕ ಹಿನ್ನೆಲೆಯನ್ನು ಗಮನಿಸಿ ಬೇಸಿಗೆ ಕಾಲದ ಎರಡು ತಿಂಗಳುಗಳಿಗೆ ಸರ್ಕಾರಿ ಕಚೇರಿ ವೇಳೆಯನ್ನು ಬೆಳಿಗ್ಗೆ 10.30ರಿಂದ 5.30ರ ಬದಲಾಗಿ ಬೆಳಿಗ್ಗೆ 8ರಿಂದ 1.30ರವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು.ಇದು ಅಂದಿನಿಂದ ಇಂದಿನವರೆಗೆ ಅನುಚಾನವಾಗಿ ನಡೆದುಕೊಂಡು ಬಂದಿತ್ತು. ಆದರೆ ಇದೀಗ  ತೀವ್ರ ಬರಗಾಲ ತಲೆದೋರಿದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಮೊದಲಿನಂತೆ ಬೆಳಿಗ್ಗೆ 10.30ರಿಂದ 5.30ರವರೆಗೆ ಕಾರ್ಯನಿರ್ವಹಿಸುವಂತೆ ಸರ್ಕಾರದ ಆಧೀನ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.ಬಿಸಿಲಿನ ತಾಪಕ್ಕೊಳಗಾಗುವ ಗುಲ್ಬರ್ಗ ವಿಭಾಗದ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಕರ್ನಾಟಕ ಸರ್ಕಾರದ ಎಲ್ಲ ಸರ್ಕಾರಿ ಮತ್ತು ನಿಗಮ ಮಂಡಳಿಗಳ ಕಚೇರಿಗಳು ಏಪ್ರಿಲ್ 1ರಿಂದ ಮೇ 31ರ ವರೆಗೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಸರ್ಕಾರ ಈ ಮೊದಲು ಆದೇಶ ಹೊರಡಿಸಿತ್ತು.ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ಕಚೇರಿ ವೇಳೆ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಮಾತನಾಡಿ ಮತ್ತೆ ಮೊದಲಿನಂತೆ ಕಾರ್ಯನಿರ್ವಹಿಸಲು ಆದೇಶಿಸಲಾಗುವುದು ಎಂದು ಈಚೆಗೆ ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಹೇಳಿಕೆಯಿಂದಾಗಿ ಇಲ್ಲಿನ ಸರ್ಕಾರಿ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ನಿರ್ಧಾರ ಕೈ ಬಿಡದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.ಆದರೆ ಬೆಳಿಗ್ಗೆ 8ರಿಂದ 1.30ರವರೆಗೆ ಕಚೇರಿ ವೇಳೆ ಬದಲಾಯಿಸಿರುವುದರಿಂದ ಮಧ್ಯಾಹ್ನದ ನಂತರ ಮುಖ್ಯವಾದ ಮತ್ತು ತುರ್ತು ಕೆಲಸ ಕಷ್ಟಸಾಧ್ಯವಾದ್ಧರಿಂದ ಮೊದಲಿನಂತೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ಸರ್ಕಾರದ ಆಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.ನೌಕರರ ಅಸಮಾಧಾನ: 1972-74ರ ಬೀಕರ ಬರಗಾಲ ಮತ್ತು 1993-94ರ ಬರಗಾಲದ ಸಂದರ್ಭದಲ್ಲೂ ಬೇಸಿಗೆ ದಿನದ ಎರಡು ತಿಂಗಳು ಸರ್ಕಾರಿ ಕಚೇರಿ ವೇಳೆ ಬೆಳಿಗ್ಗೆ 8ರಿಂದ 1.30ರವರೆಗೆ ಕಾರ್ಯನಿರ್ವಹಿಸಲಾಗಿತ್ತು ಆದರೆ ಏಕಾಏಕಿ ಇದೀಗ ಮತ್ತೆ ಬೆಳಿಗ್ಗೆ 10.30ರಿಂದ 5.30ರವರೆಗೆ ಎಂದು ಆದೇಶ ನೀಡಿರುವುದು ಸರಿಯಲ್ಲ.

 

ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು ಅಸಾಧ್ಯದ ಕೆಲಸ. ಈ ಭಾಗದ ನೌಕರರಿಗೆ ಇರುವ ಇದೊಂದು ವಿನಾಯಿತಿಯನ್ನು ಕಸಿದುಕೊಂಡಿರುವ ಸರ್ಕಾರದ ಕ್ರಮ ಒಪ್ಪುವಂಥದ್ದಲ್ಲ. ಕೂಡಲೇ ಈ ಬಗ್ಗೆ ಸಭೆ ಸೇರಿ ಕೂಲಂಕಷವಾಗಿ ಚರ್ಚಿಸಲಾಗುವುದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ದೇಸಾಯಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಉರಿ ಬಸಿಲು: ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮಹಾವೀರ ಟಿ. ಕಾಸರ ಹಾಗೂ ಕಾರ್ಯದರ್ಶಿ ಎಸ್.ಪಿ.ಸುಳ್ಳದ ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.