ಶನಿವಾರ, ಮೇ 15, 2021
24 °C

ಸಮಯ ಬದಲಾವಣೆ: ಪರಿಶೀಲನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಧ್ಯಾಹ್ನದ ನಂತರ ಮುಖ್ಯವಾದ ಮತ್ತು ತುರ್ತು ಕೆಲಸ ಕಷ್ಟ ಸಾಧ್ಯವಾದ್ದರಿಂದ ಮೊದಲಿನಂತೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ಹಿಂದಕ್ಕೆ ಪಡೆದು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಮನವಿ ಮಾಡಿದರು.ಶುಕ್ರವಾರ ಇಲ್ಲಿ ಕರೆಯಲಾಗಿದ್ದ ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗದ ಅಧ್ಯಕ್ಷರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಈ ಭಾಗದ ಭೌಗೋಳಿಕ ಹಿನ್ನೆಲೆಯನ್ನು ಗಮನಿಸಿ ಬೇಸಿಗೆ ಕಾಲದ ಎರಡು ತಿಂಗಳುಗಳಿಗೆ ಸರ್ಕಾರಿ ಕಚೇರಿ ವೇಳೆಯನ್ನು ಬೆಳಿಗ್ಗೆ 10.30ರಿಂದ 5.30ರ ಬದಲಾಗಿ ಬೆಳಿಗ್ಗೆ 8ರಿಂದ 1.30ರವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು. ಆದರೆ 40 ವರ್ಷಗಳಿಂದ ಈ ಭಾಗಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತನ್ನು ಮೊಟಕುಗೊಳಿಸಿ ಇದೀಗ ಏಕಾಏಕಿ ಮತ್ತೆ ಕಚೇರಿ ವೇಳೆಯನ್ನು ಬದಲಾಯಿಸಿರುವುದರಿಂದ ಸರ್ಕಾರಿ ನೌಕರರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.1972-74ರ ಬೀಕರ ಬರಗಾಲ ಮತ್ತು 1993-94ರ ಬರಗಾಲದ ಸಂದರ್ಭದಲ್ಲೂ ಬೇಸಿಗೆ ದಿನದ ಎರಡು ತಿಂಗಳು ಸರ್ಕಾರಿ ಕಚೇರಿ ವೇಳೆ ಬೆಳಿಗ್ಗೆ 8ರಿಂದ 1.30ರವರೆಗೆ ಕಾರ್ಯನಿರ್ವಹಿಸಲಾಗಿತ್ತು ಆದರೆ ಮತ್ತೆ ಬೆಳಿಗ್ಗೆ 10.30ರಿಂದ 5.30ರವರೆಗೆ ಎಂದು ಆದೇಶ ನೀಡಿರುವುದು ಸರಿಯಲ್ಲ. ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚುತ್ತಿರುವ ಈ ದಿನಗಳಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು ಅಸಾಧ್ಯದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಭಾಗದ ನೌಕರರಿಗೆ ಇರುವ ಇದೊಂದು ವಿನಾಯಿತಿಯನ್ನು ಕಸಿದುಕೊಂಡಿರುವ ಸರ್ಕಾರದ ಕ್ರಮ ಒಪ್ಪುವಂಥದಲ್ಲ. ಈ ಕುರಿತು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಸರ್ಕಾರಿ ನೌಕರರ ರಾಜ್ಯ ಘಟಕದ ಅಧ್ಯಕ್ಷ, ಪದಾಧಿಕಾರಿಗಳೊಂದಿಗೆ ಚರ್ಚಿಸಿ ಹೋರಾಟ ಮಾಡಲಾಗುವುದು ಎಂದರು.ರಾಜ್ಯದಲ್ಲಿ ಒಟ್ಟು 6 ಲಕ್ಷ 40 ಸಾವಿರ ಹುದ್ದೆಗಳಲ್ಲಿ 1ಲಕ್ಷ 47 ಸಾವಿರ ಹುದ್ದೆಗಳು ಖಾಲಿಯಿದ್ದು,  ಆ ಹುದ್ದೆಗಳನ್ನು ಭರ್ತಿ ಮಾಡದ ಸರ್ಕಾರ ಸರ್ಕಾರಿ ನೌಕರರಿಗೆ ಇರುವ ವಿನಾಯಿತಿಯನ್ನೇ ಕಸಿದುಕೊಳ್ಳುತ್ತಿರುವುದು ಯಾವ ನ್ಯಾಯ? ಸರ್ಕಾರ ಜಾರಿಗೆ ತಂದಿರುವ `ಸಕಾಲ~ ಯೋಜನೆ ಯಶಸ್ವಿ ಗೊಳಿಸುವ ಮುನ್ನ ನೌಕರರಿಗೆ ಮೂಲ ಸೌಕರ್ಯ ಒದಗಿಸುವಲ್ಲಿಯೂ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು.ಬಿ.ಎಸ್. ದೇಸಾಯಿ (ಗುಲ್ಬರ್ಗ), ಪಾಶಾಸಾಬ್ ಮೂಲಿಮನಿ (ರಾಯಚೂರು), ಬಸವರಾಜ ಭರಶೆಟ್ಟಿ (ಬೀದರ್), ರಾಚೋಟಿ ಸ್ವಾಮಿ (ಯಾದಗಿರಿ), ಸುರೇಶ ಶಡಶ್ಯಾಳ (ವಿಜಾಪುರ), ಚಂದ್ರಶೇಖರ (ಬಳ್ಳಾರಿ), ಅಬ್ದುಲ್ ಅಜೀಮ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.