`ಸಮಯ, ಸಂಪನ್ಮೂಲ ಬಳಕೆ: ಎಚ್ಚರ ಅಗತ್ಯ'

7

`ಸಮಯ, ಸಂಪನ್ಮೂಲ ಬಳಕೆ: ಎಚ್ಚರ ಅಗತ್ಯ'

Published:
Updated:

ಮೂಡಿಗೆರೆ: ಕೃಷಿಯಲ್ಲಿ ಯಶಸ್ವಿಯಾಗಲು ಸಮಯ ಮತ್ತು ಸಂಪನ್ಮೂಲ ಬಳಕೆಯಲ್ಲಿ ಎಚ್ಚರವಹಿಸಬೇಕಾದದ್ದು ಅಗತ್ಯವಾಗಿದೆ ಎಂದು ಹಾಸನ ಆಕಾಶವಾಣಿಯ ಕೃಷಿ ತಜ್ಞ ಡಾ.ವಿಜಯ ಅಂಗಡಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ಜೇಸಿಐ ಮೂಡಿಗೆರೆ ಘಟಕದಿಂದ ನಡೆಯುತ್ತಿರುವ `ಅಪೂರ್ವ ಜೇಸಿ ಸಪ್ತಾಹ - 2013' ಅಂಗವಾಗಿ ಬುಧವಾರ ಏರ್ಪಡಿಸಿದ್ದ ಕೃಷಿ - ಖುಷಿ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಸ್ವಂತ ದುಡಿಮೆ ಶಕ್ತಿಯು ಮಾನವನಿಗೆ ಪರಾವಲಂಬಿತನವನ್ನು ತೊಲಗಿಸುತ್ತದೆ. ಆದರೆ ಸ್ವಂತ ದುಡಿಮೆಯಲ್ಲಿ ಯಶಸ್ವಿಯಾಗಲು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಲೇ ಬೇಕಾಗುತ್ತದೆ. ಕೃಷಿಯಲ್ಲಿ ಯಶಸ್ವಿಯಾಗಲು ಲೆಕ್ಕಾಚಾರ, ಉಳಿತಾಯ, ಸಮಯ ಮತ್ತು ಸಂಪನ್ಮೂಲಕ್ಕೆ ಆದ್ಯತೆ ನೀಡಲೇಬೇಕು ಎಂದರು.ಕೃಷಿಯಲ್ಲಿ ರಾಸಾಯನಿಕ ಬಳಕೆ ಹೆಚ್ಚಾದಂತೆ ಕೃಷಿ ವಲಯ ವೆಚ್ಚದಾಯಕವಾಗುವುದರ ಜೊತೆಗೆ ಕೃಷಿಕ ಮತ್ತು ಬೆಳೆಯನ್ನು ಉಪಯೋಗಿಸುವ ಗ್ರಾಹಕರ ಮೇಲೂ ಪರಿಣಾಮ ಬೀರುತ್ತಿದೆ, ರೈತರು ಆದಷ್ಟೂ ಸಾವಯವ ಕೃಷಿಗೆ ಒತ್ತು ನೀಡಿ ವೆಚ್ಚ ಕಡಿತಗೊಳಿಸಿಕೊಳ್ಳುವ ಜೊತೆಗೆ, ಆರೋಗ್ಯಯುತ ಬೆಳೆಯನ್ನು ಪಡೆಯಬೇಕು ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಹಳಸೆ ಶಿವಣ್ಣ ಮಾತನಾಡಿ, ಇಂದಿನ ಯುವ ಜನತೆಯಲ್ಲಿ ಹಳ್ಳಿಯ ಬದುಕು ಕಣ್ಮರೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಇಂದಿನ ಮಕ್ಕಳಿಗೆ ನೆಲದ ಸ್ಪರ್ಶವೇ ಇಲ್ಲದಂತಹ ಪರಿಸ್ಥಿತಿ ಏರ್ಪಟ್ಟಿದ್ದು, ಕಷ್ಟಸಹಿಷ್ಣುತೆಯ ಅರಿವಿಲ್ಲದೇ, ಬದುಕಿನಲ್ಲಿ ಸಣ್ಣ ಸಮಸ್ಯೆ ಎದುರಾದರೂ ಕಂಗಾಲಾಗುವ ಮನೋಭಾವ ಬೆಳೆಯುತ್ತಿದೆ ಎಂದು ವಿಷಾದಿಸಿದರು.ಕೃಷಿಕ ಹಳೆಕೋಟೆ ರಮೇಶ್ ಮಾತನಾಡಿ, ಕೃಷಿಯಲ್ಲಿ ತಂತ್ರಜ್ಞಾನ ಅಗತ್ಯವಾಗಿದ್ದು, ರೈತರು ವೆಚ್ಚ ಕಡಿತಗೊಳಿಸಿ, ಉತ್ಪನ್ನ ಹೆಚ್ಚಿಸಿಕೊಳ್ಳುವ ಮಾರ್ಗೋಪಾಯಗಳನ್ನು ಅರಿಯಲಿ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸಿಐ ಘಟಕದ ಅಧ್ಯಕ್ಷ ಪ್ರಸನ್ನಗೌಡಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳ ರೈತರು ಭಾಗವಹಿಸಿ, ತಜ್ಞರೊಂದಿಗೆ ತಮ್ಮ ಕೃಷಿ ಸಮಸ್ಯೆಗಳ ಸಂವಾದ ನಡೆಸಿದರು.ಮತ ಎಣಿಕೆ ಅಕ್ರಮ ಆರೋಪ

ಮೂಡಿಗೆರೆ:
ತಾಲ್ಲೂಕಿನ ದಾರದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂತೋಷ್‌ಕುಮಾರ್ ಆರೋಪಿಸಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮತ ಎಣಿಕೆಯ ವೇಳೆ ಚುನಾವಣಾಧಿಕಾರಿ, ಮತ್ತು ಸಂಘದ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ಸೇರಿ  ಮತ ಎಣಿಕೆಯಲ್ಲಿ ಅಕ್ರಮ ನಡೆಸಿದ್ದಾರೆ. ಮತ ಎಣಿಕೆಯ ವೇಳೆ ಪ್ರಭಾವಿಗಳ ಒತ್ತಡಕ್ಕೆ ಮಣಿದು, ಕುಲಗೆಟ್ಟ ಮತಗಳನ್ನು ಬೇರ್ಪಡಿಸುವಾಗ ಕ್ರಮಬದ್ಧ ಮತಗಳನ್ನೂ ಕುಲಗೆಟ್ಟ ಮತಗಳೆಂದು ತೀರ್ಮಾನಿಸಿ ಅನ್ಯಾಯವೆಸಗಿರುತ್ತಾರೆ.ಎಣಿಕೆ ಪೂರ್ಣಗೊಂಡು ಎಲ್ಲಾ ಅಭ್ಯರ್ಥಿಗಳ ಒಪ್ಪಿಗೆಯ ನಂತರವೇ ಚುನಾವಣೆಯ ಫಲಿತಾಂಶ ಪ್ರಕಟಿಸಬೇಕೆಂಬ ನಿಯಮವಿದ್ದರೂ, ಪರಿಗಣನೆಗೆ ತೆಗೆದುಕೊಂಡಿಲ್ಲ. ಮತಎಣಿಕೆ ಕ್ರಮ ಪ್ರಶ್ನಿಸಿ ಅಭ್ಯರ್ಥಿ ಸ್ವತಃ ಆಕ್ಷೇಪಣೆ ಸಲ್ಲಿಸಿದರೂ ಗಣನೆಗೆ ತೆಗೆದುಕೊಳ್ಳದೇ ಫಲಿತಾಂಶ ಪ್ರಕಟಿಸಲಾಗಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry