ಸಮರ್ಥನೀಯವಲ್ಲದ ನಡೆ

7

ಸಮರ್ಥನೀಯವಲ್ಲದ ನಡೆ

Published:
Updated:

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಎರಡು ಅಥವಾ ಅದಕ್ಕಿಂತ ಜಾಸ್ತಿ ವರ್ಷ ಶಿಕ್ಷೆಗೆ ಒಳಗಾದ ಸಂಸದರು ಮತ್ತು ಶಾಸಕರ ಸದಸ್ಯತ್ವ ತಕ್ಷಣ ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ನಿರರ್ಥಕ ಗೊಳಿಸಲು ಪಟ್ಟು ಹಿಡಿದ ಕೇಂದ್ರ ಸಂಪುಟ, ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ. ಇದರ ಅನ್ವಯ ಶಿಕ್ಷೆಗೆ ಒಳಗಾದ ಸಂಸದ ಅಥವಾ ಶಾಸಕ ತೀರ್ಪು ಬಂದ 90 ದಿನಗಳ ಒಳಗೆ ಮೇಲಿನ ಕೋರ್ಟಿಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದರೆ ಸುಪ್ರೀಂ ಕೋರ್ಟಿನ ತೀರ್ಪು ಅನ್ವಯವಾಗದು.ಸುಪ್ರೀಂ ಕೋರ್ಟ್ ತೀರ್ಪಿನಿಂದ ಜನಪ್ರತಿನಿಧಿಗಳನ್ನು ರಕ್ಷಿಸುವ ಉದ್ದೇಶದಿಂದ ಜನಪ್ರತಿನಿಧಿ ಕಾಯ್ದೆಯ ಎರಡನೇ ತಿದ್ದುಪಡಿ ಮಸೂದೆ 2013ಕ್ಕೆ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲು ಸರ್ಕಾರ ವಿಫಲವಾಗಿತ್ತು. ಈಗ ಏಕಾಏಕಿ ಸುಗ್ರೀವಾಜ್ಞೆಯ ಮೂಲಕ ಕಳಂಕಿತರ ರಕ್ಷಣೆಗೆ ಕೇಂದ್ರ ಧಾವಿಸಲು ನಿರ್ಧರಿಸಿದೆ.ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ನ್ಯಾಯಾಲಯದಲ್ಲಿ ಎದುರಿಸುತ್ತಿರುವ ಪ್ರಕರಣದ ತೀರ್ಪು ಇನ್ನು ಒಂದು ವಾರದಲ್ಲಿ ಪ್ರಕಟವಾಗಲಿದೆ. ಅಲ್ಲದೆ ಭ್ರಷ್ಟಾಚಾರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ಸಂಸದ ರಶೀದ್‌ ಮಸೂದ್‌ ಅವರನ್ನು ರಕ್ಷಿಸುವ ಸದ್ಯದ ತುರ್ತು ಅಗತ್ಯ ಕೂಡಾ ಅದನ್ನು ಈ ಕ್ರಮಕ್ಕೆ ಮುಂದಾಗುವಂತೆ ಮಾಡಿದೆ.ಪ್ರಧಾನಿ ಮನಮೋಹನ್‌ ಸಿಂಗ್‌ ರಾಜಕೀಯ ಹಿನ್ನೆಲೆಯಿಂದ ಬಂದು ಪ್ರಧಾನಿ ಸ್ಥಾನವನ್ನು ಅಲಂಕರಿಸಿ ದವರಲ್ಲ. ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದಾಗ ಎಂದೂ ಕಳಂಕ ಹೊತ್ತವರಲ್ಲ. ರಾಜಕೀಯದಲ್ಲೂ ಅವರ ವಿರುದ್ಧ ವೈಯಕ್ತಿಕವಾಗಿ ಗುರುತರ ವಾದ ಭ್ರಷ್ಟಾಚಾರದ ಆರೋಪಗಳಿಲ್ಲ. ಆದರೆ ಅವರ ನೇತೃತ್ವದಲ್ಲಿ ಈಗ ಕಳಂಕಿತರ ರಕ್ಷಣೆಗೆ ಮುಂದಾಗಿರುವುದು ವಿಷಾದನೀಯ.ಭ್ರಷ್ಟಾಚಾರ ಸರ್ವವ್ಯಾಪಿಯಾಗಿರುವ ಈ ದಿನಗಳಲ್ಲಿ, ಅದರ ವಿರುದ್ಧದ ಅಭಿಯಾನ ಬಲಗೊಳ್ಳುತ್ತಿರುವಾಗಲೇ ಇಂತಹದೊಂದು ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ವಿಪರ್ಯಾಸ. ಕಳಂಕಿತ ನೇತಾರರ ಅಧಿಕಾರ ಸ್ಥಾನಗಳಿಗೆ ಚ್ಯುತಿ ತರುವಂತಹ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟ ವಾದಾಗ  ರಾಜಕೀಯ ವ್ಯವಸ್ಥೆಯ ಶುದ್ಧೀಕರಣ ಪ್ರಕ್ರಿಯೆಗೆ ಪೂರಕವಾಗುವ ಮಹತ್ವದ ತೀರ್ಪು ಇದು ಎಂದು ಅರ್ಥೈಸಲಾಗಿತ್ತು.ಅಪರಾಧ ಪ್ರಕರಣದಲ್ಲಿ ಶಿಕ್ಷೆಯಾದರೂ ಮೇಲ್ಮನವಿ ಸಲ್ಲಿಸಿ ಸದಸ್ಯರಾಗಿ ಮುಂದುವರಿಯಲು ಇದ್ದ ಅವಕಾಶ ವನ್ನು ನ್ಯಾಯಾಲಯದ ದ್ವಿಸದಸ್ಯ ಪೀಠ ರದ್ದುಗೊಳಿಸಿತ್ತು. ಇದು ಇನ್ನೊಂದು ಕಾರಣಕ್ಕೂ ಮಹತ್ವದ್ದಾಗಿತ್ತು. ಅದೇನೆಂದರೆ ಶಿಕ್ಷೆಗೆ ಒಳಗಾದ ಸಾಮಾನ್ಯ ನಾಗರಿಕ ಮತ್ತು ಜನಪ್ರತಿನಿಧಿ  ಕಾಯ್ದೆಯ ಅನ್ವಯ ವಿಶೇಷ ರಕ್ಷಣೆ ಪಡೆದ ಜನಪ್ರತಿನಿಧಿಗಳ ಮಧ್ಯೆ ಇದ್ದ ತಾರತಮ್ಯವನ್ನು ಹೋಗಲಾಡಿ ಸಿತ್ತು.ಇದು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ರಾಜಕಾರಣಿಗಳ ಎದೆಬಡಿತ ಹೆಚ್ಚಿಸಿತ್ತು. ಹಣಕಾಸಿನ ಬಲ ಮತ್ತು ತೋಳ್ಬಲ ಬಳಸಿ ರಾಜ ಕೀಯದಲ್ಲಿ ಮೆರೆಯಲು ಇರುವ ಅವಕಾಶ ತಪ್ಪಿಸಿದ ತೀರ್ಪಿನ ವಿರುದ್ಧ ಅಸ ಮಾಧಾನ ಹೊಂದಿದ ರಾಜಕಾರಣಿಗಳಿಗೆ ಸುಗ್ರೀವಾಜ್ಞೆ ವರದಾನವಾಗ ಲಿದೆ. ಆದರೆ ರಾಜಕೀಯ ಶುದ್ಧೀಕರಣ ಎದುರು ನೋಡುತ್ತಿರುವ ಆಶಾ ವಾದಿ ಮತದಾರರಿಗೆ ಈ ಬೆಳವಣಿಗೆ ಭಾರೀ ನಿರಾಸೆ ಉಂಟುಮಾಡುವಂತಹದ್ದು .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry