ಸಮರ್ಥ ನರ್ತನ, ಗಾಯನಕ್ಕೆ ಸಂದ ಪ್ರಶಂಸೆ

7

ಸಮರ್ಥ ನರ್ತನ, ಗಾಯನಕ್ಕೆ ಸಂದ ಪ್ರಶಂಸೆ

Published:
Updated:
ಸಮರ್ಥ ನರ್ತನ, ಗಾಯನಕ್ಕೆ ಸಂದ ಪ್ರಶಂಸೆ

ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎಂಬ ಮಾತಿದೆ. ಆ ಮಾತನ್ನು ಸಾರ್ಥಕಗೊಳಿಸುವಂತೆ ಯುವ ನರ್ತಕಿ ಮುದ್ರಾ ಧನಂಜಯ ಅವರು ಚೌಡಯ್ಯ ಸ್ಮಾರಕ ಭವನದಲ್ಲಿ ಗುರುವಾರ ತಮ್ಮ ಭರತನಾಟ್ಯ ಪ್ರದರ್ಶನವನ್ನು ನೀಡಿ ತುಂಬಿದ್ದ ರಸಿಕರ ಪ್ರಶಂಸೆಗೆ ಪದೇಪದೇ ಪಾತ್ರರಾದರು.ನುರಿತ ಹಾಗೂ ಹೆಸರುವಾಸಿಯಾಗಿರುವ ನಾಟ್ಯಾಂತರಂಗದ ರೂವಾರಿ, ಭರತನಾಟ್ಯ ಹಾಗೂ ಕಥಕ್ ಪ್ರವೀಣೆ, ನೃತ್ಯ ಸಂಯೋಜಕಿ, ಬೋಧಕಿ ಗುರು ಶುಭಾ ಧನಂಜಯ ಅವರ ಮಗಳು ಮತ್ತು ಶಿಷ್ಯೆಯಾಗಿ ಮುದ್ರಾ ಗಮನ ಸೆಳೆದರು.  ಸ್ಫುಟವಾಗಿ ಸಾಗಿದ ಚಲನೆಗಳು ಮತ್ತು ತನ್ಮಯದ ಅಭಿನಯದಿಂದ ಅವರು ಅವಿಸ್ಮರಣೀಯ ಛಾಪು ಮೂಡಿಸಿದರು. ವಿದ್ಯಾಭ್ಯಾಸದಲ್ಲೂ ಮುಂದಿರುವ ಮುದ್ರಾ ಕ್ರೀಡೆಯಲ್ಲೂ ಸಾಧನೆ ಗೈದಿದ್ದಾರೆ. ಅಚ್ಚುಕಟ್ಟಾಗಿ ಸಜ್ಜುಗೊಳಿಸಲಾಗಿದ್ದ ವೇದಿಕೆಯ ಮೇಲೆ ಇಟ್ಟ ಮೊದಲ ಹೆಜ್ಜೆಯಿಂದ ಹಿಡಿದು ಪ್ರದರ್ಶನದ ಕಡೆಯ ಐಟಂವರೆಗೆ ನಿರಾಯಾಸವಾಗಿ ಚಲಿಸಿ ತಾವು ನಿರೂಪಿಸಿದ ಪ್ರತಿಯೊಂದು ರಚನೆಗಾಗಿ ಅಭಿನಂದನೆ ಗಿಟ್ಟಿಸಿಕೊಂಡರು.ಗುರು ಶುಭಾ ಧನಂಜಯ (ನಟುವಾಂಗ) ಅವರ ಪ್ರೇರಕ ನೇತೃತ್ವದ ನೇಪಥ್ಯ ಸಹಕಾರದಲ್ಲಿ ಪಿ. ರಮಾ (ಗಾಯನ), ನಟರಾಜಮೂರ್ತಿ (ಪಿಟೀಲು), ನರಸಿಂಹಮೂರ್ತಿ (ಕೊಳಲು), ಶ್ರೀಹರಿ (ಮೃದಂಗ) ಮತ್ತು ಪ್ರಸನ್ನಕುಮಾರ್ (ಮೋರ್ಚಿಂಗ್) ಸಮಯೋಚಿತವಾಗಿ ಸ್ಪಂದಿಸಿದರು.

 

ಕಾರ್ಯಕ್ರಮದ ಆರಂಭವೇ ಸವಾಲೊಡ್ಡುವಂತಿತ್ತು. ದೇವಾಲಯಗಳಲ್ಲಿ ನಾಗಸ್ವರದಲ್ಲಿ ನುಡಿಸಲಾಗುವ ಮಲ್ಲಾರಿಯ ಪ್ರತಿಪಾದನೆ ಪ್ರಖರವಾಗಿತ್ತು. ಗಂಭೀರನಾಟ್ಯರಾಗದ ಮಲ್ಲಾರಿಯಲ್ಲಿ ಹೆಣೆಯಲಾಗಿದ್ದ ಬೇರೆಬೇರೆ ಕಾಲಗಳು ಮತ್ತು ಗತಿಗಳಲ್ಲಿದ್ದ ಕ್ಲಿಷ್ಟ ಜತಿ ಮತ್ತು ಮಾದರಿಗಳಿಗೆ ಸಮಾನ ರೂಪದ ಅಡವು ಮಾದರಿಗಳನ್ನು ತಮ್ಮ ನೃತ್ತದಲ್ಲಿ ಲೀಲಾಜಾಲವಾಗಿ ನಿರ್ವಹಿಸಿದರು.ಅಪೂರ್ವವಾದ ಹಂಸವಿನೋದಿನಿ ರಾಗದ `ಮಹಾಗಣೇಶಂ ಶ್ರೀಗಣನಾಥ~ ಕೃತಿಯ ಮೂಲಕ ಅಹಂಕಾರ ವಿನಾಶಕ ಗಣೇಶನನ್ನು ಸ್ತುತಿಸಿ ಮುನ್ನಡೆದ ಮುದ್ರಾ 3-4-7ರ ಮಾದರಿಯ ಅಲರಿಪ್ಪುವನ್ನು ಸುಂದರ ನೃತ್ತವನ್ನಾಗಿ ಮಂಡಿಸಿದರು. ಆಂದೋಳಿಕಾ ರಾಗದ ಜತಿಸ್ವರಕ್ಕೆ ಆಕರ್ಷಕ ಶುದ್ಧ ನತ್ತದ ಮೆರಗನ್ನು ನೀಡಲಾಯಿತು.ತಾಯಿಯಂತೆ ಮುದ್ರಾ ಅವರೂ ಪೇರಿಣೀ ನತ್ಯಕ್ಕೆ ಮನಸೋತಿರುವುದು ಶ್ಲಾಘನೀಯ. ಅಂದವಾಗಿ ಅಲಂಕರಿಸಿಲಾಗಿದ್ದ ಮಡಿಕೆಯ ಮೇಲೆ ನಿಂತು ನರ್ತಿಸುವುದು ಅದರ ವೈಶಿಷ್ಟ್ಯ. ಖಚಿತವಾದ ತಾಳ, ಲಯಜ್ಞಾನ ಮತ್ತು ಅವುಗಳ ಮೇಲಿನ ಹಿಡಿತದಿಂದ ಮಾತ್ರ ಮಾಡಬಹುದಾದಂತಹುದು.

 

ಕೂಚಿಪುಡಿ ನೃತ್ಯದಲ್ಲಿ ಹಿತ್ತಾಳೆ ತಟ್ಟೆ ಮತ್ತು ನೀರು ತುಂಬಿದ ಚೊಂಬನ್ನು ತಲೆಯ ಮೇಲಿಟ್ಟುಕೊಂಡು ಮಾಡುವಂತೆ ಪೇರಿಣೀ ನೃತ್ಯವೂ ವಿಶಿಷ್ಟವಾದುದು. ತಮ್ಮ ಮುಂದಿರುವ ಮಡಿಕೆಗೆ ವಂದಿಸಿ, ಅದರ ಮೇಲೆ ನಿಂತು ಸಂಕೀರ್ಣ ಜತಿಗಳನ್ನು ನಿರಾತಂಕವಾಗಿ ನರ್ತಿಸಿದ ಮುದ್ರಾ ದ್ವಾರಕೀ ಕೃಷ್ಣಸ್ವಾಮಿಯವರ ದೇವಿ ಶಾರದೆಯನ್ನು ಕುರಿತಾದ `ಸಕಲ ಕಲಾವಾಣಿಯೇ~ ರಚನೆಯನ್ನು ತಮ್ಮ ಉತ್ತಮ ಅಭಿನಯದ ಮೂಲಕ ಅರ್ಥೈಸಿದ ಪರಿ ಪ್ರಶಂಸನೀಯ.

 

ದೈಹಿಕ ಸಮತೋಲನದ ಜೊತೆಗೆ ಲಯ ಪ್ರಭುತ್ವ ಹಾಗೂ ಮಾಧ್ಯಮದ ಮೇಲಿನ ಹಿಡಿತ ಅಸಾಧಾರಣವಾಗಿತ್ತು. ಪ್ರಸನ್ನಕುಮಾರ್ ಮತ್ತು ಅವರ ನಡುವೆ ನಡೆದ ಲಯ ಸಂವಾದ ಖುಷಿ ಕೊಟ್ಟಿತು.ಗಣೇಶನ ಕಥೆಯ ವಿಷಯವಸ್ತುವನ್ನು ಹೊಂದಿರುವ ಅಪರೂಪದ ನಾಟ್ಟಿಕುರಂಜಿ ವರ್ಣದ (ವಾರಣ ಮುಖಂ) ಆಯ್ಕೆ ಬೆರಗನ್ನೂ ಕುತೂಹಲವನ್ನೂ ಮೂಡಿಸಿತು. ಗಣೇಶನ ಜನ್ಮ, ರಾವಣನ ಆತ್ಮಲಿಂಗ ಸನ್ನಿವೇಶ, ಗಣೇಶನು ತೋರಿದ ಮಾತಾ ಪಿತೃಗಳ ಪರಮತೆ, ವಲ್ಲಿ ಷಣ್ಮುಖ ವಿವಾಹ ಮುಂತಾದ ಘಟನೆಗಳನ್ನು ತಮ್ಮ ಸುಭಗವಾದ ಅಭಿನಯದಲ್ಲಿ ಮುದ್ರಾ ಮರುಕಳಿಸಿದರು.ಎಂದಿನಂತೆ ಚರಣ ಭಾಗವನ್ನು ದ್ರುತ ಕಾಲದಲ್ಲಿ ನಿರ್ವಹಿಸಿ ರಂಜಿಸಿದರು. ವಿರಾಮದ ನಂತರ ಸುಪರಿಚಿತ `ಭೋ ಶಂಭೋ~ (ರೇವತಿ) ಕೃತಿಯ ಮೂಲಕ ಶಿವನ ವಿವಿಧ ರೂಪಗಳು ಮತ್ತು ಕ್ರಿಯೆಗಳನ್ನು ಕ್ಲಿಷ್ಟಕರ ಕರಣಗಳ ಮೂಲಕ ಚಿತ್ರಿಸಿ ತಮ್ಮ ಕಲಾ ಕೌಶಲವನ್ನು ಅಭಿವ್ಯಕ್ತಗೊಳಿಸಿದರು.ಶ್ರೀಮಂತ ಗಾಯನ

ಬಹುಮುಖ ಪ್ರತಿಭೆಯ ನುರಿತ ಗಾಯಕಿ ಸಂಗೀತಾ ಶ್ರಿಕಿಶನ್ ಅವರು ರಾಜಾಜಿನಗರದ ಕುಮಾರವ್ಯಾಸ ಮಂಟಪದಲ್ಲಿ ಶ್ರಿ ವಿನಾಯಕ ಚೌತಿ ಮಹೋತ್ಸವ ಸಮಿತಿಯವರ ಗಣೇಶೋತ್ಸವ ಆಚರಣೆಯಲ್ಲಿ ಸೋಮವಾರ ಹಾಡಿದಾಗ ಅವರ ಗುರುಗಳಾದ ಹಿರಿಯ ಗಾಯಕಿ ಆರ್.ಎ. ರಮಾಮಣಿಯವರ ನೆನಪೇ ಮೂಡಿತು. ಆ ಶ್ರಿಮಂತ ಕಂಠ, ಪಲುಕುಗಳು, ತಾರ ಸ್ಥಾಯಿ ಸಂಚಾರ, ಲಯದ ಮೇಲಿನ ಗಟ್ಟಿ ಹಿಡಿತ ಮುಂತಾದ ವಿಶೇಷತೆಗಳಿಂದ ಅಂದಿನ ಸಂಜೆ ಸಂಗೀತಮಯವಾಯಿತು.ಅವರದ್ದು ವಿದ್ವತ್ತು ಮತ್ತು ಪರಿಣತಿಗಳ ಪ್ರಾಮಾಣಿಕ ಪ್ರದರ್ಶನವಾಗಿತ್ತು. ಅನುಭವಿ ಮೃದಂಗ ವಾದಕ ಸಿ. ಚೆಲುವರಾಜು ಅವರ ಪ್ರೇರಕ ಮತ್ತು ಔಚಿತ್ಯಪೂರ್ಣ ಮೃದಂಗ ಸಹಕಾರ, ಗುರುಮೂರ್ತಿ ಅವರ ಘಟ ಸಹವಾದನ ಹಾಗೂ ಮತ್ತೂರು ಶ್ರಿನಿಧಿ ಅವರ ಪಿಟೀಲು ವಾದನ ಸಂಗೀತ ಅವರ ಗಾಯನಕ್ಕೆ ಮೆರುಗು ನೀಡಿತು. ಚಿರಪರಿಚಿತ ವಾತಾಪಿ ಗಣಪತಿಂ ಭಜೆ ಕೀರ್ತನೆಯೊಂದಿಗೆ ಕಛೇರಿ ಆರಂಭಿಸಿದರು.

 

ತಮ್ಮ ಕಂಠಕ್ಕೆ ಸರಿ ಹೊಂದಿ ಸೊಗಸನ್ನುಂಟು ಮಾಡುವಂತಹ ಸಂಗತಿಗಳು ಹಂಸಧ್ವನಿ ರಾಗದ ವೈಭವವನ್ನು ಎತ್ತಿ ತೋರಿದವು. ಯಾವುದೇ ಅನಾವಶ್ಯಕ ಲಯ ಕಸರತ್ತುಗಳನ್ನು ಮಾಡದೆ ಅರ್ಥಪೂರ್ಣವಾಗಿ ಪ್ರಣವಸ್ವರೂಪ ಸಾಲಿನ ಸಾಹಿತ್ಯ ವಿಸ್ತಾರವನ್ನು ಮಾಡಿ ಆಕರ್ಷಕ ಹಾಗೂ ಚುರುಕಾಗಿದ್ದ ಸ್ವರ ವಿನ್ಯಾಸವನ್ನೂ ಮಾಡಿದರು.

 

ಶಿವರಂಜಿನಿ ರಾಗದಲ್ಲಿ ಗಣೇಶನ ಪರವಾದ ತಮಿಳು ಕೃತಿಯೊಂದನ್ನು ಹಾಡಿ ಪುರಂದರದಾಸರ ಗಜಮುಖನೆ ಸಿದ್ಧಿದಾಯಕನೆ ಪದವನ್ನು ನಾಟ ರಾಗದಲ್ಲಿ ಆದಿಯಲಿ ಗಜಮುಖನ ಅರ್ಚಿಸಿ ಉಗಾಭೋಗದೊಂದಿಗೆ ನಿರೂಪಿಸಿದರು.ಮುಂದಿನ ಕನಕದಾಸರ ಬಾರೋ ಕೃಷ್ಣಯ್ಯ ಚೇತೋಹಾರಿ ಲಯದಲ್ಲಿ  ಭಾವಪೂರ್ಣವಾಗಿ ಹೊಮ್ಮಿತು. ವಿರಳವಾದ ರಮಾಮನೋಹರಿ ರಾಗದ ಸವಿಸ್ತಾರ ಗಾಯನ ಸಂಗೀತಾ ಅವರ ನೈಪುಣ್ಯಕ್ಕೆ ಸಾಕ್ಷಿಯಾಯಿತು. ಈ ಪ್ರತಿಮಧ್ಯಮ ರಾಗವನ್ನು ಹಾಡಬೇಕಾದರೆ ಸಾಕಷ್ಟು ಪ್ರಾವೀಣ್ಯವಿರಬೇಕು.

 

ಸಂಗೀತಾ ಇಲ್ಲಿಯೂ ಯಶಸ್ಸು ಕಂಡರು. ಆಲಾಪನೆಯ ಗಾಂಭೀರ್ಯಕ್ಕೆ ತಕ್ಕಂತೆ ದೀಕ್ಷಿತರ ಮಾತಂಗಿ ಶ್ರಿ ರಾಜರಾಜೇಶ್ವರಿ ಕೀರ್ತನೆಯನ್ನು ವಿದ್ವತ್ಪೂರ್ಣವಾಗಿ ಹಾಡಲಾಯಿತು. ರಮಾಮನೋಹರಿ ರಾಕೇಂದು ಎಂಬ ಪಂಕ್ತಿಯಲ್ಲಿ  ಸಾರ್ಥಕ ನೆರೆವಲ್ ಮಾಡಿ 2 ಕಾಲಗಳಲ್ಲಿ ಸ್ವರ ಪ್ರಸ್ತಾರವನ್ನೂ ಮಾಡಿ ಆ ಕೀರ್ತನೆಯ ನಿರೂಪಣೆಯನ್ನು ಸಮಗ್ರಗೊಳಿಸಿದರು. ನಂತರದ ಶ್ರಿ ಜಾಲಂಧರಮಾಶ್ರಯಾಮ್ಯಹಂ ಕೀರ್ತನೆಯನ್ನು ಸ್ವಲ್ಪ ವಿಳಂಬಕಾಲದಲ್ಲಿ ಹಾಡಿದ್ದು, ಸರಸ್ವತಿಯನ್ನು ಕುರಿತಾದ ಕೃತಿ ಮನಮುಟ್ಟಿತು.ಅವರ ಕಛೇರಿಯ ಮತ್ತೊಂದು ಪ್ರಧಾನ ರಚನೆಯಾಗಿ ಮೂಡಿ ಬಂದಿದ್ದು ಸಿಂಹೇಂದ್ರಮಧ್ಯಮ ರಾಗದ ವಿಶಾಲವಾದ ವಿಶ್ಲೇಷಣೆ. ರಾಗಾಲಾಪನೆಯು ಮೂರು ಸ್ಥಾಯಿಗಳಲ್ಲಿ ಸಂಚರಿಸಿ ನಿನ್ನೆ ನಮ್ಮಿತಿನಯ್ಯ ಕೃತಿಯನ್ನು ವಿಪುಲವಾದ ಸಂಗತಿಗಳಿಂದ ಅಲಂಕರಿಸಿದರು.

 

ನಿರೀಕ್ಷೆಯಂತೆ ಪನ್ನಗೇಂದ್ರ ಶಯನ ಎಂಬಲ್ಲಿ ನೆರೆವಲ್ ಮಾಡಿ ಗಮನ ಸೆಳೆದದ್ದಲ್ಲದೆ ಸ್ವರ ವಿಸ್ತಾರದೊಂದಿಗೆ ಅದನ್ನು ಮುಗಿಸಿ ತನಿ ಆವರ್ತನಕ್ಕೆ ಅವಕಾಶ ಮಾಡಿಕೊಟ್ಟರು. ತನಿ ಆವರ್ತನದಲ್ಲಿ ಲಯವಾದ್ಯಗಾರರು ಮಿಂಚಿದ್ದೂ ಕಛೇರಿಯ ಮುಖ್ಯಾಂಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry