ಸಮರ್ಪಕ ನೀರು ಹರಿಸದಿದ್ದರೆ ಹೋರಾಟ ಅನಿವಾರ್ಯ

7

ಸಮರ್ಪಕ ನೀರು ಹರಿಸದಿದ್ದರೆ ಹೋರಾಟ ಅನಿವಾರ್ಯ

Published:
Updated:

ಲಿಂಗಸುಗೂರ: ನಾರಾಯಣಪುರ ಅಣೆಕಟ್ಟೆ ಅಚ್ಚುಕಟ್ಟು ಪ್ರದೇಶದ ನಾರಾಯಣಪುರ ಬಲದಂಡೆ ನಾಲೆ ಮತ್ತು ರಾಂಪೂರ ಏತ ನೀರಾವರಿಗೆ ಬೇಸಿಗೆ ಬೆಳೆಗೆ ಸಮರ್ಪಕ ನೀರು ಹರಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಭೂಪನಗೌಡ ನೇತೃತ್ವದ ತಂಡ ಮುಖ್ಯ ಎಂಜಿನಿಯರ್ ಸುದರ್ಶನ ಅವರನ್ನು ಕಂಡು ಮಾತುಕತೆ ನಡೆಸಿ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು.ಬುಧವಾರ ಸ್ಥಳೀಯ ಪ್ರವಾಸಿಮಂದಿರಕ್ಕೆ ಆಗಮಿಸಿದ್ದ ಮುಖ್ಯ ಎಂಜಿನಿಯರ್ ಅವರನ್ನು ಖುದ್ದು ಭೇಟಿ ಮಾಡಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಲಹಾ ಸಮಿತಿ ನಿರ್ಣಯದಂತೆ ಸಮರ್ಪಕ ನೀರು ಹರಿಸುವಲ್ಲಿ ಅಣೆಕಟ್ಟೆ ವಿಭಾಗ ವಿಫಲವಾಗಿದೆ. ಈ ಬಾರಿ ಎಷ್ಟು ಅವಧಿಗೆ ನೀರು ಹರಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು.ರೈತರ ಸಮಾಧಾನಕ್ಕೆ ತಪ್ಪು ಸಂದೇಶ ಬೇಕಿಲ್ಲ. ನೀರಿನ ಕೊರತೆ ಇದ್ದರೆ ಈಗಲೆ ಸ್ಪಷ್ಟವಾಗಿ ಹೇಳಿ. ರೈತರು ಕೂಡ ಎಚ್ಚರಿಕೆ ವಹಿಸುತ್ತಾರೆ ಎಂದು ಸುದೀರ್ಘ ಚರ್ಚೆ ನಡೆಸಿದರು. ಒಂದು ಗಂಟೆ ಕಾಲ ಸುದೀರ್ಘ ಚರ್ಚೆ ನಡೆಸಿದರು ಕೂಡ ಮುಖ್ಯ ಎಂಜಿನಿಯರ್ ಸುದರ್ಶನ ಅವರು, ಅಣೆಕಟ್ಟೆಯಲ್ಲಿ ನೀರಾವರಿಗೆ ಬಳಸಬಹುದಾದ ನೀರು ಉಳಿಸಿಕೊಂಡು ಉಳಿದಂತೆ ಸಂಪೂರ್ಣ ನೀರನ್ನು ಹರಿಸುತ್ತೇವೆ.

 

ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ. ಸಲಹಾ ಸಮಿತಿ ಸಭೆ ನಂತರವೆ ಸ್ಪಷ್ಟ ನಿರ್ಧಾರ ಪ್ರಕಟಿಸಲಾಗುವುದು. ಮುಂಗಾರು ಅವಧಿಗೆ ನೀರು ಬಿಡುವ ಅವಧಿ ಮುಕ್ತಾಯಗೊಂಡಿಲ್ಲ. ಮುಕ್ತಾಯ ಗೊಂಡ ನಂತರದಲ್ಲಿ ನೀರಿನ ಲಭ್ಯತೆ ಆಧರಿಸಿ ಸಮಿತಿ ನಿರ್ಣಯ ಕೈಗೊಳ್ಳಲಿದೆ ಎಂದು ಹಾರಿಕೆ ಉತ್ತರ ನೀಡುತ್ತ ಕಾಲಹರಣ ಮಾಡಿದರು.ಕೆಲ ಸಮಯ ಮುಖಂಡರು ಮತ್ತು ಅಧಿಕಾರಿ ಮಧ್ಯೆ ವಾಗ್ವಾದಗಳು ನಡೆದು ಸ್ಪಷ್ಟ ನಿರ್ಣಯಗಳೆ ಹೊರ ಬರದೆ ಹೋದಾಗ ಬೇಸತ್ತ ಮುಖಂಡರು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸ್ಪಷ್ಟ ಮಾಹಿತಿ ನೀಡುವಂತೆ ಪಟ್ಟು ಹಿಡಿದರು. ಆಗ ಆಲಮಟ್ಟಿಯ ಕೃಷ್ಣಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಜುಮ್ನಾಳ ಅವರನ್ನು ಸಂಪರ್ಕಿಸಿದಾಗ ಮಾರ್ಚ 25ರ ವರೆಗೆ ಬಿಡಬಹುದಾಗಿದೆ. ರೈತರಿಗೂ ಈ ಮಾಹಿತಿ ನೀಡಬಹುದು ಎಂಬ ಸ್ಪಷ್ಟ ಉತ್ತರ ದೊರೆಯಿತು. ಆದಾಗ್ಯೂ ಬೇಸಿಗೆ ಬೆಳೆಗೆ ಪೂರ್ಣ ಪ್ರಮಾಣದ ನೀರು ಸಿಗುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಮುಖಂಡರಾದ ಪಾಮಯ್ಯ ಮುರಾರಿ, ಬಸಣ್ಣ ಮೇಟಿ, ಶರಣಬಸವ ಮೇಟಿ, ಮಾನಪ್ಪ ಚವ್ಹಾಣ, ಶಿವನಗೌಡ ಪೊಲೀಸ್ ಪಾಟೀಲ, ಚೆನ್ನಾರೆಡ್ಡಿ ಬಿರಾದರ, ಎಇಇ ಪುರಾಣಿಕ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry