ಭಾನುವಾರ, ಡಿಸೆಂಬರ್ 8, 2019
25 °C

ಸಮರ್ಪಕ ಬಳಕೆಗೆ ಸಂಸದರ ನಿಧಿ – ರಮ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮರ್ಪಕ ಬಳಕೆಗೆ ಸಂಸದರ ನಿಧಿ – ರಮ್ಯಾ

ಮಂಡ್ಯ: ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ ತರುವಾಯ `ಸಂಸದರ ನಿಧಿ’ ಹಣವನ್ನು ಸಮರ್ಪಕವಾಗಿ ಹೇಗೆ ಬಳಸಬೇಕು ಎಂಬ ಬಗೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದು ಸಂಸತ್‌ ಸದಸ್ಯೆ ರಮ್ಯಾ (ದಿವ್ಯಾ ಸ್ಪಂದನಾ) ತಿಳಿಸಿದರು.ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಇಲಾಖಾವಾರು ಮಾಹಿತಿ ಪಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಂದಿನಿಂದಲೇ, ಮೂರು ದಿನ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಆ ಬಳಿಕವೇ ಸಂಸದರ ನಿಧಿಯನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.ಸೆಪ್ಟೆಂಬರ್ ತಿಂಗಳ ಬಳಿಕ ಪ್ರತಿ ವಾರದ ನಿಗದಿತ ದಿನದಂದು ಕಚೇರಿಯಲ್ಲಿದ್ದು, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ. ಸಾರ್ವಜನಿಕರು ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಭರವಸೆ ನೀಡಿದರು.ತನಿಖೆ ನಡೆದಿದೆ: ದಿ ಮೈಸೂರು ಸಕ್ಕರೆ ಕಂಪೆನಿ (ಮೈ ಷುಗರ್) ಕಾರ್ಖಾನೆಗೆ ಕಳೆದ 10 ವರ್ಷಗಳಲ್ಲಿ ಒಟ್ಟು ರೂ. 275 ಕೋಟಿ ಬಿಡುಗಡೆ ಆಗಿದ್ದು, ಹಣದ ಬಳಕೆ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.ಮೈ ಷುಗರ್ ಆಧುನೀಕರಣಕ್ಕೆ ಒಟ್ಟು ರೂ 49 ಕೋಟಿ ಹಣ ಬಿಡುಗಡೆ ಆಗಿದ್ದು, ಇದರಲ್ಲಿ ರೂ 45 ಕೋಟಿ ಬಳಕೆ ಆಗಿದೆ. ಆದರೂ, ಸಮರ್ಪಕವಾಗಿ ಆಧುನೀಕರಣ ಕೆಲಸಗಳು ನಡೆದಿಲ್ಲ ಎಂದರು.ಈ ಸಂಬಂಧ ‘ತಾಂತ್ರಿಕ ಸಲಹಾ ತಂಡ’ ರಚಿಸಲಾಗುವುದು. ಇನ್ನು ಮುಂದೆ, ಈ ತಂಡವೇ ಆಧುನೀಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಿದೆ ಎಂದು ಹೇಳಿದರು.ಪಾಂಡವಪುರ, ಕೆ.ಆರ್. ಪೇಟೆ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕಬ್ಬು ನುರಿಸುತ್ತಿವೆ. ಚಾಮುಂಡೇಶ್ವರಿ ಮತ್ತು ಮೈ ಷುಗರ್ ಕಾರ್ಖಾನೆಗಳೂ ಶೀಘ್ರವೇ ಕಬ್ಬು ನುರಿಸುವ ಕೆಲಸಕ್ಕೆ ಚಾಲನೆ ನೀಡಲಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹನಿ ನೀರಾವರಿಗೆ ಒತ್ತು: ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ, ಸಕಾಲದಲ್ಲಿ ಬರುತ್ತದೆ ಎನ್ನುವಂತಿಲ್ಲ. ಹೀಗಾಗಿ, ಹನಿ ನೀರಾವರಿ ಅಳವಡಿಸಿಕೊಳ್ಳಲು ರೈತರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.ಜಿಲ್ಲೆ ಕೃಷಿ ಪ್ರಧಾನವಾಗಿದ್ದರೂ, ಇಳುವರಿಯಲ್ಲಿ ಸಾಕಷ್ಟು ಕುಂಠಿತವಾಗಿದೆ. ರಾಸಾಯನಿಕ ಗೊಬ್ಬರದ ಬಳಕೆ ಹೆಚ್ಚಿದ್ದು, ಭೂಮಿಯ ಫಲವತ್ತತೆ ಕುಗ್ಗಿದೆ. ಕಬ್ಬು ಬೆಳೆಯಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳುವುದರ ಜತೆಗೆ ಬೆಳೆ ಪರಿವರ್ತನೆ ಮಾಡಿಕೊಳ್ಳಬೇಕಿದೆ. ಈ ಸಂಬಂಧ ರೈತರಿಗೆ ಅರಿವು ಮಾಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಲಿದ್ದಾರೆ ಎಂದರು.ಸರ್ಕಾರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಜನರಿಗೆ ತಲುಪಿಸುತ್ತಾರೆ ಎಂಬ ವಿಶ್ವಾಸ ಅಧಿಕಾರಿಗಳ ಮೇಲಿದೆ. ನನಗೇನೂ ಭಯವಿಲ್ಲ. ಮಹಿಳಾ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಖುಷಿಯಾಗಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿ.ಪಂ. ಸಿಇಒ ಪಿ.ಸಿ. ಜಯಣ್ಣ, ಮಂಡ್ಯ ಉಪ ವಿಭಾಗಾಧಿಕಾರಿ ಶಾಂತಾ ಎಸ್. ಹುಲ್ಮನಿ ಹಾಜರಿದ್ದರು.ಕೈ ಜೋಡಿಸಿ ನಮಸ್ಕರಿಸಿದರು...

ಮಂಡ್ಯ:
ಅಧಿಕಾರಿಗಳು ತಮ್ಮ ಪರಿಚಯ ಜೊತೆಗೆ ಇಲಾಖೆಯ ಕಾರ್ಯಕ್ರಮಗಳ ಕುರಿತು ಹೇಳುವ ಮೊದಲು ‘ನಮಸ್ಕಾರ’ ಎಂದು ಮಾತು ಆರಂಭಿಸಿದರೆ, ಇದಕ್ಕೆ ಪ್ರತಿಯಾಗಿ ಸಂಸದೆ ರಮ್ಯಾ ಅವರೂ ನಮಸ್ಕರಿಸಿ ಗಮನ ಸೆಳೆದರು.ಪ್ರತಿಯೊಬ್ಬ ಅಧಿಕಾರಿಯೂ ಹೀಗೆ ಹೇಳುವಾಗ ಸಂಸದರಾದ ರಮ್ಯಾ ಅವರು, ತಮ್ಮೆರಡು ಕೈಗಳನ್ನು ಜೋಡಿಸಿ ನಮಸ್ಕರಿಸಿ, ಹಸನ್ಮುಖರಾಗುತ್ತಿದ್ದರು. ಇದು, ಕೊನೆಯವರೆಗೂ ಮುಂದುವರಿಯಿತು.ಸಂಸತ್ ಸದಸ್ಯೆಯಾದ ಬಳಿಕ ಮೊದಲ ಸಭೆ ನಡೆಸಿದ ಅವರು, ಅಧಿಕಾರಿಗಳು ಹೇಳುವ ಮಾತುಗಳನ್ನೂ ಅಷ್ಟೇ ಗಂಭೀರದಿಂದ ಆಲಿಸಿ, ಟಿಪ್ಪಣಿ ಮಾಡಿಕೊಂಡರು.

 

ಪ್ರತಿಕ್ರಿಯಿಸಿ (+)