ಸಮರ್ಪಕ ಬಳಕೆ ಆಗದ ಸಂಸದರ ಅನುದಾನ

7

ಸಮರ್ಪಕ ಬಳಕೆ ಆಗದ ಸಂಸದರ ಅನುದಾನ

Published:
Updated:

ರಾಯಚೂರು: ಕೇಂದ್ರ ಸರ್ಕಾರದಿಂದ ಸಮರ್ಪಕ ಅನುದಾನ ಕಲ್ಪಿಸಿದರೂ ಆಡಳಿತ ವರ್ಗದ ನಿರ್ಲಕ್ಷ್ಯ ಧೋರಣೆಯಿಂದ ಅನುಷ್ಠಾನಗೊಳ್ಳದ ಯೋಜನೆ... ಪೂರ್ವ ಮಾಹಿತಿ ಕಲ್ಪಿಸಿದ್ದರೂ ಸಭೆಗೆ ಹಾಜರಾಗದ ಅಧಿಕಾರಿಗಳು... ಹಲವು ಯೋಜನೆಗಳ ಕುರಿತು ಇಲಾಖೆಗಳ ದಾಖಲೆಯಲ್ಲೆ ತಪ್ಪು ಅಂಕಿ ಅಂಶಗಳು...ಇವು ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯತ ಕಚೇರಿ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತ ಸಮಿತಿ ಸಭೆಯಲ್ಲಿ ರಾಯಚೂರು ಲೋಕಸಭಾ ಸದಸ್ಯ ಎಸ್. ಫಕ್ಕೀರಪ್ಪ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯ  ಶಿವರಾಮೇಗೌಡ ಅವರು ಆಕ್ರೋಶಕ್ಕೆ ಕಾರಣವಾದ ಅಂಶಗಳು.ಶಿಕ್ಷಣ, ಗ್ರಾಮೀಣ ಪ್ರದೇಶಕ್ಕೆ ಕುಡಿವ ನೀರು ಪೂರೈಕೆಗೆ, ಪೌಷ್ಟಿಕ ಆಹಾರ ಪೂರೈಕೆಗೆ, ಆರೋಗ್ಯ ಇಲಾಖೆಗೆ ಕೇಂದ್ರ ಸರ್ಕಾರದಿಂದ ಸಂಸದರ ನಿಧಿಯಡಿ ದೊರಕಿಸಿದ ಅನುದಾನ ಸದ್ಭಳಕೆ ಮಾಡುವ ಪ್ರಯತ್ನ ಆಡಳಿತ ಯಂತ್ರದಿಂದ ಆಗಿಲ್ಲದಿರುವುದಕ್ಕೆ ಸಭೆಯಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.ಪೂರ್ವ ಮಾಹಿತಿ ಇದ್ದರೂ ಜಾಗೃತಿ ಸಮಿತಿ ಸಭೆಗೆ ಆಗಮಿಸಿದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಇಲಾಖೆಯ ಮುಖ್ಯ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಗೈರು ಹಾಜರಿದ್ದದಕ್ಕೆ ಸಂಸದರು ಕೆಂಡಾಮಂಡಲವಾದರು.ಸಭೆಯ ನಡೆಯುವುದೇ ಹಲವು ತಿಂಗಳುಗಳ ಬಳಿಕ ಪೂರ್ವ ಮಾಹಿತಿ ಇದ್ದರೂ ಸಹ ಸಭೆಗೆ ತಾವು ಬರದೇ ಸಹಾಯಕ ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ಕಳುಹಿಸಿದ್ದಾರೆ. ಹೀಗಾದರೆ ಹೇಗೆ? ಸಭೆಗೆ ದೊರಕಿಸಿದ ದಾಖಲೆ ಕೈಪಿಡಿಯಲ್ಲೂ ಮಾಹಿತಿ ಸಮರ್ಪಕವಾಗಿಲ್ಲ.ಕ್ರಮ ಏನು ಎಂದು ಉಭಯ ಸಂಸದರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಜೈನ್ ಹಾಗೂ ಪ್ರಭಾರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್ ಅವರನ್ನು ಪ್ರಶ್ನಿಸಿದರು.ಎಚ್ಚರಿಕೆ: ಪೂರ್ವ ಮಾಹಿತಿ ಇದ್ದರೂ ಸಭೇ ಬಾರದೇ ಇರುವ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಂದಿನ ಸಭೆಗೆ ಬಾರದೇ ಇರುವ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಹೇಳಿದರು.ಪೌಷ್ಟಿಕ ಆಹಾರ ಪೂರೈಕೆ ಮತ್ತು ಪೌಷ್ಟಿಕತೆ ಕೊರತೆಗೆ ಪ್ರಮುಖ ಕಾರಣಗಳನ್ನು ಪತ್ತೆ ಮಾಡುವ ದಿಶೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇನ್ನೂ ಹೆಚ್ಚಿನ ಕಾಳಜಿವಹಿಸಬೇಕು. ಸಮಸ್ಯೆಗೆ ಕಾರಣವಾದ ಅಂಶ ಗುರುತಿಸಿ ಪರಿಹಾರ ಕೈಗೊಳ್ಳಬೇಕು ಎಂದು ಸಂಸದ ಶಿವರಾಮೇಗೌಡ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿಗೆ ಸೂಚಿಸಿದರು.ಲಿಂಗಸುಗೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ, ಮಾನ್ವಿ ತಾಲ್ಲೂಕಿನ ಕುರ್ಡಿ ಮತ್ತು ಕಲ್ಲೂರು ಗ್ರಾಮಗಳಿಗೆ ಕುಡಿಯುವ ಪೂರೈಕೆ ಯೋಜನೆ ಸಿದ್ಧಪಡಿಸಲಾಗಿದೆ. ಕುರ್ಡಿ ಮತ್ತು ಕಲ್ಲೂರು ಗ್ರಾಮದಲ್ಲಿ ಜಾಗೆ ಲಭ್ಯವಿಲ್ಲ. ಜಾಗೆ ದೊರಕಿದರೆ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.ಪ್ರಭಾರಿ ಜಿಲ್ಲಾಧಿಕಾರಿ ಮದನಕರ್ ಅವರು ಮಾತನಾಡಿ, ಜಿಲ್ಲಾಡಳಿತದಿಂದ 3 ಲಕ್ಷ ಅನುದಾನ ದೊರಕಿಸಲು ಅವಕಾಶವಿದೆ. ಜಾಗೆಗೆ ಒಂದೊಂದು ಗ್ರಾಮದಲ್ಲಿ 38 ಲಕ್ಷ ಅಗತ್ಯತೆ ಇರುವ ಬಗ್ಗೆ ಪ್ರಸ್ತಾವನೆ ಇದೆ. ಇದನ್ನು ಸರ್ಕಾರದ ಗಮನಕ್ಕೆ ತಂದು ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲೆಯಲ್ಲಿ ಹೊಸ ಆಸ್ಪತ್ರೆ ಎಲ್ಲಿ ನಿರ್ಮಿಸಲಾಗುತ್ತಿದೆ ಎಂಬ ಮಾಹಿತಿ ಇಲ್ಲದಿರುವುದು, ಎನ್‌ಆರ್‌ಎಚ್‌ಎಂ ಯೋಜನೆಯಡಿ ಕೈಗೊಂಡ ಕಾರ್ಯಗಳ ಬಗ್ಗೆ ಅಂಕಿಅಂಶಗಳು ಹೇರಾಪೇರಿ ಆಗಿರುವುದಕ್ಕೆ ಸಂಸದ ಶಿವರಾಮೇಗೌಡ ಅತೃಪ್ತಿ ವ್ಯಕ್ತಪಡಿಸಿದರು.ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರದೇಶದ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಅಗತ್ಯವಿದೆಯೇ ಎಂದು ಸಂಸದ ಶಿವರಾಮೇಗೌಡ ಅವರು ಡಿಡಿಪಿಐ ಅವರನ್ನು ಪ್ರಶ್ನಿಸಿದಾಗ, ಇಲ್ಲ ಎಂಬ ಉತ್ತರ ದೊರಕಿತು.ಕೆಂಡಾಮಂಡಲವಾದ ಜಿಪಂ ಸಿಇಒ ಮನೋಜಕುಮಾರ ಜೈನ್, ಸುಪ್ರೀಂ ಕೋರ್ಟ್ ಆದೇಶವಿದೆ. ಶಾಲೆಯಲ್ಲಿ ಶೌಚಾಲಯ ಕಡ್ಡಾಯ ನಿರ್ಮಾಣ ಮಾಡಬೇಕು. ಬರೀ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೆಳ ಹಂತದ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಉತ್ತರಿಸಬೇಡಿ. ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದಾಗ ಸಂಸದ ಶಿವರಾಮೇಗೌಡ ಸಮಾಧಾನಗೊಂಡರು.ಪ್ಲೋರೈಡ್‌ಯುಕ್ತ ನೀರು, ಆರ್ಸೆನಿಕ್ ಅಂಶ ಇರುವ ನೀರು ಇರುವ ಪ್ರದೇಶದಲ್ಲಿ ಶುದ್ಧ ನೀರು ಪೂರೈಕೆಗೆ ಸಮೂಹ ಸಂಸ್ಥೆ, ಪಶ್ಚಿಮ ಬಂಗಾಲ ವಿವಿಯ ತಜ್ಞರ ತಂಡದ ಜೊತೆ ಸೇರಿ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಕರ್ಚಿನಲ್ಲಿ, ಒಟ್ಟು ಸಮುದಾಯಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಲಾಗಿದೆ.ಈಚೆಗೆ ಕಾರ್ಯಾಗಾರವನ್ನೂ ನಡೆಸಲಾಗಿದೆ. ಈಗಾಗಲೇ ಪಾಮನಕಲ್ಲೂರು ಸೇರಿದಂತೆ ಎರಡು ಗ್ರಾಮದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ ಎಂದು ಜಿಪಂ ಸಿಇಒ ಮನೋಜಕುಮಾರ ಜೈನ್ ವಿವರಿಸಿದರು.ಪಶ್ಚಿಮ ಬೆಂಗಾಲ ವಿವಿ ತಜ್ಞರಿಗಿಂತ ಜಿಲ್ಲಾ ಕೇಂದ್ರದಲ್ಲಿಯೇ ನೀರು ಪರಿಶೀಲನೆ ಮಾಡಿ ವರದಿ ಕೊಡಲು ಇಲಾಖೆಯೇ ಇದೆ. ಕೃಷಿ ವಿವಿ ಇದೆ. ಅಲ್ಲಿನ ತಜ್ಞರ ನೆರವು ಪಡೆದುಕೊಳ್ಳಬೇಕು ಎಂದು ಶಾಸಕ ಸಯ್ಯದ್ ಯಾಸಿನ್ ಸಭೆಯ ಗಮನಕ್ಕೆ ತಂದರು.ಸಾಮಾಜಿಕ ಅರಣ್ಯ ಇಲಾಖೆಯು ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಂಡ ಬಗ್ಗೆ ಮಾತ್ರ ಮಾಹಿತಿ ನೀಡಿದೆ. ಯಾವ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ಪೂರ್ಣ ಮಾಹಿತಿ ಇಲ್ಲ. ಅದೇ ರೀತಿ ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆ ಮಾಹಿತಿಯೂ ಹಾಗೆ.

 

ಕಾಮಗಾರಿ ವಿವರವನ್ನೇ ಕೈಪಿಡಿಯಲ್ಲಿ ದೊರಕಿಸದಿದ್ದರೆ ಹೇಗೆ? ನಿಮ್ಮಿಷ್ಟದಂತೆ ಸಿದ್ದಪಡಿಸಿದ ದಾಖಲೆ, ನೀವು ಹೇಳಿದ ಮಾಹಿತಿಯೇ ಸರಿಯೇ? ಎಂದು ತರಾಟೆಗೆ ತೆಗೆದುಕೊಂಡರು.ದುಡ್ಡಿದೆ ಕೆಲಸ ಮಾಡುತ್ತಿಲ್ಲ. ಕೇವಲ ಒಂದು ತಿಂಗಳಲ್ಲಿ ಅನುದಾನ ಕರ್ಚು ಮಾಡುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಸಂಸದರ ನಿಧಿಯಡಿ ಕೋಟ್ಯಂತರ ಅನುದಾನ ದೊರಕುತ್ತದೆ. ಇಲಾಖೆಗಳ ಅಧಿಕಾರಿಗಳು ಯೋಜನೆ ರೂಪಿಸಿ ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಉತ್ತರಿಸಲು ಸಭೆಗೂ ಬಂದಿಲ್ಲ. ಈ ರೀತಿ ಸಭೆಯಿಂದ ಪ್ರಯೋಜನವಿಲ್ಲ. ಸಭೆ ಮುಂದೂಡಬೇಕು.

 

ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಯ್ಯದ್ ಯಾಸಿನ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ಜಿಪಂ ಅಧ್ಯಕ್ಷೆ ತನ್ವೀರಾ ಬಷಿರುದ್ದೀನ್, ಜಿಪಂ ಸಿಇಒ ಮನೋಜಕುಮಾರ ಜೈನ್, ಉಪ ಕಾರ್ಯದರ್ಶಿ ಮಹಮ್ಮದ್ ಯೂಸೂಫ್, ಪ್ರಭಾರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry