ಸಮರ್ಪಕ ರಸಗೊಬ್ಬರ ಪೂರೈಕೆಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳವಾರ, ಜೂಲೈ 23, 2019
25 °C

ಸಮರ್ಪಕ ರಸಗೊಬ್ಬರ ಪೂರೈಕೆಗೆ ಜಿಲ್ಲಾಧಿಕಾರಿ ಸೂಚನೆ

Published:
Updated:

ಮಡಿಕೇರಿ: ಜಿಲ್ಲೆಯಲ್ಲಿ ರೈತರಿಗೆ ಯಾವುದೇ ರೀತಿ ಯಲ್ಲೂ ರಸಗೊಬ್ಬರ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಸೂಚನೆ ನೀಡಿದ್ದಾರೆ.ತಮ್ಮ ಕಚೇರಿಯಲ್ಲಿ ಬುಧವಾರ ಕೃಷಿ, ತೋಟಗಾರಿಕೆ, ಸಾರಿಗೆ ಮತ್ತು ಸಹಕಾರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಚಂದ್ರೇಗೌಡ ಅವರು, ಜಿಲ್ಲೆಗೆ ನಿಗದಿಪಡಿಸಿರುವಷ್ಟು ರಸಗೊಬ್ಬರವನ್ನು ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ತರಿಸಿಕೊಂಡು ವಿತರಿಸಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಷ್ಟು ಬಿತ್ತನೆ ಬೀಜ ಲಭ್ಯವಿದೆ. ಇದು ಸುಲಭವಾಗಿ ರೈತರಿಗೆ ದೊರೆಯಬೇಕು ಮತ್ತು ಈಗಾಗಲೇ ಹಲವೆಡೆ ಉತ್ತಮ ಮಳೆಯಾಗದೆ, ಮುಂಗಾರು ಪ್ರಾರಂಭ ಹಂತ ತಲುಪಿದೆ. ರೈತರು ತೋಟ, ಹೊಲಗದ್ದೆಗಳಿಗೆ ಗೊಬ್ಬರ ಹಾಕಲು ಇದು ಸಕಾಲವಾಗಿರುವುದರಿಂದ ಕೊರತೆಯಾಗದಂತೆ ಎಚ್ಚರವಹಿಸಿ ಎಂದು ಅವರು ಹೇಳಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮತ್ತು ಸಹಕಾರ ಸಂಘಗಳ ಉಪ ನಿಬಂಧಕರು ಮುಂದಾಳತ್ವ ವಹಿಸಿ, ದಾಸ್ತಾನು ಕೇಂದ್ರಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ರಸಗೊಬ್ಬರವನ್ನು ಜಿಲ್ಲೆಗೆ ತರಿಸಿಕೊಳ್ಳಬೇಕು. ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು. ವಾಹನ ಬಾಡಿಗೆದಾರರಿಗೂ ನಷ್ಟವಾಗದಂತೆ ರೈತರಿಗೂ ಸುಲಭವಾಗಿ ಗೊಬ್ಬರ ದೊರೆಯುವಂತೆ ವ್ಯವಸ್ಥೆ ಕೈಗೊಳ್ಳಿ ಎಂದು ಅವರು ನಿರ್ದೇಶನ ನೀಡಿದರು.ಜಂಟಿ ಕೃಷಿ ನಿರ್ದೇಶಕರಾದ ದೇವದಾಸ್ ಮಾತನಾಡಿ, ಮೇ ತಿಂಗಳಿನಲ್ಲಿ ನಿಗದಿಪಡಿಸಿದ್ದ 9789 ಟನ್ ರಸ ಗೊಬ್ಬರವನ್ನು ಈಗಾಗಲೇ ಬಹುತೇಕ ಎತ್ತುವಳಿ ಮಾಡಿ ಬೇಡಿಕೆ ಸಲ್ಲಿಸಿದ ಸಹಕಾರ ಸಂಸ್ಥೆಗಳು ಇದನ್ನು ಪಡೆದಿವೆ. ಜೂನ್ ತಿಂಗಳಿನಲ್ಲಿ ನಿಗದಿ ಪಡಿಸಿದ್ದ 10258 ಟನ್ ರಸಗೊಬ್ಬರ ವಿವಿಧ ಉಗ್ರಾಣಗಳಿಗೆ ಪೂರೈಕೆ ಮಾಡಲಾಗಿದೆ ಎಂದರು.ಇದರಲ್ಲಿ ಕುಶಾಲನಗರದ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿಯಲ್ಲಿ 800 ಟನ್, ರಾಜ್ಯ ಉಗ್ರಾಣದಲ್ಲಿ 657 ಟನ್ ಮೈಸೂರಿನ ಶಾಂತಿ ಉಗ್ರಾಣದಲ್ಲಿ 1058 ಟನ್ ಮತ್ತು ಬಾಲಾಜಿ ಉಗ್ರಾಣದಲ್ಲಿ 899 ಟನ್ ಹಾಗೂ ಹಾಸನದ ರಾಜ್ಯ ಉಗ್ರಾಣದಲ್ಲಿ 6844 ಟನ್ ರಸಗೊಬ್ಬರ ಲಭ್ಯವಿದೆ.ಮೈಸೂರಿನ ಉಗ್ರಾಣದಿಂದ ರಸಗೊಬ್ಬರ ಸಂಪೂರ್ಣ ಎತ್ತುವಳಿ ಮಾಡಲಾಗಿದ್ದು, ಹಾಸನದಿಂದ ಮಾತ್ರ ವಾಹನಗಳ ತೊಂದರೆಯಿಂದ ಸಾಗಾಣಿಕಗೆ ಅಡ್ಡಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ರಸಗೊಬ್ಬರ ನಿರಂತರ ವಿತರಣೆಯಾಗುತ್ತಿದ್ದು, ಈಗಾಗಲೇ 960 ಟನ್ ರಸಗೊಬ್ಬರ ಮಾರಾಟವಾಗಿದೆ ಎಂದು ದೇವದಾಸ್ ಸಭೆಯ ಗಮನಕ್ಕೆ ತಂದರು.ರಸಗೊಬ್ಬರ ದಾಸ್ತಾನು ವಿವರ: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ, ಕುಶಾಲನಗರ 800 ಟನ್, ರಾಜ್ಯ ಉಗ್ರಾಣ, ಕುಶಾಲನಗರ 657 ಟನ್, ಶಾಂತಿ ಉಗ್ರಾಣ, ಮೈಸೂರು 1058, ಬಾಲಾಜಿ ಉಗ್ರಾಣ, ಮೈಸೂರು 899, ರಾಜ್ಯ ಉಗ್ರಾಣ, ಹಾಸನ 6844 ಟನ್, ಒಟ್ಟು 10258 ಟನ್ ರಸಗೊಬ್ಬರ ದಾಸ್ತಾನು ಇದೆ.ಈ ಎಲ್ಲಾ ರಸಗೊಬ್ಬರಗಳು ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿ, ಕುಶಾಲನಗರ ಮುಖಾಂತರ ಕೊಡಗು ಜಿಲ್ಲೆಯ ವ್ಯಾಪ್ತಿಯ ಸಹಕಾರ ಸಂಘಗಳಿಗೆ ಹಂಚಿಕೆ ಮಾಡಲಾಗುವುದು. ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಯವರು ತಮ್ಮ ಸಹಕಾರ ಸಂಘಗಳಿಗೆ ನಿಗದಿಪಡಿಸಿದ ಪ್ರಮಾಣದ ರಸಗೊಬ್ಬರಕ್ಕೆ ಹಣ ಪಾವತಿಸಿ ರಸಗೊಬ್ಬರಗಳನ್ನು ವಿವಿಧ ಉಗ್ರಾಣಗಳಿಂದ ಸಾರಿಗೆ (ಲಾರಿ) ವ್ಯವಸ್ಥೆಯೊಂದಿಗೆ ತಮ್ಮ ಸಿಬ್ಬಂದಿಯನ್ನು ಬಿಡುಗಡೆ ಪತ್ರದೊಂದಿಗೆ ಕಳುಹಿಸಿ ದಾಸ್ತಾನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.ಇಪ್ಕೋ ಸಂಸ್ಥೆಯಿಂದ 20:20:0:13 ಮತ್ತು ಯೂರಿಯಾ ರಸಗೊಬ್ಬರ 1500 ಟನ್ ಮತ್ತು ಕೋರಮಂಡಲ ಫರ್ಟಿಲೆ ರಸ್ಸ್ ಸಂಸ್ಥೆಯವರು 500 ಟನ್ ಸರಬರಾಜು ಮಾಡಲು ಒಪ್ಪಿದ್ದು, ದಾಸ್ತಾನು ಬಂದ ತಕ್ಷಣ ಎಲ್ಲಾ ಸಹಕಾರ ಸಂಘಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.ಬಿತ್ತನೆ ಬೀಜ ದಾಸ್ತಾನು: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಈ ಕೆಳಕಂಡ ಸಹಕಾರ ಸಂಘಗಳಲ್ಲಿ ವಿವಿಧ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.ರೈತರು ಪ್ರತಿ ಕೆ.ಜಿ. ಮುಸುಕಿನ ಜೋಳಕ್ಕೆ ರೂ.30/- ಸಹಾಯ ಧನದಲ್ಲಿ ಪಡೆದುಕೊಳ್ಳುವುದು. ರೈತರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಬಿತ್ತನೆ ಬೀಜ ಪಡೆಯಲು ಚೀಟಿ ಪಡೆದು ಸಹಕಾರ ಸಂಘಗಳಿಂದ ಬಿತ್ತನೆ ಬೀಜ ಪಡೆದುಕೊಳ್ಳಲು ತಿಳಿಸಲಾಗಿದೆ. ಪ್ರತಿ ರೈತರಿಗೆ ಅವರ ಹಿಡುವಳಿಗೆ ಅನುಗುಣ ವಾಗಿ ಅಥವಾ 2 ಹೆಕ್ಟೇರ್‌ಗೆ ಮೀರದಂತೆ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು.ಮುಸುಕಿನ ಜೋಳದ ದಾಸ್ತಾನು:  ಗುಡ್ಡೆ ಹೊಸೂರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಲ್ಲಿ 60.70 ಕ್ವಿಂಟಾಲ್, ಕುಶಾಲನಗರ ಎ.ಪಿ.ಸಿ.ಎಂ.ಎಸ್. ನಲ್ಲಿ 77.70 ಕ್ವಿಂಟಾಲ್, ಕೂಡಿಗೆಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಲ್ಲಿ 65.90 ಕ್ವಿಂಟಾಲ್, ತೊರೆನೂರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಲ್ಲಿ  169.10 ಕ್ವಿಂಟಾಲ್,  ಸೋಮವಾರ ಪೇಟೆಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಲ್ಲಿ 48.90 ಕ್ವಿಂಟಾಲ್ ಹಾಗೂ ಶನಿವಾರಸಂತೆಯ ಎ.ಪಿ.ಸಿ.ಎಂ.ಎಸ್. ನಲ್ಲಿ 27.10  ಸೇರಿದಂತೆ ಒಟ್ಟು 449.40 ಕ್ವಿಂಟಾಲ್‌ಗಳಷ್ಟ್ಟು ದಾಸ್ತಾನು ಇದೆ ಎಂದು ಅವರು ತಿಳಿಸಿದ್ದಾರೆ.ಸಭೆಯಲ್ಲಿ ಹಾಜರಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹಮ್ಮದ್ ಹಬೀಬುಲ್ಲಾ, ಸಹಕಾರ ಸಂಘಗಳ ಉಪ ನಿಬಂಧಕರಾದ ವೆಂಕಟಸ್ವಾಮಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಿವಸ್ವಾಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry