ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

7

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ಶ್ರೀನಿವಾಸಪುರ: ತಾಲ್ಲೂಕಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಸರ್ಕಾರವನ್ನು ಆಗ್ರಹಿಸಿ ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು ಹೂಹಳ್ಳಿ ಉಪ ವಿದ್ಯುತ್ ವಿತರಣಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.ಯುವ ಕಾಂಗ್ರೆಸ್‌ನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಜೆ.ಎನ್.ನವೀನ್‌ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ತೋಟದ ಬೆಳೆಗಳು ಒಣಗುತ್ತಿವೆ. ಜನ, ಜಾನುವಾರು ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಪ್ರಮಾಣ ತೀರಾ ಕಡಿಮೆಯಾಗಿದೆ ಎಂದು ಹೇಳಿದರು.ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಾಡುತ್ತಿದೆ. ಖರೀದಿಸಲೂ ಸಹ ಒಣ ಮೇವು ಸಿಗುತ್ತಿಲ್ಲ. ಇಂಥ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಬರದೆ ಕೈಕಟ್ಟಿ ಕುಳಿತಿದೆ. ಬರದಿಂದಾಗಿ ಈಗಾಗಲೇ ನೆಲ ಕಚ್ಚಿರುವ ರೈತರಿಂದ ವಿದ್ಯುತ್ ಬಾಕಿ ವಸೂಲಿಗೆ ಮುಂದಾಗಿದೆ ಎಂದು ಆರೋಪಿಸಿದರು.ತಾಲ್ಲೂಕಿನಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಪರಿಹರಿಸದಿದ್ದರೆ ಯುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದು. ತನ್ನ ಹೋರಾಟಕ್ಕೆ ಸಮಾಜದ ಎಲ್ಲ ವರ್ಗದ ಜನರ ಬೆಂಬಲವಿದೆ ಎಂದು ಹೇಳಿದರು.ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ಉಪ ವಿದ್ಯುತ್ ವಿತರಣಾ ಕೇಂದ್ರದ ಸಮೀಪ ಹಾದು ಹೋಗುವ ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿದರು. ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಅವರ ಪ್ರತಿಕೃತಿ ದಹಿಸಿದರು. ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ರಸ್ತೆ ತಡೆ ಹಿಂದಕ್ಕೆ ಪಡೆಯುವಂತೆ ಕಾರ್ಯಕರ್ತರ ಮನವೊಲಿಸುವಲ್ಲಿ ಯಸ್ವಿಯಾದರು.ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಬೆಸ್ಕಾಂ ಇಂಜಿನಿಯರ್‌ಗೆ ನೀಡಿದರು. ಮುಖಂಡರಾದ ಬಾಬು, ಚೌಡಪ್ಪ, ರವಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry