ಶನಿವಾರ, ಮೇ 8, 2021
18 °C

ಸಮರ್ಪಕ ವಿದ್ಯುತ್ ಪೂರೈಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ಹೆಸ್ಕಾಂ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆ ಮಾಡುವತ್ತ ಗಮನ ಹರಿಸಬೇಕು. ವಿದ್ಯುತ್ ಪೂರೈಕೆಯಲ್ಲಿ ನೆಪ ಹೇಳದೆ  ತಾಲ್ಲೂಕಿನಾದ್ಯಂತ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದು, ಕೊರತೆ ನೀಗಿಸುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.ಸ್ಥಳೀಯ ತಾ.ಪಂ ಸಭಾಭವನದಲ್ಲಿ ಗುರುವಾರ ಸಂಜೆ ಜರುಗಿದ ತಾ.ಪಂ 15ನೇ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.ನಿಡಗುಂದಿ ಗ್ರಾಮ ಹೋಬಳಿ ಇಲ್ಲ ಎಂದು ಕೃಷಿ ಅಧಿಕಾರಿ ಎಸ್.ಎಚ್.ರಕ್ಕಸಗಿ ಹೇಳಿದಾಗ, ಶಾಸಕರು ನಿಡಗುಂದಿ ಹೋಬಳಿಯೇ ಅಲ್ಲ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಹಿಂದಿನ ಸರಕಾರ ಹೇಗೆ ಮುಂದಾಯಿತು ಎಂದು ಅಚ್ಚರಿಪಟ್ಟ ಅವರು ಶೀಘ್ರದಲ್ಲೇ ನಿಡಗುಂದಿ, ಮನಗೂಳಿ ಎರಡು ಗ್ರಾಮಗಳನ್ನು ಹೋಬಳಿ ಗ್ರಾಮಗಳನ್ನಾಗಿ ಮಾಡಬೇಕು ಎಂದು ತಹಶೀಲ್ದಾರ್ ಅಪರ್ಣಾ ಪಾವಟೆ ಅವರಿಗೆ ಸೂಚಿಸಿದರು.ಎರಡು ಗ್ರಾಮಗಳು ಹೋಬಳಿ ಆದಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪನೆಯಾಗಿ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುತ್ತದೆ ಎಂದರು. ನಿಜವಾದ ಕಡುಬಡವರನ್ನು ಗುರುತಿಸಿ ಅವರಿಗೆ ಸಮರ್ಪಕವಾಗಿ ಪಡಿತರ ಚೀಟಿ  ವಿತರಣೆ ಮಾಡಬೇಕು. ಅವುಗಳು ಶ್ರೀಮಂತರ ಪಾಲಾದರೆ ಅಂತಹ ಅಧಿಕಾರಿಗಳ ಮಿರುದ್ಧ ನಿರ್ದಾಕ್ಷಿಣ ಕ್ರಮ ಜರುಗಿಸಲಾಗುವುದು.ಈ ಹಿಂದೆ ನಿಜವಾದ ಕಡು ಬಡವರಿಗೆ ಸಿಗಬೇಕಾದ ಪಡಿತರ ಕಾರ್ಡುಗಳು ಸಿಗದೆ ಶ್ರೀಮಂತರ ಪಾಲಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಜುಲೈ 1ರಿಂದ ಕಡುಬಡವರಿಗೆ ಸರಕಾರ ಪ್ರತಿ ಕೆ.ಜಿ.ಗೆ 1 ರೂಪಾಯಿಂತೆ 30 ಕೆ.ಜೆ ಅಕ್ಕಿ ನೀಡಲು ಮುಂದಾಗಿದೆ. ಕಂದಾಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.ಸಿಬ್ಬಂದಿ ಕೊರತೆ ಅನುಭವಿಸುತ್ತಿರುವ ಇಲಾಖೆ ತಕ್ಷಣ ಗಮನಕ್ಕೆ ತಂದರೆ ಕೊರತೆ ಇರುವ ಇಲಾಖೆಗೆ ಸಂಬಂಧಿಸಿದ ಸಿಬ್ಬಂದಿ ನೇಮಕ ಮಾಡಲಾಗುವುದು. ಕೇವಲ ಸಭೆ ಮಾಡುವುದರಿಂದ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಪ್ರತಿ ಅಧಿಕಾರಿ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಅರಿತು ಕಟ್ಟು ನಿಟ್ಟಾಗಿ ಕೆಲಸ ಮಾಡಬೇಕು. ಮುಂದಿನ ಸಭೆಯ ಐದು ದಿನ ಮುನ್ನ  ಎಲ್ಲ ಇಲಾಖೆಯ ಅಧಿಕಾರಿಗಳು ಪ್ರಗತಿ ಪತ್ರ ನೀಡಬೇಕು ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.ತಾ.ಪಂ ಅಧ್ಯಕ್ಷೆ ರೇಣುಕಾ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿ.ಪಂ ಸದಸ್ಯರಾದ ಚಂದ್ರಶೇಖರಗೌಡ ಪಾಟೀಲ, ಶಿವಾನಂದ ಅವಟಿ, ವಿಠಲ ಪವಾರ, ತಹಶೀಲ್ದಾರ್ ಅಪರ್ಣಾ ಪಾವಟೆ, ತಾ.ಪಂ ಅಧಿಕಾರಿ ರಾಜಕುಮಾರ ತೊರವಿ ಮುಂತಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.