ಶುಕ್ರವಾರ, ಏಪ್ರಿಲ್ 3, 2020
19 °C

ಸಮವಸ್ತ್ರದ ಅನುದಾನ ವಾಪಸ್- ಸಚಿವರ ಬೇಜವಾಬ್ದಾರಿ ಕಾರಣ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸಲು ಕೇಂದ್ರ ಸರ್ಕಾರ ನೀಡಿದ್ದ 88 ಕೋಟಿ ರೂಪಾಯಿ ಅನುದಾನ ವಾಪಸ್ ಹೋಗಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜವಳಿ ಸಚಿವ ವರ್ತೂರು ಪ್ರಕಾಶ್ ಅವರ ಬೇಜವಾಬ್ದಾರಿಯುತ ವರ್ತನೆಯೇ ಕಾರಣ ಎಂದು ಅಖಿಲ ಕರ್ನಾಟಕ ನೇಕಾರರ ವೇದಿಕೆ ಆರೋಪಿಸಿದೆ.ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳಿಗೆ ಕೇಂದ್ರ ಸರ್ಕಾರದ ವತಿಯಿಂದ ಒಂದು ಜೊತೆ ಸಮವಸ್ತ್ರ ಒದಗಿಸಲು ರೂ 88 ಕೋಟಿ ಅನುದಾನ ನೀಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಹೊಂದಾಣಿಕೆ ಅನುದಾನವನ್ನು ಬಿಡುಗಡೆ ಮಾಡದೇ ಲೋಪ ಎಸಗಿರುವುದರಿಂದ ಕೇಂದ್ರದ ಹಣ ಬಳಕೆಯಾಗಿಲ್ಲ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಗಂಜಿ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ. ಕೇಂದ್ರದ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿದ್ದರೆ ಲಕ್ಷಾಂತರ ಮಕ್ಕಳಿಗೆ ಉಚಿತ ಸಮವಸ್ತ್ರ ದೊರೆಯುತ್ತಿತ್ತು. ಸಮವಸ್ತ್ರದ ಬಟ್ಟೆಯನ್ನು ನೇಕಾರರಿಂದ ಖರೀದಿಸುತ್ತಿದ್ದರಿಂದ ಅವರಿಗೂ ಅನುಕೂಲವಾಗುತ್ತಿತ್ತು.ಆದರೆ, ಶಿಕ್ಷಣ ಮತ್ತು ಜವಳಿ ಸಚಿವರು ಸಕಾಲಕ್ಕೆ ಕ್ರಮ ಕೈಗೊಳ್ಳದೇ ಇದ್ದುದರಿಂದ ವಿದ್ಯಾರ್ಥಿಗಳು ಮತ್ತು ನೇಕಾರರಿಗೆ ಅನ್ಯಾಯವಾಗಿದೆ. ಇದಕ್ಕೆ ಸಚಿವರೇ ಹೊಣೆ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)